ಪ್ರಗತಿವಾಹಿನಿ ಸುದ್ದಿ: ಜನ ನಮ್ಮನ್ನು ಗಮನಿಸುತ್ತಿದ್ದಾರೆ. ವಿರೋಧಿಗಳು ತಪ್ಪು ಹುಡುಕುತ್ತಿದ್ದಾರೆ. ಕಾನೂನು ಬಾಹಿರವಾಗಿ ಕೆಲಸ ಮಾಡಿ ಎಂದು ಹೇಳುವುದಿಲ್ಲ. ಯಾರಿಗೂ ತೊಂದರೆ ಆಗದಂತೆ ನಿಮ್ಮ ಕಾರ್ಯ ನಿರ್ವಹಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಪ್ರತಿ ಫೈಲ್ ಮುಂದಕ್ಕೆ ಹೋಗಲು ಜನರನ್ನು ಅಲೆದಾಡಿಸಿ, ಅಯ್ಯೋ ಎನಿಸಬೇಡಿ. ಕಾಡಾನೆ ದಾಳಿ ನಿಯಂತ್ರಣಕ್ಕೆ ಅಧ್ಯಯನ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಅರಣ್ಯ ಅಧಿಕಾರಿಗಳು ಕೊಂಬು ಬಂದವರಂತೆ ವರ್ತಿಸುತ್ತಿದ್ದೀರಿ. ಯಾವುದೇ ಒಬ್ಬ ಬಗರ್ ಹುಕ್ಕುಂ ಸಾಗುವಳಿ ಮಾಡುತ್ತಿರುವ ರೈತನ ಒಕ್ಕಲೆಬ್ಬಿಸುವ ಅಧಿಕಾರ ನಿಮಗಿಲ್ಲ. ಹಳ್ಳಿಗಳಲ್ಲಿ ಓಡಾಡಲು ರಸ್ತೆಗೆ ಅವಕಾಶ ನೀಡುತ್ತಿಲ್ಲ ಎಂಬ ದೂರು ಬಂದಿವೆ ಇದಕ್ಕೆಲ್ಲ ನಾನು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರಕ್ಕೆ ನಾನು ಆಸ್ಪದ ನೀಡುವುದಿಲ್ಲ. ತಹಶೀಲ್ದಾರ್, ಎಸಿ ಗಳು ಹೊಣೆ ಹೊರಬೇಕು. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಕೇಳಿದರೆ ಸಾರ್ವಜನಿಕರು ದೂರು ನೀಡಲು ದೂರವಾಣಿ ಸಂಖ್ಯೆ ನಮೂದಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಫಲಕ ಅಳವಡಿಸಬೇಕು.
ಈ- ಖಾತಾ ಮಾಡಿಸಲು ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ವರದಿ ಬಂದಿದೆ. ಇದರ ಬಗ್ಗೆ ತನಿಖೆ ಮಾಡಿ. ಯಾರೇ ತಪ್ಪು ಮಾಡಿದ್ದರೂ ಕಾನೂನು ಕ್ರಮ ಜರುಗಿಸಿ. ನಾವು ಯಾರ ರಕ್ಷಣೆಯನ್ನು ಮಾಡುವುದಿಲ್ಲ. ನಿಮ್ಮ ಕರ್ತವ್ಯ ನಿಭಾಯಿಸಿ.
ಬರಗಾಲ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಲ್ಲಿ 150 ದಿನ ಕೂಲಿ ದಿನ ಕೊಡಿಸಲು ಹೋರಾಟ ಮಾಡುತ್ತಿದ್ದೇವೆ.
ಪಂಚಾಯತಿ ಮಟ್ಟದಲ್ಲಿ ಸೌಹಾರ್ದತೆ ಕಾಯ್ದುಕೊಳ್ಳಬೇಕು. ಪಂಚಾಯತಿಗೆ ಅದರದೇ ಆದ ಅಧಿಕಾರ ಇರುತ್ತದೆ.
ತಾಂತ್ರಿಕ ಕಾರಣದಿಂದ ನಗರ ಸಭೆ ಅಧ್ಯಕ್ಷರ ಆಯ್ಕೆ ಚುನಾವಣೆ ಆಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಸದಸ್ಯರ ಜತೆ ಸಭೆ ಮಾಡಿ. ಎಲ್ಲರ ಸಮಸ್ಯೆಗಳನ್ನು ಆಲಿಸಿ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಭೆ ಮಾಡಬೇಕು.
ಕೆಪಿಎಸ್ ಶಾಲೆಗಳಿಗೆ ಜಾಗ ಗುರುತಿಸಿ. ನಮ್ಮ ಜಿಲ್ಲೆ ಪ್ರಮುಖ ಆದ್ಯತೆ ಆಗಬೇಕು. ನಮ್ಮ ಜಿಲ್ಲೆಗಳಲ್ಲೆ ಮೊದಲು ಶಾಲೆಗಳು ಆರಂಭವಾಗಬೇಕು.
ಕೇಂದ್ರ ಕಚೇರಿಯಲ್ಲಿ ಎಲ್ಲಾ ಅಧಿಕಾರಿಗಳು ಇರಬೇಕು. ಬೆಂಗಳೂರಿನಿಂದ ಇಲ್ಲಿಗೆ ಬರುವವರು ನಿಮ್ಮ ಗಂಟು ಮೂಟೆ ಕಟ್ಟಿಕೊಂಡು ಇಲ್ಲಿಗೆ ಬನ್ನಿ. ಇಲ್ಲೇ ಇದ್ದು ಕೆಲಸ ಮಾಡಲು ಆಗದಿದ್ದರೆ ನೀವು ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ.
ಈ ಜಿಲ್ಲೆಗೆ ತರುವ ಯೋಜನೆ ಜಾರಿ ಮಾಡುವ ಜವಾಬ್ದಾರಿ ನಿಮ್ಮದು.
ಕುಡಿಯುವ ನೀರಿಗೆ ಎಲ್ಲೂ ಸಮಸ್ಯೆ ಆಗಬಾರದು. ಪ್ರತಿ ಹಳ್ಳಿಗೂ ಹೋಗಿ ಎಲ್ಲೆಲ್ಲಿ ಕುಡಿಯುವ ನೀರಿನ ಕೊರತೆ ಇದೆ ಅಲ್ಲಿ ಹೋಗಿ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಪ್ರತಿನಿತ್ಯ ಎಲ್ಲಿದ್ದಾರೆ ಎಂಬ ಮಾಹಿತಿ ನಮಗೆ ಬರಬೇಕು.
ಸರ್ಕಾರಿ ಆಸ್ತಿಗಳ ಬಗ್ಗೆ ದಾಖಲೀಕರಣ ಮಾಡಲು ತಂಡ ರಚಿಸಿ.
ಆಹಾರ ಸರಬರಾಜು ಇಲಾಖೆ ಮೂಲಕ ನೀಡುವ ಪದಾರ್ಥ ಜನರಿಗೆ ಸರಿಯಾಗಿ ತಲುಪುತ್ತಿದೆ ಎಂದು ಪರಿಶೀಲಿಸಿ ಹಾಗೂ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ಗಮನ ಹರಿಸಬೇಕು. ಯಾರಿಗೆ ಯೋಜನೆ ತಲುಪಿಲ್ಲ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ