350 ಕೋಟಿ ವೆಚ್ಚದಲ್ಲಿ ಫ್ಲೈಓವರ್, 200 ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ: ಸಚಿವ ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಪರಕೀಯರ ಆಡಳಿತದಲ್ಲಿದ್ದ ಭಾರತವು ಕೇವಲ ೭೫ ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ ಎಂದು ಲೋಕೋಪಯೊಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ (ಜ.೨೬) ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಸಂದೇಶ ನೀಡಿದರು.
ಸಂವಿಧಾನ ಜಾರಿಗೆ ಬಂದ ಈ ಅಮೃತಗಳಿಗೆಯಲ್ಲಿ ನಮ್ಮ ಭಾರತ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗಣರಾಜ್ಯೋತ್ಸವ ದಿನವಾದ ಇಂದಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾವನ್ನು ಸರಕಾರ ಹಮ್ಮಿಕೊಂಡಿದೆ.
ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವು ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಿದೆ.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಸಮಾವೇಶ ೨೫ನೇ ಫೆಬ್ರುವರಿ ೨೦೨೪ ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಜನವರಿ ೧೮, ೨೦೨೪ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಇಡೀ ಜಗತ್ತಿಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕು ನೀಡಿದ ವಚನ ಚಳವಳಿಯ ನಾಯಕ ಬಸವಣ್ಣನವರನ್ನು ನಮ್ಮ ಸರ್ಕಾರವು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಾಗರೀಕ ಪೊಲೀಸ್ ಪಡೆ, ಕೆ.ಎಸ್.ಆರ್.ಪಿ ಪುರುಷ ಮತ್ತು ಮಹಿಳಾ ತುಕಡಿ, ಅಬಕಾರಿ ಇಲಾಖೆ, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ ಮಹೇಶ್ವರಿ ಅಂದ ಮಕ್ಕಳ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳು ಪರೇಡನಲ್ಲಿ ಭಾಗವಹಿಸಿದ್ದವು.
ಸಂಸದೆ ಮಂಗಳಾ ಅಂಗಡಿ, ಬೆಳಗಾವಿ ಉತ್ತರ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ, ಕುಡಚಿ ಶಾಸಕ ಮಹೇಶ್ ತಮ್ಮಣ್ಣವರ, ಪ್ರಾದೇಶಿಕ ಆಯಕ್ತ ಸಂಜಯ ಶೆಟ್ಟೇಣ್ಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೋಲಿಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿ.ಪಂ ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾಪೌರರು ಶೋಭಾ ಸೋಮನಾಚೆ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶ:
ಆದರಣೀಯರೇ, ಬೆಳಗಾವಿ ಜಿಲ್ಲೆಯ ಸಮಸ್ತ ನಾಗರೀಕರೇ,
ಭಾರತ ರಾಷ್ಟ್ರವು ಗಣರಾಜ್ಯವೆಂದು ೧೯೫೦ರ ಜನವರಿ ೨೬ರಂದು ಘೋಷಿಸಿಕೊಂಡಿತು. ಸ್ವಾತಂತ್ರ್ಯದ ಅಮೃತ ಘಳಿಗೆಯಲ್ಲಿ ಇಂದು ಆಚರಿಸಲಾಗುತ್ತಿರುವ ೭೫ನೇ ಗಣರಾಜೋತ್ಸವದ ಶುಭಾಶಯಗಳನ್ನು ತಿಳಿಸಲು ನನಗೆ ಅತ್ಯಂತ ಸಂತೋಷವೆನಿಸುತ್ತದೆ.
ಇಂದಿನ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಿರುವ ನಾಡಿನ ಎಲ್ಲ ಹಿರಿಯರಿಗೆ, ಕವಿ-ಸಾಹಿತಿಗಳಿಗೆ, ಚಿಂತಕರು, ಜಿಲ್ಲೆಯ ಶಾಸಕ ಮಿತ್ರರು, ಸಂಸದರು, ಹಾಗೂ ಎಲ್ಲ ಜನಪ್ರತಿನಿಧಿಗಳು, ನಾಗರಿಕ ಬಂಧುಗಳು ಮತ್ತು ಮಾಧ್ಯಮ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಬೆಳಗಾವಿ ಜಿಲ್ಲೆ ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ದಾಖಲಿಸಿದೆ. ರಾಷ್ಟ್ರ ಭಕ್ತಿಯು ಜಿಲ್ಲೆಯ ಜನತೆಯ ನರನಾಡಿಗಳಲ್ಲಿ ಹರಿದಾಡುತ್ತಿದೆ. ಈ ನೆಲವು ಗಾಂಧೀಜಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾತ್ಮರು ನಡೆದಾಡಿದ ನೆಲವಾಗಿದೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣರು ಸ್ವಾಭಿಮಾನಕ್ಕಾಗಿ ಆತ್ಮಸಮರ್ಪಣೆ ಮಾಡಿಕೊಂಡ ನೆಲ. ಶರಣರು ನಡೆದಾಡಿದ ತಪೋಭೂಮಿಯಿದು
ಭಾರತ ರಾಷ್ಟ್ರವು ಗಣರಾಜ್ಯವೆಂದು ೧೯೫೦ರ ಜನವರಿ ೨೬ರಂದು ಘೋಷಿಸಿಕೊಂಡಿತು. ಈ ಗಣರಾಜ್ಯ ದಿನವು ದೇಶದ ನಾಗರಿಕರಿಗೆ ತನ್ನ ರಾಷ್ರ್ಟದ ಜವಾಬ್ದಾರಿಯನ್ನು ನೀಡಿದ ದಿನವಾಗಿದೆ. ನಮ್ಮ ಸಂವಿಧಾನವನ್ನು ಒಪ್ಪಿಕೊಂಡ ದಿನವಿದು. ಗಣತಂತ್ರ ವ್ಯವಸ್ಥೆಯು ಭಾರತೀಯರಿಗೆ ಸಾರ್ವಭೌಮಾಧಿಕಾರವನ್ನು ಕಲ್ಪಿಸಿಕೊಟ್ಟ ದಿನವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರಂಥಹ ಮಹಾನ್ ಮಾನವತಾವಾದಿಗಳು ರಾಷ್ಟ್ರದ ಅಭಿವೃದ್ಧಿಯ ಬಗೆಗೆ ಹಗಲಿರುಳೆನ್ನದೆ ಚಿಂತಿಸಿ ರಚಿಸಿದ ಸಂವಿಧಾನವು ಭವ್ಯಭಾರತಕ್ಕೆ ದಾರಿದೀಪವಾಗಿದೆ.
ಡಾ. ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿ, ಚಿಂತನೆಯ ಫಲವಾಗಿ ನಾವಿಂದು ಜಗತ್ತಿಗೆ ಮಾದರಿಯಾದ ಸಂವಿಧಾನದ ವಾರಸುದಾರರಾಗಿದ್ದೇವೆ. ಪರಕೀಯರ ಆಡಳಿತದಲ್ಲಿದ್ದ ಭಾರತವು ಕೇವಲ ೭೫ ವರ್ಷಗಳಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಪ್ರಜಾತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಈ ಸಂವಿಧಾನವೇ ಬುನಾದಿಯಾಗಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ನ್ಯಾಯ, ಸಮಾನತೆ, ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳು ನಮ್ಮ ಸಂವಿಧಾನ ನಮಗೆ ಕಲ್ಪಿಸಿಕೊಟ್ಟ ಬಹುದೊಡ್ಡ ಕೊಡುಗೆಗಳಾಗಿವೆ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಜನರಿಗೆ ನೀಡಿದ ಭರವಸೆಯಂತೆ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಈ ಐದೂ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದೆ.
ಸಂವಿಧಾನ ಜಾರಿಗೆ ಬಂದ ಈ ಅಮೃತಗಳಿಗೆಯಲ್ಲಿ ನಮ್ಮ ಭಾರತ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಗಣರಾಜ್ಯೋತ್ಸವ ದಿನವಾದ ಇಂದಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾವನ್ನು ಸರಕಾರ ಹಮ್ಮಿಕೊಂಡಿದೆ.
ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವು ಬೆಳಗಾವಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಜನರಲ್ಲಿ ಸಂವಿಧಾನದ ಕುರಿತು ಜಾಗೃತಿ ಮೂಡಿಸಲಿದೆ.
ಸಂವಿಧಾನ ದಿನಾಚರಣೆಯ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯ ಮಟ್ಟದ ಸಮಾವೇಶ ೨೫ನೇ ಫೆಬ್ರುವರಿ ೨೦೨೪ ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಜನವರಿ ೧೮, ೨೦೨೪ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ಇಡೀ ಜಗತ್ತಿಗೆ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕು ನೀಡಿದ ವಚನ ಚಳವಳಿಯ ನಾಯಕ ಬಸವಣ್ಣನವರನ್ನು ನಮ್ಮ ಸರ್ಕಾರವು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ.
ಇದಲ್ಲದೇ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ ಎಂದು ಗುರುತಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ಗೌರವಾರ್ಥ ಕಿತ್ತೂರು ತಾಲ್ಲೂಕನ್ನು ಚನ್ನಮ್ಮನ ಕಿತ್ತೂರು ಎಂದು ಮರು ನಾಮಕರಣ ಕೂಡ ಮಾಡಲಾಗಿದೆ.
ಇತ್ತೀಚೆಗೆ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಸಂದರ್ಭದಲ್ಲಿ ೨೫೭ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ ಶಿಲ್ಪವನವನ್ನು ಮಾನ್ಯ ಮುಖ್ಯಮಂತ್ರಿಗಳು ಉದ್ಘಾಟಿಸಿದ್ದಾರೆ.
ಬೆಳಗಾವಿ ನಗರ ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಗೊಳಿಸಲು ರಾಷ್ಟ್ರೀಯ ಹೆದ್ದಾರಿ-೪೮ ಗಾಂಧಿ ನಗರದಿಂದ ರಾಣಿ ಚನ್ನಮ್ಮಾ ವೃತ್ತದವರೆಗೆ ಅಂದಾಜು ೩೫೦ ಕೋಟಿ ರೂಪಾಯಿ ವೆಚ್ಚದಲ್ಲಿ ಫ್ಲೈಓವರ್ ನಿರ್ಮಿಸಲು ಯೋಜಿಸಲಾಗಿದೆ.
ಪ್ರಸ್ತುತ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿರುವ ವಿವಿಧ ಇಲಾಖೆಗಳ ಕಟ್ಟಡಗಳನ್ನು ತೆರವುಗೊಳಿಸಿ ಒಂದು ಸುಸಜ್ಜಿತವಾದ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡವನ್ನು ಅಂದಾಜು ೨೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಕೊಳ್ಳಲಾಗುತ್ತಿದೆ.
ಹುದಲಿ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಇರುವ ಮ್ಯಾನುವಲ್ ರೈಲ್ವೆ ಗೇಟ್‌ನ್ನು, ರೈಲ್ವೆ ಮೇಲ್ಸೇತುವೆಯನ್ನಾಗಿ ಪರಿವರ್ತಿಸಲು ರೂ.೩೫ ಕೋಟಿಗಳ ಅಂದಾಜು ಮೊತ್ತದ ಕಾಮಗಾರಿಯನ್ನು ಅನುಷ್ಠಾನಗೊಳಿsಸಲಾಗುವುದು.
ನಿಲಜಿಯಿಂದ ಸಾಂಬ್ರಾ ವಿಮಾನ ನಿಲ್ದಾಣವರೆಗೆ ದ್ವಿಪಥದಿಂದ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ರೂ. ೫೮ ಕೋಟಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಶೀಘ್ರವಾಗಿ ಅನುಮೋದನೆ ಪಡೆದುಕೊಂಡು ಕಾರ್ಯಗತಗೊಳಿಸಲಾಗುವುದು.
ಬೆಳಗಾವಿ ನಗದರಲ್ಲಿ ಒಂದು ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲು ವಿಸ್ತೃತವಾದ ಯೋಜನೆಯನ್ನು ರೂ.೬೦ ಕೋಟಿ ಅಂದಾಜು ಮೊತ್ತದ ಯೋಜನೆ ತಯಾರಿಸಲಾಗಿದ್ದು, ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ರೂ.೧೦ ಕೋಟಿಗಳಲ್ಲಿ ಕಾಮಗಾರಿಯನ್ನು ಕೈಗೊಂಡು ಮುಂಬರುವ ಸಾಲಿನಲ್ಲಿ ಹಂತ ಹಂತವಾಗಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ ನಿರ್ಮಿಸಲಾಗುವುದು.
ಹಸಿವುಮುಕ್ತ ಕರ್ನಾಟಕ ಇದು ನಮ್ಮ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ.
ಈ ಯೋಜನೆಯಲ್ಲಿ ಕುಟುಂಬದ ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ. ಅಕ್ಕಿ ನೀಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರದಿಂದ ಐದು ಕೆ.ಜಿ. ಅಕ್ಕಿ ಹಾಗೂ ಅದರೊಂದಿಗೆ ಜುಲೈ ೨೦೨೩ ರಿಂದ ಐದು ಕೆ.ಜಿ. ಅಕ್ಕಿ ಮೊತ್ತಕ್ಕೆ ಸಮನಾಗಿ ಪ್ರತಿ ಸದಸ್ಯರಿಗೆ ತಲಾ ೧೭೦ ರೂಪಾಯಿಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.
ಕಳೆದ ಜುಲೈ ತಿಂಗಳಿನಿಂದ ಡಿಸೆಂಬರ್ ೨೦೨೩ ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ೩೨೧ ಕೋಟಿ ರೂಪಾಯಿ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯಡಿ ೧೧.೮೭ ಲಕ್ಷ ಫಲಾನುಭವಿಗಳ ನೋಂದಣಿಯ ಗುರಿ ನಿಗದಿಪಡಿಸಿದ್ದು, ಇಲ್ಲಿಯವರೆಗೆ ೧೦.೫೮ ಲಕ್ಷ ಫಲಾನುಭವಿಗಳು ಈ ಯೋಜನೆಯಡಿ ನೋಂದಣಿಯಾಗಿರುತ್ತಾರೆ.
ಅದರನ್ವಯ ಅಗಸ್ಟ್-೨೦೨೩ರ ತಿಂಗಳಲ್ಲಿ ೯.೨೨ ಲಕ್ಷ ಫಲಾನುಭವಿಗಳಿಗೆ ರೂ. ೨,೦೦೦ ರಂತೆ ಒಟ್ಟು ರೂ. ೧೮೪.೪೭ ಕೋಟಿ ಜಮೆಯಾಗಿರುತ್ತದೆ. ಸೆಪ್ಟೆಂಬರ್ ೨೦೨೩ ರ ತಿಂಗಳಲ್ಲಿ ೯.೨೦ ಲಕ್ಷ ಫಲಾನುಭವಿಗಳ ಖಾತೆಗೆ ಒಟ್ಟು ರೂ. ೧೮೪.೧೧ ಕೋಟಿ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿರುತ್ತದೆ. ಅಕ್ಟೋಬರ್-೨೦೨೩ ರಿಂದ ಬೆಂಗಳೂರಿನ ಪ್ರಧಾನ ಕಛೇರಿ ಹಂತದಲ್ಲಿ ಬಿಲ್ಲುಗಳನ್ನು ಸಿದ್ಧಪಡಿಸಲಾಗುತ್ತಿದೆ.
ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಗ್ಯಾರಂಟಿ ಯೋಜನೆಯು ಜಾರಿಗೊಂಡಿರುವ ಜೂನ್ ೧೧ ರಿಂದ ಜನವರಿ ೧೮, ೨೦೨೪ ರವರೆಗೆ ಸಾರಿಗೆ ಸಂಸ್ಥೆಯ ಬೆಳಗಾವಿ ಜಿಲ್ಲೆಯ ಮೂರು ವಿಭಾಗಗಳ ಅಡಿಯಲ್ಲಿ ಒಟ್ಟು ೧೦೫೮ ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಒಟ್ಟಾರೆ ಉಚಿತ ಪ್ರಯಾಣದ ಮೊತ್ತ ೨೪೬ ಕೋಟಿ ರೂಪಾಯಿ ಆಗಿರುತ್ತದೆ.
ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ೧೦.೧೪ ಲಕ್ಷ ಸಂಖ್ಯೆಯ ಗೃಹ ವಿದ್ಯುತ್ ಬಳಕೆದಾರರಿದ್ದು, ಸದರಿ ಯೋಜನೆಯಲ್ಲಿ ಒಟ್ಟು ೯.೫೫ ಲಕ್ಷ ಬಳಕೆದಾರರು ನೋಂದಾಯಿಸಿರುತ್ತಾರೆ.
ಸರಾಸರಿ ಬಳಕೆಯ ಆಧಾರದ ಮೇಲೆ ಮಾಸಿಕ ೨೦೦ ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ನೋಂದಾಯಿತ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆಯಡಿ ಮಾಸಿಕ ಸರಾಸರಿ ೩೮ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ.
ಪದವೀಧರ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿರುವ ನಿರುದ್ಯೋಗಿಗಳಿಗೆ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ ಪ್ರತಿ ತಿಂಗಳು ಕ್ರಮವಾಗಿ ೩ ಸಾವಿರ ಹಾಗೂ ೧೫೦೦ ರೂಪಾಯಿ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಗ್ಯಾರಂಟಿ ಯೋಜನೆಗೆ ಜ.೧೨ ರಂದು ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಜನವರಿ ೧೯ ರವರೆಗೆ ಒಟ್ಟಾರೆ ೯೬೮೮ ಜನರು ನೋಂದಣಿ ಮಾಡಿಸಿಕೊಂಡಿರುತ್ತಾರೆ. ಇದು ರಾಜ್ಯದಲ್ಲಿಯೇ ಅತೀ ಹೆಚ್ಚು ಜನರ ನೋಂದಣಿಯಾಗಿದ್ದು, ಇವರೆಲ್ಲರಿಗೂ ಜನವರಿ ಮಾಹೆಯಿಂದ ಭತ್ಯೆಯನ್ನು ನೀಡಲಾಗುವುದು.
ಬೆಳಗಾವಿ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ೩.೬೭ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇದುವರೆಗೆ ೩.೩೮ ಲಕ್ಷ ಹೆಕ್ಟೇರ್ ಅಂದರೆ ಶೇ.೯೨ರಷ್ಟು ಬಿತ್ತನೆಯಾಗಿದೆ. ೮೪ ಸಾವಿರ ರೈತರಿಗೆ ಉತ್ತಮ ಗುಣಮಟ್ಟದ ೧೯,೭೯೧ ಕ್ವಿಂಟಲ್ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲಾಗಿದೆ.
ಜಿಲ್ಲೆಯಲ್ಲಿ ೧೫ ತಾಲೂಕಿನಲ್ಲಿ ೨೪ ವಾರಗಳಿಗೆ ಸಾಕಾಗುವಷ್ಟು ೧೫ ಲಕ್ಷ ಟನ್ ಮೇವಿನ ಲಭ್ಯತೆ ಇದೆ. ಪಶು ಸಂಜೀವಿನಿ ವಾಹನದ ಮೂಲಕ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯನ್ನು ಒದಗಿಸಲು ಜಿಲ್ಲೆಯಲ್ಲಿ ಒಟ್ಟು ೧೮ (ಸಹಾಯವಾಣಿ ಸಂಖ್ಯೆ-೧೯೬೨) ವಾಹನಗಳ ಮೂಲಕ ತಕ್ಷಣದ ಸೇವೆಯನ್ನು ಒದಗಿಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂಜನಿಯರಿಂಗ್ ವಿಭಾಗದಿಂದ ಜಿಲ್ಲೆಯಲ್ಲಿ ಬೆಳಗಾವಿ ನಗರದ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಸೇರಿ ೧೯ ಸರ್ಕಾರಿ ಆರೋಗ್ಯ ಸಂಸ್ಥೆಗಳ ಕಟ್ಟಡ ಕಾಮಗಾರಿಗಳು ಅಂದಾಜು ೩೩೨ ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನಾರೋಗ್ಯ- ಆರೋಗ್ಯ ಕರ್ನಾಟಕ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು ೩.೭೨ ಲಕ್ಷ ಫಲಾನುಭವಿಗಳಿಗೆ ೩೫೦ ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ ತುಬಚಿ-ಬಬಲೇಶ್ವರ, ಬಸವೇಶ್ವರ(ಕೆಂಪವಾಡ), ವೆಂಕಟೇಶ್ವರ, ಗೊಡಚಿನಮಲ್ಕಿ, ಚಚಡಿ, ಮುರಗೋಡ, ಶ್ರೀ ರಾಮೇಶ್ವರ, ವೀರಭದ್ರೇಶ್ವರ, ಸಾಲಾಪುರ ಹೀಗೆ ಒಟ್ಟು ೯ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿರುತ್ತವೆ.
ಈ ೯ ನೀರಾವರಿ ಯೋಜನೆಗಳಿಂದ ಬೆಳಗಾವಿ ಜಿಲ್ಲೆಯ ೬ ತಾಲೂಕುಗಳ ೮೦,೧೬೨ ಹೆಕ್ಟೇರ್, ಬಾಗಲಕೋಟೆ ಜಿಲ್ಲೆಯ ಮೂರು ತಾಲೂಕುಗಳ ೧೩,೮೬೯ ಹೆಕ್ಟೇರ್ ಹಾಗೂ ಬಿಜಾಪೂರ ಜಿಲ್ಲೆಯ ೪೪,೩೭೫ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಬಹುದಾಗಿದೆ.
ಈ ಪೈಕಿ ತುಬಚಿ ಬಬಲೇಶ್ವರದ Phಚಿse-I ಮತ್ತು Phಚಿse-II, ಚಚಡಿ-ಮುರಗೋಡ ಹಾಗೂ ಗೊಡಚಿನಮಲ್ಕಿ ಏತ ನೀರಾವರಿ ಯೋಜನೆಗಳ ಹೆಡವರ್ಕ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಏತ ನೀರಾವರಿ ಯೋಜನೆಗಳಿಗೆ ಇದುವರೆಗೆ ಐದು ಸಾವಿರ ಕೋಟಿ ರೂಪಾಯಿ ವೆಚ್ಚವಾಗಿರುತ್ತದೆ.
ಸರ್ವಜನಾಂಗದ ಶಾಂತಿಯ ತೋಟವೆಂದು ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ವ್ಯಾಖ್ಯಾನಿಸಿದ್ದಾರೆ. ಇಂತಹ ತೋಟದಲ್ಲಿ ನಾವೆಲ್ಲಾ ಸಾಮರಸ್ಯದಿಂದ ಬೆಳೆದುನಿಂತ ಫಲಪುಷ್ಪಗಳು. ಈ ನೆಲದ ಮಣ್ಣಿನ ಗುಣ, ಗಣತಂತ್ರ ವ್ಯವಸ್ಥೆಯ ಮತ್ತು ಸಂವಿಧಾನದ ಮೂಲ ಆಶಯಗಳನ್ನಿಟ್ಟುಕೊಂಡು ಎಲ್ಲರೂ ಸಹಬಾಳ್ವೆಯಿಂದ ಬದುಕೋಣ. ಇದು ನನ್ನ ಗಣರಾಜ್ಯೋತ್ಸವದ ಸಂದೇಶವಾಗಿದೆ. ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
ಜೈಹಿಂದ್
ಜಯಹೇ ಕರ್ನಾಟಕ ಮಾತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ