Kannada NewsKarnataka News

ತಾತ್ಕಾಲಿಕ ಪರಿಹಾರ 10 ಸಾವಿರ ರೂ. ಗೆ ಏರಿಕೆ

ತಾತ್ಕಾಲಿಕ ಪರಿಹಾರ 10 ಸಾವಿರ ರೂ. ಗೆ ಏರಿಕೆ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ :

ಅತೀವೃಷ್ಠಿ ಹಾಗೂ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಸಂತ್ರಸ್ಥರ ಕುಟುಂಬಗಳಿಗೆ ತಾತ್ಕಾಲಿಕವಾಗಿ ೧೦ ಸಾವಿರ ರೂ.ಗಳ ಪರಿಹಾರ ಧನವನ್ನು ನೀಡಲು ಸರ್ಕಾರ ಆದೇಶ ನೀಡಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಬುಧವಾರ ಸಂಜೆ ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ, ಹುಣಶ್ಯಾಳ ಪಿಜಿ, ವಡೇರಹಟ್ಟಿ, ಲೋಳಸೂರ, ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಈ ಮೊದಲು ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಮನೆಗಳಲ್ಲಿನ ಬಟ್ಟೆ, ದಿನಬಳಕೆ ವಸ್ತುಗಳು ಹಾಗೂ ಗೃಹಪಯೋಗಿ ವಸ್ತುಗಳು ಹಾನಿಯಾಗಿದ್ದಲ್ಲಿ ೩೮೦೦ ರೂ.ಗಳ ಪರಿಹಾರ ಧನವನ್ನು ನೀಡಲಾಗುತ್ತಿತ್ತು ಎಂದು ಹೇಳಿದರು.

ಈಗ ಹೊಸ ಆದೇಶದ ಪ್ರಕಾರ ಸಂತ್ರಸ್ಥ ಪ್ರತಿ ಕುಟುಂಬಗಳಿಗೆ ೩೮೦೦ ರೂ.ಗಳ ಜೊತೆಗೆ ಹೆಚ್ಚುವರಿ ೬೨೦೦ ರೂ.ಗಳನ್ನು ಅವರಿಗೆ ಚೆಕ್ ಮೂಲಕ ನೀಡಲಾಗುತ್ತಿದೆ. ಇದರಿಂದ ತಾತ್ಕಾಲಿಕ ಪರಿಹಾರ ಧನವನ್ನು ವಿನಿಯೋಗಿಸಿಕೊಳ್ಳುವಂತೆ ಕುಟುಂಬಗಳಿಗೆ ಮನವಿ ಮಾಡಿದರು. ಇನ್ನು ಮುಂದೆ ಸಂತ್ರಸ್ಥ ಪ್ರತಿ ಕುಟುಂಬಗಳಿಗೆ ತಾತ್ಕಾಲಿಕ ರೂಪದಲ್ಲಿ ರೂ. ೧೦ ಸಾವಿರಗಳ ಪರಿಹಾರ ಧನವನ್ನು ನೀಡಲಾಗುವುದು ಎಂದು ಹೇಳಿದರು.

ಸಂತ್ರಸ್ಥರು ತಮ್ಮ-ತಮ್ಮ ಮನೆಗೆ ತೆರಳಿದ ನಂತರ ಅವರುಗಳಿಗೆ ಸರ್ಕಾರದ ಪರಿಹಾರ ಧನವನ್ನು ಅವರ ಮನೆ ಬಾಗಿಲಿಗೆ ಹೋಗಿ ವಿತರಿಸಲಾಗುವುದು. ಜೊತೆಗೆ ಗೃಹಪಯೋಗಿ ಹಾಗೂ ದಿನಬಳಕೆ ವಸ್ತುಗಳು, ಬಟ್ಟೆಗಳನ್ನು ಸಹ ನೀಡಲಾಗುವುದು. ಸಂತ್ರಸ್ಥರಿಗೆ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುವುದು. ಒಟ್ಟಿನಲ್ಲಿ ಕಣ್ಣಿರಿನಲ್ಲಿ ಜೀವನ ಕಳೆಯುತ್ತಿರುವ ಸಂತ್ರಸ್ಥರ ಜೀವನದಲ್ಲಿ ಇನ್ನು ಮುಂದೆ ಹೊಸ ಆಶಾಕಿರಣ ಮೂಡಿಬರಲಿದೆ ಎಂದು ಹೇಳಿದರು.

ಶ್ಲಾಘನೀಯ :

ಘಟಪ್ರಭಾ ನದಿ ಪ್ರವಾಹದಿಂದ ನದಿ ತೀರದ ಗ್ರಾಮಗಳು ಮುಳುಗಡೆಯಾಗುವ ಭೀತಿಯಿಂದ ಮುಂಜಾಗೃತಾ ಕ್ರಮವಾಗಿ ಆಯಾ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಟೀಂ ಎನ್‌ಎಸ್‌ಎಫ್, ಎಲ್ಲ ಹಂತದ ಜನಪ್ರತಿನಿಧಿಗಳು, ಮುಖಂಡರುಗಳು ಹಾಗೂ ಅಧಿಕಾರಿಗಳ ಕಾರ್ಯವನ್ನು ಬಾಲಚಂದ್ರ ಜಾರಕಿಹೊಳಿ ಮುಕ್ತಕಂಠದಿಂದ ಶ್ಲಾಘಿಸಿದರು.

ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ತಾಪಂ ಸದಸ್ಯರಾದ ಕಿರಣ ಬೆಣಚಿನಮರಡಿ, ಬಸು ಹುಕ್ಕೇರಿ, ಗೋಪಾಲ ಕುದರಿ, ಮುಖಂಡರಾದ ವೆಂಕಪ್ಪ ಅರಭಾವಿ, ಬಸಲಿಂಗ ಕೆಳಗಡೆ, ಯಮನಪ್ಪ ಬಾಗಾಯಿ, ಪರಸಪ್ಪ ಮೇಲ್ಮಟ್ಟಿ, ಪ್ರಕಾಶ ಮೇಟಿ, ಸಾತಪ್ಪ ಕೊಳದುರ್ಗಿ, ಅಡಿವೆಪ್ಪ ಹಾದಿಮನಿ, ಮನು ಗಡಾದ, ಗಂಗಪ್ಪ ನಡುವಿನಮನಿ, ಸಿದ್ದಪ್ಪ ವಾಲಿಕಾರ, ಸಿದ್ದಪ್ಪ ಹಟ್ಟಿ, ಸಿದ್ರಾಮ ಕುಳ್ಳೂರ, ವಿನೋದ ಪೂಜೇರಿ, ಭೀಮಶೆಪ್ಪ ಕಲ್ಲೋಳಿ, ಸಿದ್ದಯ್ಯ ಹೋಳಗಿ, ಅಡಿವೆಪ್ಪ ಕಳಸನ್ನವರ, ಶಿವಪ್ಪ ದೊಡಕೆಂಚನವರ, ವಕೀಲ ಬಸು ಕೋಟಗಿ, ಅವ್ವಣ್ಣ ಡಬ್ಬನವರ, ರಾಮನಾಯ್ಕ ನಾಯ್ಕ, ಶಬ್ಬೀರ ತಾಂಬಿಟಗಾರ, ಬನಪ್ಪ ವಡೇರ, ಶಿದ್ಲಿಂಗ ಗಿಡೋಜಿ, ವಿಠ್ಠಲ ಗಿಡೋಜಿ, ಪರಸಪ್ಪ ಸಾರಾಪೂರ, ರೆಬ್ಬೋಜಿ ಮಳಿವಡೇರ ಮುಂತಾದವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button