*ಎಸ್ಟಿ ಪಂಗಡದ ಕಲ್ಯಾಣಕ್ಕೆ ಶ್ರಮಿಸದ ನೀಚ ಪಕ್ಷ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ವಾಗ್ದಾಳಿ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣಕ್ಕೆ ಕಾಂಗ್ರೆಸ್ ಏನೂ ಶ್ರಮ ವಹಿಸಿಲ್ಲ. ಭಗವಾನ್ ಬಿರ್ಸಾ ಮುಂಡಾ ಯಾರು ಎಂಬುದನ್ನೇ ಮರೆತು ಹೋಗುವಂತೆ ಮಾಡಿದ್ದ ನೀಚ ಪಾರ್ಟಿ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರು ನಗರದಲ್ಲಿ ಇಂದು ನಡೆದ ಬಿಜೆಪಿ ಎಸ್ಟಿ ಸಮಾವೇಶದಲ್ಲಿ ಮಾತನಾಡಿದ ಸಚಿವರು, ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪರಿಶಿಷ್ಟರ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎಂದು ಹರಿಹಾಯ್ದರು.
ದೇಶದ ಜನಕ್ಕೆ ಬಿರ್ಸಾ ಮುಂಡಾ ಯಾರು? ಎಂಬುದೇ ಮರೆತು ಹೋಗಿತ್ತು. ಅವರನ್ನು ಮರೆತು ಹೋಗುವಂತೆ ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಭಗವಾನ್ ಬಿರ್ಸಾ ಮುಂಡಾ ಅವರು ಬ್ರಿಟಿಷರ ನಿದ್ದೆಗೆಡಿಸಿದ್ದ ಪರಿಶಿಷ್ಟ ಪಂಗಡದವರು, ಆದಿವಾಸಿಗಳ ನೇತೃತ್ವ ವಹಿಸಿದ್ದರು ಎಂದು ಜೋಶಿ ಸ್ಮರಿಸಿದರು.
ಎಲ್ಲಾ ಜನರನ್ನ ಗುರುತಿಸಿ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಎಸ್ಟಿ ಪಂಗಡಕ್ಕೆ ಸೇರಿದ ಹಿಂದುಳಿದ ಪ್ರದೇಶದಲ್ಲಿದ್ದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದೇ ಬಿಜೆಪಿ ಎಂದು ಪ್ರತಿಪಾದಿಸಿದರು.
ಮೀಸಲಾತಿ ವಿಚಾರ ಪ್ರಸ್ತಾಪಿಸಿದ ಜೋಶಿ ಅವರು, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಇದ್ದಾಗ ಎಸ್ಸಿ-ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಿದ್ದೇವೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಿದ ಬಗ್ಗೆ ಪ್ರಸ್ತಾಪಿಸಿದ ಜೋಶಿ, ಕಾನೂನು, ಸಂವಿಧಾನ ಪ್ರಕಾರ ಬೊಮ್ಮಾಯಿ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡಿದೆ. ಮುಂದೆ ನಮ್ಮ ಜವಾಬ್ದಾರಿ ಇದ್ದರೆ ಮಾಡುತ್ತೇವೆ. ಸರ್ಕಾರ ಕೊಟ್ಟ ಪ್ರಸ್ತಾವನೆ ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಮುದ್ರಾ ಯೋಜನೆಯಡಿ ಎಸ್ಟಿ-ಎಸ್ಸಿ ಸಮುದಾಯದವರಿಗೆ ಶೇ.50ರಷ್ಟು ಸಾಲ ಸಿಕ್ಕಿದೆ. ಏಕಲವ್ಯ ಶಾಲೆಯನ್ನ ನಿರ್ಲಕ್ಷ್ಯ ಮಾಡಲಾಗಿತ್ತು. ಇದನ್ನು ಗಮನಿಸಿ 38 ಸಾವಿರ ಶಿಕ್ಷಕರನ್ನು ನೇಮಿಸಿದ್ದು ನರೇಂದ್ರ ಮೋದಿ ಸರ್ಕಾರ ಎಂದರು.
ಪ್ರಧಾನಿ ಜನ್ ಮನ್ ಯೋಜನೆಯಲ್ಲಿ 24 ಸಾವಿರ ಕೊಟ್ಟು ಸ್ಕೂಲ್, ನೀರು ಮೂಲಭೂತ ಸೌಕರ್ಯ ಕೊಟ್ಟು ನ್ಯಾಯ ನೀಡಿದ್ದು ಪ್ರಧಾನಿ ಮೋದಿಯವರು ಎಂದು ಪ್ರತಿಪಾದಿಸಿದರು.
ಬಿಜೆಪಿ ಯಾವತ್ತೂ ಎಸ್ಸಿ – ಎಸ್ಟಿ ಸಮುದಾಯದವರ ಕಲ್ಯಾಣಕ್ಕೆ ಕಟಿಬದ್ಧವಾಗಿದೆ. ಸಮುದಾಯದವರು
ಎಲ್ಲಿ ತಪ್ಪಿದೆ ಎಂಬುದರ ಆತ್ಮವಿಮರ್ಶೆ ಮಾಡಿಕೊಂಡು ಅದನ್ನ ಸರಿಪಡಿಸಿಕೊಂಡು ಹೋಗಬೇಕು ಎಂದು ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದರು.
ಅಪಹಾಸ್ಯ ಮಾಡುವವರಿಗೆ ಪಾಠ ಕಲಿಸಿ: ಶ್ರೀರಾಮನ ಪ್ರಾಣ ಪ್ರತಿಷ್ಥಾಪನೆ ನಡೆಯುವ ಸಮಯದಲ್ಲಿ ಅಪಹಾಸ್ಯ ಮಾಡುವವರಿಗೆ ತಕ್ಕಪಾಠ ಕಲಿಸಬೇಕಿದೆ ಎಂದು ಪ್ರಹ್ಲಾದ ಜೋಶಿ ಕರೆ ನೀಡಿದರು.
ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ರಾಜಕಾರಣ ಜನರಿಗೆ ಅರ್ಥವಾಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಆರ್ಥಿಕ ಕ್ರಾಂತಿ: ದೇಶದಲ್ಲಿ ಬಹುದೊಡ್ಡ ಬೆಳವಣಿಗೆ ನಡೆಯುತ್ತಿದೆ. ಆರ್ಥಿಕವಾಗಿ ಬಹುದೊಡ್ಡ ಹೆಜ್ಜೆ ಇಡುತ್ತಿದ್ದೇವೆ. ನೂರು ಲಕ್ಷ ಕೋಟಿಯನ್ನ ಇನ್ಫ್ರಾಸ್ಟಕ್ಚರ್ಗೆ ಅನುದಾನ ಕೊಟ್ಟು ಕೆಲಸ ಮಾಡಿದೆ. 10 ವರ್ಷಗಳಲ್ಲಿ ಏನಾಗಿದೆ? ಎಂದು ಪ್ರಶ್ನಿಸುವವರಿಗೆ ಇಂತಹ ಸಾಕಷ್ಟು ಉದಾಹರಣೆಗಳು ಇವೆ ಎಂದರು.
ಅಂದು ಭಾರತವನ್ನು ದುರ್ಬಲ ರಾಷ್ಟ್ರ ಎಂದೇ ಪರಿಗಣಿಸಲಾಗಿತ್ತು. ಆದರೆ, ಇಂದು ಜಗತ್ತಿನ ಪ್ರಬಲ 5ನೇ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಸಮರ್ಥಿಸಿಕೊಂಡರು.
21ನೇ ಶತಮಾನ ಭಾರತದ ಶತಮಾನವಾಗಲಿದೆ. ವಿಕಸಿತ ಭಾರತ ಆಗಲು “ರೋಡ್ ಮ್ಯಾಪ್” ಪ್ರಧಾನಿ ಮೋದಿ ಬಳಿ ಇದೆ. ಜನರಲ್ಲಿ ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಅದನ್ನ ಸರಿಪಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ