*ಸಮಾಜದ ಏಳಿಗೆಗೆ ಮಹಿಳೆಯರ ಬದ್ಧತೆಯೇ ಕಾರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್*
ಬಾಲಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ: ಸಮಾಜದ ಏಳಿಗೆಗೆ ಮಹಿಳೆಯರ ಬದ್ಧತೆಯೇ ಬುನಾದಿ: ಇಂದು ಮಹಿಳೆಯರ ನಡೆ ಸಮಾನತೆ ಕಡೆ ಸಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಬೆಂಗಳೂರಿನ ಜವಾಹರ ಬಾಲ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ಮಹಿಳೆಗೆ ಹುಟ್ಟಿನಿಂದಲೇ ಹೋರಾಟ, ಮೂರು ತಿಂಗಳ ಗರ್ಭದಲ್ಲಿ ಇರುವಾಗಲೇ ಹೋರಾಟ ಆರಂಭಿಸುತ್ತಾಳೆ. ಮಹಿಳೆ ಹುಟ್ಟು ಹೋರಾಟಗಾರ್ತಿ ಎಂದು ಹೇಳಿದರು.
ಮಹಿಳೆಯನ್ನು ಹಿಂದೆ ಬಹಳವಾಗಿ ಹೀಯಾಳಿಸುವ ಪರಿಸ್ಥಿತಿ ಇತ್ತು. ಆದರೆ, ಆ ಪರಿಸ್ಥಿತಿ ಈಗ ಬದಲಾಗಿದೆ. ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಸಾಮಾಜಿಕ ಬದ್ಧತೆಯಿಂದ ಸಾಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಯಾವುದೇ ರಂಗ ಇರಬಹುದು. ಮಹಿಳೆಯರು ಎಲ್ಲದರಲ್ಲೂ ಸಾಧನೆಯನ್ನು ರುಜುವಾತು ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರಿ ಮಹಿಳಾ ನೌಕರರೇ ಇರಬಹುದು, ಹೊಲಗಳಲ್ಲಿ ದುಡಿಯುವ ಹೆಣ್ಣು ಮಕ್ಕಳು ಇರಬಹುದು. ಸ್ವಂತ ಪರಿಶ್ರಮದಿಂದ ದುಡಿದು ಸಾರ್ಥಕ ಬದುಕು ನಡೆಸುತಿದ್ದಾಳೆ. ಹೆಣ್ಣು ಒಂದು ರೀತಿ ಗಟ್ಟಿಗಿತ್ತಿ ಎಂದು ಸಚಿವರು ಹೇಳಿದರು. ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಅತಿ ಹೆಚ್ಚು ಐಎಎಸ್ ಅಧಿಕಾರಿಗಳು ಇರುವುದು ಕೂಡ ಮಹಿಳೆಯರೇ, ಕರ್ನಾಟಕದಲ್ಲಿ ಶೇಕಡ 51 ರಷ್ಟು ಮಹಿಳೆಯರು ಸರ್ಕಾರಿ ನೌಕರಿಯಲ್ಲಿದ್ದಾರೆ ಎಂದು ಹೇಳಿದರು.
ಪ್ರತಿದಿನ ಪ್ರತಿಕ್ಷಣ ಹೋರಾಟದ ನಡುವೆಯೇ ಕೆಲಸ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಜೀವನದ ಸಂಘರ್ಷದಲ್ಲಿ ಹೆಣ್ಣಿಗೆ ಯಶಸ್ಸು ನಿಶ್ಚಿತ. ಮಹಿಳೆ ಇಂದು ಇಷ್ಟು ಯಶಸ್ವಿಯಾಗಲು ಮುಖ್ಯ ಕಾರಣ ಶಿಕ್ಷಣ, ನಾಲ್ಕು ಗೋಡೆಗಳನ್ನು ಮೀರಿ ಮಹಿಳೆ ಶಿಕ್ಷಣ ಕಲಿತು ಇಂದು ತನ್ನ ಸ್ವಂತ ಬಲದಿಂದ ಬದುಕುವಂತವಳಾಗಿದ್ದಾಳೆ. ರಾಜಕೀಯ ಇರಬಹುದು, ಬೇರೆ ಯಾವುದೇ ಕ್ಷೇತ್ರದ ಇರಬಹುದು, ಎಲ್ಲಾ ಕ್ಷೇತ್ರದಲ್ಲೂ ಮಹಿಳೆ ಮುಂಚೂಣಿಯಲ್ಲಿ ಇದ್ದಾಳೆ ಎಂದು ಸಚಿವರು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಡಾ.ಜಿ.ಎಸ್ ಪ್ರಕಾಶ್, ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ಬಾಲ ಭವನದ ಕಾರ್ಯದರ್ಶಿ ಬಿ.ಎಚ್. ನಿಶ್ಚಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಚ್ ಪುಷ್ಪಲತಾ, ಡಾ. ಮೈತ್ರಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಮಹಿಳಾ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ