*ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳುವಳಿ ಆರಂಭಿಸಿದಾಗ ಇವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು; ಇವರಿಂದ ನಾವು ದೇಶಭಕ್ತಿ ಕಲಿಯಬೇಕಾ?*
ಬಿಜೆಪಿ ವಿರುದ್ಧ ಸಿಎಂ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ: ರಾಜ್ಯಕ್ಕೆ 3,71,383 ಕೋಟಿ ರೂ. ಗಾತ್ರದ ಜನಪರ ಬಜೆಟ್ ಮಂಡಿಸುವ ಮೂಲಕ ವಿತ್ತೀಯ ಶಿಸ್ತು ಪಾಲನೆಯ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಪರಿಷತ್ತಿನಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದರು.
19 ಜನ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಬಜೆಟ್ ನ ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದು, ಬಂದ ಟೀಕೆ ಹಾಗೂ ಸಲಹೆ ಸೂಚನೆಗಳನ್ನು ನಾನು ತುಂಬುಹೃದಯದಿಂದ ಸ್ವಾಗತಿಸುತ್ತೇನೆ.
7 ಕೋಟಿ ಕನ್ನಡಿಗರ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ತುಂಬಲು , ಸಮಾಜದಲ್ಲಿ ಅವಕಾಶದಲ್ಲಿ ವಂಚಿತರಾದ ವರ್ಗದವರಿಗೆ ಶಕ್ತಿ ತುಂಬುವ ಬಜೆಟ್ ನ್ನು ಸರ್ಕಾರ ಮಂಡಿಸಿದೆ ಎಂದರು.
2024-25ಕ್ಕೆ ರಾಜಸ್ವ ವೆಚ್ಚ 2,90,531 ಕೋಟಿ ರೂ. ಬಂಡವಾಳ ವೆಚ್ಚ55,877 ಕೋಟಿ , ಸಾಲ ಮರುಪಾವತಿ 24,974 ಒಳಗೊಂಡಂತೆ ಒಟ್ಟು 3,71,383 ಕೋಟಿ ರೂ.ಗಳ ಆಯವ್ಯಯ ಮಂಡಿಸಿದ್ದೇನೆ. 2002 ರ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಪ್ರಕಾರ ಜಿಎಸ್ ಡಿಪಿಯ 23.68 % ಇದ್ದು 25% ರ ಮಿತಿಯೊಳಗೆ ಇದೆ. ವಿತ್ತೀಯ ಕೊರತೆ 82,981 ಕೊರತೆ ಇದ್ದು ರಾಜ್ಯದ ಜಿಎಸ್ ಡಿಪಿಯ ಶೇ.2.95 ರಷ್ಟಿದ್ದು, ರಾಜ್ಯದ ವಿತ್ತೀಯ ಕೊರತೆ ಹಾಗೂ ಹೊಣೆಗಾರಿಕೆ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಮಿತಿಯೊಳಗೆ ಇದೆ ಎಂದು ವಿವರಿಸಿದರು
ಹಿಂದಿನ ಸರ್ಕಾರಕ್ಕಿಂತ ಬಜೆಟ್ ಗಾತ್ರ ಹೆಚ್ಚಳ:
ಬಸವರಾಜ ಬೊಮ್ಮಾಯಿಯವರು ಫೆಬ್ರವರಿ 2023ರಲ್ಲಿ 3,09,182 ಕೋಟಿ ಗಾತ್ರ ಬಜೆಟ್ ಮಂಡಿಸಿದ್ದರು. 2023 ರ ಜುಲೈನಲ್ಲಿ ನಮ್ಮ ಸರ್ಕಾರ 3,27,747 ಕೋಟಿ ರೂ. ಬಜೆಟ್ ಮಂಡಿಸಲಾಗಿದೆ. ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಿಂತ 62200 ಕೋಟಿ ಯಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023ರಲ್ಲಿ ಮಂಡಿಸಿದ ಬಜೆಟ್ ಗಿಂತ ಇದು 43630 ಕೋಟಿ ರೂ. ಹೆಚ್ಚಳವಾಗಿದೆ ಎಂದರು.
ಬಜೆಟ್ ಗೆ ಜನಮನ್ನಣೆ ದೊರೆತಿದೆ:
ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024-25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ನಮ್ಮ ಬಜೆಟ್ ಜನಪರ ಬಜೆಟ್ , ಅಭಿವೃದ್ಧಿಪರವಾದ ಬಜೆಟ್ ಎಂಬ ಮನ್ನಣೆ ಎಲ್ಲೆಡೆಯಿಂದ ದೊರೆಯುತ್ತಿದೆ ಎಂದರು.
ಉತ್ತರದ ಇತರೆ ಹೈಲೈಟ್ಸ್:
ಕಾಂಗ್ರೆಸ್ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದಾಗ ಇವರು ಬ್ರಿಟಿಷರೊಂದಿಗೆ ಶಾಮೀಲಾಗಿದ್ದರು. ಇವರಿಂದ ನಾವು ದೇಶಭಕ್ತಿ ಕಲಿಯಬೇಕಾ? : ಪರಿಷತ್ ನಲ್ಲಿ ಬಿಜೆಪಿ ಪರಿವಾರ ಮತ್ತು ಬ್ರಿಟಿಷರ ಸ್ನೇಹವನ್ನು ಎತ್ತಿಡಿದು ತಿವಿದ ಸಿಎಂ
ಕಾಂಗ್ರೆಸ್ ಹೋರಾಟದ ಫಲವಾಗಿ ಸಿಕ್ಕ ಸ್ವಾತಂತ್ರ್ಯದಿಂದ, ಅಂಬೇಡ್ಕರ್ ಕೊಟ್ಟ ಸಂವಿಧಾನದ ಫಲವಾಗಿ ನೀವೆಲ್ಲಾ ಇಲ್ಲಿ ಕುಳಿತಿದ್ದೀರಿ: ಸಿ.ಎಂ.
ಕೇಸರಿಶಾಲು ಹಾಕಿದರೆ ದೇಶಭಕ್ತಿ ಎನ್ನುವುದು ತಪ್ಪು ಕಲ್ಪನೆ ಎಂದರು.
ಬಿಜೆಪಿಯವರು ಶ್ರೀಮಂತರ ಪರವಾಗಿರುವ ಪಕ್ಷ. ಬಿಜೆಪಿಯವರು ಕೇಸರಿ ಶಾಲು ಹಾಕಿಕೊಂಡರೆ ದೇಶ ಭಕ್ತಿ ಬರುತ್ತದೆ ಎಂದುಕೊಂಡಿರುವುದು ಅವರ ತಪ್ಪು ಕಲ್ಪನೆ. ಇವರಿಗೆ ದೇಶದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಸರ್ಕಾರ ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ರಾಜ್ಯದ ಜನರಿಗೆ ಶಕ್ತಿ ತುಂಬುವ ಸಲುವಾಗಿ ಜನಪರ, ಬಡವರ ಪರ ಬಜೆಟ್ ಮಂಡಿಸಿದೆ. ದೇಶದ ಪ್ರಧಾನಿಯವರು ಐದು ಗ್ಯಾರಂಟಿಗಳನ್ನು ಕರ್ನಾಟಕದಲ್ಲಿ ಜಾರಿ ಮಾಡುವುದಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಯೋಜನೆಗಳಿಂದ ಅಭಿವೃಧ್ಧಿ ಕೆಲಸ ಕುಂಟಿತವಾಗುತ್ತವೆ ಎಂದು ಮೂದಲಿಸಿದ್ದರು ಎಂದು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ತಂದಿರುವುದು ಕಾಂಗ್ರೆಸ್ ಪಕ್ಷದವರು. 1942ನೇ ಸಾಲಿನಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಹೇಳುವಾಗ ಬಿಜೆಪಿಯವರು ಎಲ್ಲಿದ್ದರು. ಬಿಜೆಪಿಯವರು ಬ್ರಿಟಿಷ್ ರವರ ಜೊತೆಗೆ ಶಾಮೀಲು ಆಗಿದ್ದರು. ಇವರಿಗೆ ದೇಶದ ಬಗ್ಗೆ ಮಾತಾನಾಡುವ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿಲ್ಲ. ನಮ್ಮ ಹೋರಾಟವೇ ಬಿಜೆಪಿ ವಿರುದ್ಧ. ಕಾಂಗ್ರೆಸ್ ಪಕ್ಷ ಸಂವಿಧಾನ ತಂದುಕೊಟ್ಟ ಮೇಲೆ ಬಿಜೆಪಿಯವರು ಇಲ್ಲಿಗೆ ಬಂದಿದ್ದಾರೆ. ಬಿಜೆಪಿಯವರು ಬಡವರ, ದಿನದಲಿತರ, ಅಲ್ಪಸಂಖ್ಯಾಂತರ ಜನರ ದ್ವೇಷಿಗಳು ಎಂದರು.
ಬಿಜೆಪಿಯವರದು ಧರ್ಮ ಮತ್ತು ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ
ಧರ್ಮ ಮತ್ತು ಜಾತಿ ಹೆಸರನಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು. ಬಿಜೆಪಿಯವರ ನಾಟಕವನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿಯವರಿಗೆ ಜನರ ಆರ್ಶೀವಾದ ಮಾಡಿಲ್ಲ. ಹಿಂಬಾಗಿಲು ದಿಂದ ಬಂದು ಅಧಿಕಾರ ಮಾಡುವುದಕ್ಕೆ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಹಸಿವು ಮುಕ್ತ ಭಾರತವನ್ನಾಗಿ ಮಾಡುತ್ತೇವೆ ಎಂದು ಹೇಳುವುದನ್ನು ಬಿಟ್ಟು, ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ