Kannada NewsKarnataka NewsLatest

*ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಸಿ*

ಸಚಿವ ರಾಮಲಿಂಗಾ ರಡ್ಡಿಗೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಪದಾಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಲು ಧಾರ್ಮಿಕ ದತ್ತಿ ಇಲಾಖೆಯ ಸಚಿವಾರದ ಶ್ರೀ. ರಾಮಲಿಂಗ ರೆಡ್ಡಿಯವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ್ ಗೌಡ, ಬ್ರಹ್ಮರ್ಷಿ ಆನಂದ ಸಿದ್ಧಿಪೀಠಂನ ಡಾ. ಮಹರ್ಷಿ ಆನಂದ ಗುರೂಜೀ, ಆನೇಕಲ್ ಮುಜರಾಯಿ ದೇವಾಲಯಗಳ ಅರ್ಚಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೂರ್ಯನಾರಾಯಣ ದೀಕ್ಷಿತ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಂಘದ ಉಪಾಧ್ಯಕ್ಷ ರಾಘವೇಂದ್ರ ಭಟ್, ಧಾರ್ಮಿಕ ಚಿಂತಕರಾದ ಶ್ರೀ. ಪ್ರಣವ ಶರ್ಮಾ ಗುರೂಜೀ, ರಾಜಾಜಿನಗರದ ವಾಸವಿ, ಶ್ರೀ ಸಾಯಿ ಬಾಬಾ ದೇವಸ್ಥಾನದ ಅಧ್ಯಕ್ಷ ಎ ಎಸ್ ಎನ್ ಗುಪ್ತಾ, ದಾಸನಪುರದ ಶ್ರೀ ಪದ್ಮಾವತಿ ರಮಾನುಜ ಪೀಠಂ ಉಪಾಧ್ಯಕ್ಷ ಎಸ್ ಜಯರಾಮ, ಆನಂದ್ ರಾವ್ ಸರ್ಕಲ್ ನ ಶ್ರೀ ನಾಗಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮಹಾದೇವ, ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಕೃಷ್ಣಸ್ವಾಮಿ, ನಾರಾಯಣಘಟ್ಟದ ಶ್ರೀ ಚೌಡೇಶ್ವರಿ ದೇವಸ್ಥಾನದ ಸೊಮೇಶ್ ರೆಡ್ಡಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಉಪಸ್ಥಿತರಿದ್ದರು.

ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ `ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಯನ್ನು ಅಳವಡಿಸುವ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಚರ್ಚೆ ಮಾಡಿ ಅನುಷ್ಠಾನಗೊಳಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಮನವಿಯಲ್ಲಿ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ದೇವಸ್ಥಾನಗಳಲ್ಲಿ ಪ್ರತ್ಯಕ್ಷ ದೇವತೆಗಳು ವಾಸ ಮಾಡುವುದರಿಂದ ಅನಾಧಿ ಕಾಲದಿಂದ ದೇವಸ್ಥಾನಗಳು ಹಿಂದೂ ಧರ್ಮದ ಸಂಸ್ಕೃತಿ, ಆಚಾರ, ವಿಚಾರ, ಕಲೆ, ಪರಂಪರೆಗಳ ಸಂರಕ್ಷಣೆಯ ಮಹಾನ್ ಕಾರ್ಯವನ್ನು ಮಾಡುತ್ತಿದೆ. ಇದರಿಂದ ಇಂದಿಗೂ ಹಿಂದೂ ಸಮಾಜವು ಧರ್ಮ ಸಂಸ್ಕೃತಿಯಿಂದ ಸಂರಕ್ಷಿಸಲ್ಪಟ್ಟಿದೆ. ದೇವಸ್ಥಾನಗಳಲ್ಲಿ ನಮ್ಮ ಪೂರ್ವಜರು ಧರ್ಮಾಚಾರ್ಯರು, ಸಂತರು, ಧರ್ಮದರ್ಶಿಗಳು, ಅರ್ಚಕರು ಪ್ರತಿನಿತ್ಯ ಆಗಮ ಶಾಸ್ತ್ರ ಪ್ರಕಾರ ಮಾಡುವ ಧಾರ್ಮಿಕ ವಿಧಿ-ವಿಧಾನ, ಪೂಜೆಗಳಿಂದ ಇಂದಿಗೂ ದೇವಸ್ಥಾನಗಳು
ದೇವತೆಗಳ ಸಾತ್ತ್ವಿಕತೆ, ಚೈತನ್ಯವು ಅಸ್ತಿತ್ವದಲ್ಲಿದೆ.

ದೇವಸ್ಥಾನಗಳ ಚೈತನ್ಯದಿಂದ ಇಂದಿಗೂ ಲಕ್ಷಾಂತರ ಭಕ್ತರು ದೇವಸ್ಥಾನಗಳಿಗೆ ಬರುತ್ತಾರೆ ಮತ್ತು ದೇವಸ್ಥಾನಗಳು ಭಕ್ತರಿಗೆ ಮಾನಸಿಕ ನೆಮ್ಮದಿ, ಶಾಂತಿ, ಸಾತ್ತ್ವಿಕತೆಯನ್ನು ನೀಡುವ ಹಾಗೂ ಅವರ ಅನೇಕ ಸಂಕಷ್ಟಗಳಿಗೆ ಪರಿಹಾರ ನೀಡುವ ಕೇಂದ್ರವಾಗಿ ಕಾರ್ಯ ಮಾಡುತ್ತಿದೆ. ಈ ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಸಾತ್ತ್ವಿಕತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ, ಧರ್ಮದರ್ಶಿಗಳ, ಅರ್ಚಕರ ಧರ್ಮಕರ್ತವ್ಯವಾಗಿದೆ. ಆದರೆ ಜನರು ಆಧುನಿಕ ಪಾಶ್ಚಿಮಾತ್ಯ ಜಗತ್ತಿಗೆ ಮಾರು ಹೋಗಿ ಮತ್ತು ಧರ್ಮ ಶಿಕ್ಷಣದ ಅಭಾವದಿಂದ ದೇವಸ್ಥಾನಗಳಿಗೆ ಬರುವಾಗ ಪಾಶ್ಚಾತ್ಯ ಅಸಭ್ಯ ಉಡುಪುಗಳನ್ನು ಧರಿಸಿ ಬರುವುದು ಗಮನಕ್ಕೆ ಬರುತ್ತದೆ. ಈ ಅಸಭ್ಯ ವಿದೇಶಿ ರೀತಿಯ ಉಡುಪುಗಳು ರಜ-ತಮ ಪ್ರಧಾನವಾಗಿದ್ದು, ದೇವಸ್ಥಾನಗಳ ಸಾತ್ತ್ವಿಕತೆ ಮತ್ತು ಪರಂಪರೆಯ ಮೇಲೆ ಗಂಭೀರ ಪರಿಣಾಮ ಆಗುತ್ತದೆ. ಅದಲ್ಲದೇ ದೇವಸ್ಥಾನಗಳಿಗೆ ಬರುವ ಅನ್ಯ ಆಸ್ತಿಕ ಭಕ್ತರ ಆಧ್ಯಾತ್ಮಿಕ ಸಾಧನೆಗೆ ಅಡಚಣೆ ಆಗುತ್ತದೆ. ಹಾಗಾಗಿ ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಬರುತ್ತಿದೆ.

ಈಗಾಗಲೇ ರಾಷ್ಟ್ರದ ಅನೇಕ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಅಳವಡಿಸಲಾಗಿದೆ. ಅದರಿಂದಲೇ ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಇಂದು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ಸಹ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಅಳವಡಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಧಾರ್ಮಿಕ ಪರಿಷತ್‌ನಲ್ಲಿ ಸಹ ರಾಜ್ಯದ 211 ಎ ಗ್ರೇಡ್ ದೇವಸ್ಥಾನಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ.

ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲ, ಕುಕ್ಕೆ ಸುಬ್ರಮ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರಸಂಹಿತೆ ಜಾರಿ ಮಾಡಿದೆ. ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್‌ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಹಾಗೂ ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಬಳಕೆಯನ್ನು ನೀಷೇಧ ಮಾಡಿದೆ. ಇದೇ ರೀತಿಯ ವಸ್ತ್ರ ಸಂಹಿತೆಯನ್ನ್ನು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಅಳವಡಿಸಲು ವಿಶೇಷ ಸುತ್ತೋಲೆಯನ್ನು ಹೊರಡಿಸಬೇಕೆಂದು ಮಾನ್ಯ ಸಚಿವರಲ್ಲಿ ವಿನಂತಿಯನ್ನು ಮಾಡಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button