*ವಿಧಾನಸಭೆಯಲ್ಲಿ ಜೈ ಜೈ ಸೀತಾರಾಮ್ ಘೋಷಣೆ ಕೂಗಿ ಗಮನ ಸೆಳೆದ ಸಿಎಂ ಸಿದ್ದರಾಮಯ್ಯ*
ಪ್ರಗತಿವಾಹಿನಿ ಸುದ್ದಿ: ವಿಧಾನಸಭೆ ಕಲಾಪದ ವೇಳೆ ಸಿಎಂ ಸಿದ್ದರಾಮಯ್ಯ ಜೈ ಜೈ ಸೀತಾರಾಮ್ ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ.
ವಿಧಾನಸಭೆ ಕಲಾಪ ಆರಂಭವಾದಾಗಿನಿಂದ ಬಿಜೆಪಿ ಸದಸ್ಯರು ಪಾಕ್ ಪರ ಘೋಷಣೆ ವಿಚಾರ ಪ್ರಸ್ತಾಪಿಸಿ ಪ್ರತಿಭಟಿಸಿದರು. ಬಳಿಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾ ಗದ್ದಲವೆಬ್ಬಿಸಿದರು. ಆದರೂ ಸಿಎಂ ಸಿದ್ದರಾಮಯ್ಯ ತಮ್ಮ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಲಾರಂಭಿಸಿದರು. ಬಿಜೆಪಿ ಸದಸ್ಯರ ನಡೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ ಜೈ ಜೈ ಸೀತಾರಾಮ್ ಎಂದು ಎರಡು ಬಾರಿ ಘೋಷಣೆ ಕೂಗುವ ಮೂಲಕ ಟಾಂಗ್ ನೀಡಿದರು.
ಜೈ ಶ್ರೀರಾಮ್ ಅಲ್ಲ ಜೈ ಜೈ ಸೀತಾರಾಮ್ ಎಂದು ಹೇಳಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮೆದುಳಿಲ್ಲ. ತಲೆ ಖಾಲಿಯಾಗಿದೆ. ರಾಮಾಯಣ, ಮಹಾಭಾರತವನ್ನು ಓದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನೂ ನಮ್ಮ ಊರಿನಲ್ಲಿ ಎರಡು ಶ್ರೀರಾಮ ಮಂದಿರ ಕಟ್ಟಿಸಿದ್ದೇನೆ. ಯಾವುದೇ ರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ, ಭರತ, ಹನುಮಂತ ಹೀಗೆ ಎಲ್ಲರೂ ಇರುತ್ತಾರೆ. ಶ್ರೀರಾಮ ಒಬ್ಬನೇ ಅಲ್ಲ. ಅವಿಭಕ್ತ ಕುಟುಂಬವನ್ನು ಪ್ರತಿನಿಧಿಸುತ್ತಾನೆ. ಬಿಜೆಪಿಯವರು ಶ್ರೀರಾಮ ಎಂದಷ್ಟೇ ಹೇಳುವುದೇಕೆ? ಸೀತಾರಾಮ ಎಂದು ಹೇಳಬೇಕು. ಬಿಜೆಪಿಯವರದ್ದು ಬರಿ ಒಡೆಯುವ ಮನಸ್ಥಿತಿ ಎಂದು ಕಿಡಿಕಾರಿದರು. ಸಿಎಂ ಮಾತಿಗೆ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ