ಸಂತ್ರಸ್ಥರ ನೋವು ಸರಕಾರಕ್ಕೂ ಅರ್ಥವಾಗುತ್ತದೆ
ಪ್ರಗತಿವಾಹಿನಿ ಸುದ್ದಿ, ಅಥಣಿ-
ಕೃಷ್ಣಾ ನದಿತೀರದ ಗ್ರಾಮಗಳ ಸಂತ್ರಸ್ಥರಿಗಾಗಿ ಇಂದಿನಿಂದಲೇ ತಾತ್ಕಾಲಿಕ ಉಪಜೀವನಕ್ಕಾಗಿ ರಾಜ್ಯ ಸರಕಾರದಿಂದ ಪ್ರತಿ ಕುಟುಂಬಕ್ಕೆ ೩೮೦೦ ರೂ. ನೀಡಲಾಗುತ್ತದೆ. ಪ್ರವಾಹ ಕಡಿಮೆಯಾದ ನಂತರ ಬೆಳೆಹಾನಿ ಮನೆ ಮತ್ತು ಇನ್ನಿತರ ವಸ್ತುಗಳ ಹಾನಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸರಕಾರದಿಂದ ಪರಿಹಾರ ನೆರವು ನೀಡಲಾಗುವುದು.
ಅಲ್ಲದೇ ಸಂತ್ರಸ್ಥರಿಗೆ ಶಾಸ್ವತ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ ಹೆಚ್ಚಿನ ನೆರವು ತಂದು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ತಾಲೂಕಿನ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಂತ್ರಸ್ಥರ ಯೋಗಕ್ಷೇಮ ವಿಚಾರಿಸಿ ಮಾತನಾಡಿದರು. ಈ ರೀತಿಯಾದ ಪ್ರಕೃತಿ ವಿಕೋಪವಾದಾಗ ಅನೇಕ ಕುಟುಂಬಗಳು ನೀರಿನಲ್ಲಿ ಸಿಲುಕದಂತೆ ಪಾರುಮಾಡಿ ಜೀವ ಉಳಿಸುವ ಕಾರ್ಯವನ್ನು ಮೊದಲು ಮಾಡಲಾಗಿದೆ. ಸಂತ್ರಸ್ಥರ ನೋವು ಸರಕಾರಕ್ಕೂ ಅರ್ಥವಾಗುತ್ತದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಸೇರಿದಂತೆ ಕೇಂದ್ರ ಮಂತ್ರಿಗಳಾದ ನಿರ್ಮಲಾ ಸೀತಾರಾಮನ್ ಮತ್ತು ಅಮಿತ್ ಷಾ ಅವರು ಕೂಡಾ ವೈಮಾನಿಕ ಸಮೀಕ್ಷೆ ಮಾಡಿ ಸಂತ್ರಸ್ಥರ ನೋವು ಆಲಿಸಿದ್ದಾರೆ. ರಾಜ್ಯ ಸರಕಾರದ ಬೇಡಿಕೆಯಂತೆ ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಈ ಭಾಗದ ಸಂಸದನಾಗಿ ನಾನು ಮನವಿ ಮಾಡುತ್ತೇನೆ.
ನೆರೆ ಹಾವಳಿಯಿಂದ ಹಾನಿಯಾಗಿರುವ ಕಬ್ಬಿನ ಬೆಳೆ, ಕಳೆದುಕೊಂಡ ಮನೆಗಳು, ಜಾನುವಾರು, ಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳು, ಆರೋಗ್ಯ ಕೇಂದ್ರ, ರಸ್ತೆಗಳು ಸೇರಿದಂತೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಸ್ವಲ್ಪ ಸಮಯ ಅವಕಾಶ ಬೇಕಾಗುತ್ತದೆ. ಅಲ್ಲಿಯವರೆಗೆ ಸರಕಾರ ನೀಡುವ ಸಹಾಯಧನ ಪಡೆದುಕೊಂಡು ಉಪಜೀವನಕ್ಕೆ ಬೇಕಾಗುವ ವಸ್ತುಗಳನ್ನು ಪಡೆದುಕೊಳ್ಳಬೇಕು. ಅಲ್ಲದೇ ದಾನಿಗಳು ಕೂಡಾ ಆಹಾರದ ಜೊತೆಗೆ ಹಾಸಿಗೆ ಹೊದಿಕೆಗಳನ್ನು, ಹೊಸ ಬಟ್ಟೆಗಳನ್ನು ನೀಡುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಪ್ರವಾಹ ಕಡಿಮೆಯಾಗುವ ಸಾಧ್ಯತೆಯಿದೆ. ಸಂಚಾರಕ್ಕೆ ತೊಂದರೆಯಾಗಿರುವ ಮಾರ್ಗಗಳು ಆರಂಭಗೊಂಡು ಅಗತ್ಯ ಸವಲತ್ತುಗಳು ಹಂತ ಹಂತವಾಗಿ ಲಭ್ಯವಾಗಲಿವೆ ಎಂದರು.
ಅನಂತರದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಮತ್ತು ನಾನು ಅಥಣಿ ಕ್ಷೇತ್ರದ ಜನತೆಯ ಜೊತೆಗಿದ್ದು ಕೆಲಸ ಮಾಡುತ್ತೇವೆ. ಪ್ರವಾಹದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂಸದ ಜೊಲ್ಲೆ ಅವರು ಸಂತ್ರಸ್ಥರಲ್ಲಿ ಆತ್ಮವಿಶ್ವಾಸ ತುಂಬಿದರು.
ಗಂಜಿ ಕೇಂದ್ರದಲ್ಲಿದ್ದ ಹುಲಗಬಾಳ, ರಾಮವಾಡಿ ಮತ್ತು ಕರ್ಲಟ್ಟಿ ಗ್ರಾಮಸ್ಥರ ಪರವಾಗಿ ಗ್ರಾ.ಪಂ ಅಧ್ಯಕ್ಷ ಸಂಜಯಗೌಡ ಪಾಟೀಲ ಮಾತನಾಡಿ ಮೂರು ಗ್ರಾಮಗಳು ಜಲಾವೃತವಾಗಿ ಸೇರಿ ೧೦ ಸಾವಿರ ಜನರು ಸಂತ್ರಸ್ಥರಿದ್ದಾರೆ. ಈ ಗ್ರಾಮಸ್ಥರಿಗೆ ಆರ್.ಸಿ ಸೆಂಟರ್ ಗಳಲ್ಲಿ ಸರಕಾರದಿಂದ ಶೀಘ್ರಗತಿಯಲ್ಲಿ ನಿವೇಶನ ನೀಡಿ ಮೂಲಭೂತ ಸವಲತ್ತುಗಳನ್ನು ಒದಗಿಸಬೇಕು. ಸಾವಿರಾರು ಎಕರೆ ಜಮೀನು ಇಂದು ಜಲಾವೃತವಾಗಿದೆ. ವಾರ್ಷಿಕ ಬೆಳೆಗಳು ಹಾನಿಯಾಗಿ ಜನರಿಗೆ ಬದುಕಲು ಆಶ್ರಯ ಇಲ್ಲದಂತಾಗಿದೆ. ಜಮಿನುಗಳಿಗೆ ಮತ್ತು ಬೆಳೆಹಾನಿಗೆ ಸರಕಾರ ಪರಿಹಾರ ನೀಡಬೇಕು. ರಾಜ್ಯ ಸರಕಾರದಿಂದ ಸೂಕ್ತ ನೇರವು ಸಿಗುತ್ತಿಲ್ಲ, ಕೇಂದ್ರ ಸರಕಾರದಿಂದ ಹೆಚ್ಚಿನ ನೇರವು ನೀಡುವಂತೆ ಸಂಸದರನ್ನು ಒತ್ತಾಯಿಸಿದರು.
ಈ ವೇಳೆ ಯುವಮುಖಂಡ ಚಿದಾನಂದ ಸವದಿ, ಶ್ರೀಶೈಲ ನಾಯಿಕ, ಪ್ರದೀಪ ನಂದಗಾಂವ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ