*ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಮನಬಂದಂತೆ ಹಲ್ಲೆ; ಕೂಡಿ ಹಾಕಿ ಹೊಡೆದು, ಪರಚಿ ಚಿತ್ರಹಿಂಸೆ ನೀಡಿದ ಅಮ್ಮ*
ಪ್ರಗತಿವಾಹಿನಿ ಸುದ್ದಿ: ಹೆತ್ತ ತಾಯಿಯೇ ಮೂರು ವರ್ಷದ ಮಗನನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿರುವ ಅಮಾನುಷ ಘಟನೆ ಬೆಂಗಳೂರಿನ ವಿಜಯನಗರದ ವೀರಭದ್ರನಗರದಲ್ಲಿ ನಡೆದಿದೆ.
ಸ್ಟ್ಯಾಲಿನ್ ಎಂಬ ಮಹಿಳೆ ತನ್ನ ಮೂರು ವರ್ಷದ ಮಗನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾಳೆ. ಮಗುವಿನ ಮೈತುಂಬ ಗಾಯಗಳಾಗಿದ್ದು, ಹಣೆ, ತಲೆಗೂ ಗಾಯಗಳಾಗಿವೆ. ಮಗುವಿನ ಕೈ ಬೆರಳಲ್ಲಿ ರಕ್ತ ಹೆಪ್ಪುಗಟ್ಟಿ ಊದಿಕೊಂಡಿದೆ. ಮೂರು ವರ್ಷದ ಮಗು ತೊದಲು ನುಡಿಯಲ್ಲೇ ಅಮ್ಮ ತನಗೆ ಹೊಡೆದು, ಕೂಡಿಹಾಕಿದ್ದಾಳೆ. ಹಸಿವಾಗಿದೆ ಎಂದರೂ ಊಟವನ್ನೂ ಕೊಡುತ್ತಿಲ್ಲ. ನನಗೆ ನೀನು ಬೇಡ ಹೋಗು ಆಚೆ ಎಂದು ಹೇಳಿ ಹೊಡೆಯುತ್ತಿದ್ದಾಳೆ. ಮನೆಗೆ ಬಂದ ಅಂಕಲ್ ಕೂಡ ಕುಕ್ಕರ್ ನಿಂದ ತಲೆಗೆ ಹೊಡೆದಿದ್ದಾರೆ ಎಂದು ಮಗು ಅಳಲು ತೋಡಿಕೊಂಡಿರುವ ದೃಶ್ಯ ಕರುಳು ಹಿಂಡುವಂತಿದೆ.
ಸ್ಥಳೀಯರು ಹೇಳುವ ಪ್ರಕಾರ ಸ್ಟಾಲಿನ್ ಎಂಬ ಮಹಿಳೆ ಕೆಲ ದಿನಗಳ ಹಿಂದಷ್ಟೇ ವೀರಭದ್ರನಗರದ ಮನೆಗೆ ಬಾಡಿಗೆಗೆ ಬಂದಿದ್ದು, ಈಗ ಏಕಾಏಕಿ ಮನೆ ಖಾಲಿ ಮಾಡುವುದಾಗಿ ಹೇಳಿ ಮನೆ ಖಾಲಿ ಮಾಡಲು ಹೊರಟಿದ್ದಾಳೆ. ಈ ವೇಳೆ ಆಕೆಯನ್ನು ಹಿಡಿದಿದ್ದೇವೆ. ಹಲವು ದಿನಗಳಿಂದ ಮಹಿಳೆ ಹಗಲಲ್ಲಿ ತಾನು ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿಟ್ಟು ಹೊರಗಡೆ ಬೀಗ ಹಾಕಿ ಹೋಗುತ್ತಿದ್ದಾಳೆ. ಮಗು ಅಳುತ್ತಾ ಹಸಿವು ಎಂದು ಕೂಗಿಕೊಳ್ಳುತ್ತಿದ್ದರೂ ಮಗುವಿಗೆ ಏನೂ ಕೊಡುತ್ತಿಲ್ಲ. ಮನೆಯ ಮೇಲೆ ಇದ್ದವರು ಹೇಳಿದ ಮಾಹಿತಿಯಂತೆ ಹೋಗಿ ನೋಡಿದರೆ ಮಗುವಿನ ಮೈಮೇಲೆ ಹೊಡೆದ, ಹಾಗೂ ಪರಚಿದ ಗಾಯಗಳಾಗಿವೆ. ಮಗು ಕೇಳಿದರೆ ಅಮ್ಮ ಹಾಗೂ ಮನೆಗೆ ಬಂದಿದ್ದ ಅಂಕಲ್ ಹೊಡೆದು ಹೀಗೆ ಮಾಡಿದ್ದಾಗಿ ಹೇಳುತ್ತಿದೆ. ಈಗ ಮಹಿಳೆಯನ್ನು ಹಿಡಿದು ಕೇಳಿದರೆ ಆಕೆ ತನಗೆ ವಿಚ್ಛೇಧನಕ್ಕಾಗಿ ಅರ್ಜಿ ಹಾಕಿದ್ದೇನೆ. ನಾನಿರುವ ಸ್ಥಿತಿಯಲ್ಲಿ ನನಗೆ ಮಗು ನೋಡಿಕೊಳ್ಳಲು ಆಗುತ್ತಿಲ್ಲ. ಮಗು ಬುದ್ಧಿ ಕಲಿಯಲಿ, ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂದು ಮನೆಗೆ ಬೀಗ ಹಾಕಿ ಹೋಗಿದ್ದೇನೆ ಮಗು ಬಿದ್ದು ಗಾಯವಾಗಿದೆ ಅಷ್ಟೇ. ಆದರೆ ಮಗು ಸುಳ್ಳು ಹೇಳುತ್ತಿದೆ ಎನ್ನುತ್ತಿದ್ದಾಳೆ. ಆಕೆಯ ಜೊತೆಗಿರುವ ವ್ಯಕ್ತಿ ಯಾರು ಎಂದರೆ ತನ್ನ ಅಣ್ಣ ಎಂದು ಹೇಳುತ್ತಾಳೆ. ಆದರೆ ವ್ಯಕ್ತಿಯನ್ನು ವಿಚಾರಿಸಿದರೆ ತಾನು ಆಕೆಯ ಬಾಯ್ ಫ್ರೆಂಡ್ ಎನ್ನುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಮಹಿಳೆ ಹೇಳುವ ಪ್ರಕಾರ, ಮದುವೆಯಾದ ತಕ್ಷಣ ಮಗು ಇಷ್ಟುಬೇಗ ಬೇಡ ಎಂದರೂ ಮನೆಯವರು ಬಲವಂತ ಮಾಡಿ ಮಗು ಇರಲಿ ಎಂದರು. ಈಗ ಪತಿ ನನ್ನ ಜೊತೆ ಇಲ್ಲ ಹಾಗಾಗಿ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದೇನೆ. ನನಗೆ ಕೆಲಸವಿಲ್ಲದಿದ್ದಾಗ ಮಗು ನೋಡಿಕೊಳ್ಳುವ ಹೆಂಗಸಿಗೆ ಹಣ ನೀಡಲು ಆಗಲಿಲ್ಲ. ಹಾಗಾಗಿ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ, ಕುಟುಂಬದವರ ಯಾರ ಸಪೋರ್ಟೂ ನನಗಿಲ್ಲ. ನನಗೆ ಒಳ್ಳೆ ಕೆಲಸವಿದ್ದು ನನಗೆ ೨೮-೩೦ ವರ್ಷದವಳಾಗಿದ್ದರೆ ಹೇಗೋ ಮಗು ನೋಡಿಕೊಳ್ಳುತ್ತಿದ್ದೆ. ಆದರೆ ನನಗೂ ಚಿಕ್ಕವಯಸ್ಸು, ನಾನಿರುವ ಸ್ಥಿತಿಯಲ್ಲಿ ನನಗೆ ಮಗು ನೋಡಿಕೊಳ್ಳಲು ಆಗಲ್ಲ, ಈಗ ಮಗು ಎಲ್ಲಿ ಚಿಕಿತ್ಸೆ ಪಡೆಯುತ್ತಿದೆ ಅಲ್ಲೇ ಸುರಕ್ಷಿತವಾಗಿರಲಿ ಎಂದಿದ್ದಾಳೆ.
ಸದ್ಯ ಮಗುವನ್ನು ರಕ್ಷಿಸಿರುವ ಸ್ಥಳೀಯರು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅದೆಷ್ಟೋ ದಂಪತಿ ಮಕ್ಕಳಿಲ್ಲದೇ ಮಕ್ಕಳಿಗಾಗಿ ಹಂಬಲಿಸಿ ದೇವರಲ್ಲಿ ಮೊರೆ ಹೋಗುತ್ತಾರೆ. ಆದರೆ ಈ ಮಹಿಳೆಗೆ ಹೆತ್ತ ಮಗುವೇ ಬೇಡವೆಂದು ಮಗುವಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆದುಕೊಂಡಿದ್ದು, ಮಗುವಿನ ಸ್ಥಿತಿ ನೋಡಿದರೆ ಕರುಳು ಚುರ್ ಎನ್ನುವಂತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ