Kannada NewsKarnataka NewsLatest

ಸಂತ್ರಸ್ತರಿಗೆ ದೇವಸ್ಥಾನಗಳಿಂದ ಒಟ್ಟು 22 ಸಾವಿರ ಸೀರೆಗಳು

ಸಂತ್ರಸ್ತರಿಗೆ ದೇವಸ್ಥಾನಗಳಿಂದ ಒಟ್ಟು 22 ಸಾವಿರ ಸೀರೆಗಳು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ ಸೇರಿದಂತೆ ರಾಜ್ಯದ ವಿವಿಧ ದೇವಸ್ಥಾನಗಳು ಜಿಲ್ಲೆಯ ಪ್ರವಾಹಬಾಧಿತ ಸಂತ್ರಸ್ತರಿಗೆ ಇಪ್ಪತ್ತೆರಡು ಸಾವಿರ ಸೀರೆಗಳನ್ನು ಕಳುಹಿಸಲಾಗಿದೆ.
ರೇಣುಕಾ ಎಲ್ಲಮ್ಮ ದೇವಸ್ಥಾನದಿಂದ 5 ಸಾವಿರ ಮತ್ತು ಗುಲ್ಬರ್ಗದ ಘತ್ತರಗಿ ಭಾಗ್ಯವಂತಿ ದೇವಸ್ಥಾನ ಕಳುಹಿಸಿದ ಒಂದು ಸಾವಿರ ಸೀರೆಗಳನ್ನು ಜಿಲ್ಲಾಡಳಿತಕ್ಕೆ ಸೋಮವಾರ (ಆ.12) ನೀಡಲಾಯಿತು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಸೀರೆಗಳ ಬಂಡಲ್ ಗಳನ್ನು ಸ್ವೀಕರಿಸಿ, ಜಿಲ್ಲಾ ಕಚೇರಿಯಿಂದ ಆರಂಭಿಸಲಾಗಿರುವ ಸಾಮಗ್ರಿಗಳ ಸಂಗ್ರಹಣಾ ಕೇಂದ್ರಕ್ಕೆ ಒಪ್ಪಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಾದ ಸಿ.ಪಿ.ಶೈಲಜಾ ಅವರ ನಿರ್ದೇಶನದ ಮೇರೆಗೆ ರಾಜ್ಯದ ಪ್ರಮುಖ ದೇವಾಲಯಗಳು ಸೀರೆಗಳನ್ನು ಸಂತ್ರಸ್ತರಿಗೆ ಕಳುಹಿಸಿಕೊಟ್ಟಿವೆ. ಅದರಂತೆ ಸವದತ್ತಿಯ ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನದಿಂದ 5 ಸಾವಿರ ಸೀರೆಗಳನ್ನು ನೀಡಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಮುಜರಾಯಿ ತಹಶೀಲ್ದಾರ ಮಂಜುನಾಥ್ ವಾಲಿ ಮತ್ತಿತರರು ಉಪಸ್ಥಿತರಿದ್ದರು.
ಸಂತ್ರಸ್ತರಿಗೆ 22 ಸಾವಿರ ಸೀರೆಗಳು:
ಜಿಲ್ಲೆಯಲ್ಲಿ ಪ್ರವಾಹ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ರಾಜ್ಯದ  ವಿವಿಧ ದೇವಸ್ಥಾನಗಳಿಂದ ಸುಮಾರು  22 ಸಾವಿರ ಸೀರೆಗಳನ್ನು ಕಳುಹಿಸಿಕೊಡಲಾಗಿದೆ.
ಬೆಂಗಳೂರು, ಮೈಸೂರು, ರಾಮನಗರ, ಹಾಸನ, ಚಿತ್ರದುರ್ಗ, ಕೋಲಾರ ಮತ್ತು ಮಂಡ್ಯ ಜಿಲ್ಲೆಯ ದೇವಸ್ಥಾನಗಳಿಂದ 8978 ಸೀರೆಗಳು ಬಂದಿವೆ.
ಉಡುಪಿ ಹಾಗೂ ಮಂಗಳೂರಿನಿಂದ 3500; ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯಿಂದ 3500 ಸೀರೆಗಳು ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗಾಗಿ ಬಂದಿವೆ.
ಈ ಸೀರೆಗಳನ್ನು ಜಿಲ್ಲಾಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಾಮಗ್ರಿಗಳ ಸಂಗ್ರಹಣಾ ಕೇಂದ್ರಕ್ಕೆ ನೀಡಲಾಗುತ್ತಿದ್ದು, ಅಲ್ಲಿಂದ ವಿವಿಧ ತಾಲ್ಲೂಕಿನಲ್ಲಿರುವ ಪರಿಹಾರ ವಿತರಣಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ ಎಂದು ರವಿ ಕೋಟಾರಗಸ್ತಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button