Kannada NewsKarnataka NewsLatest

ಕಾಲ ಬುಡದಲ್ಲಿ ಹಾವು ಬಿಟ್ಟುಕೊಂಡರಾ ಯಡಿಯೂರಪ್ಪ?

ಕಾಲ ಬುಡದಲ್ಲಿ ಹಾವು ಬಿಟ್ಟುಕೊಂಡರಾ ಯಡಿಯೂರಪ್ಪ?

ಎಂ.ಕೆ.ಹೆಗಡೆ, ಬೆಳಗಾವಿ –

ಒಂದು ಸರಕಾರ ಕೆಡವಿ ಮತ್ತೊಂದು ಸರಕಾರ ರಚಿಸಿಯಾಗಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಒಂದು ಹಂತದ ಸಚಿವ ಸಂಪುಟ ವಿಸ್ತರಣೆಯೂ ಆಗಿದೆ. 17 ಜನ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇನ್ನೇನು ಬಿಜೆಪಿ ಸರಕಾರ ಟೇಕ್ ಆಫ್ ಆಯ್ತು ಎಂದುಕೊಳ್ಳಲಾಗಿತ್ತು. ಆದರೆ ಸಚಿವ ಸಂಪುಟ ರಚನೆ ಮುಗಿಯುತ್ತಿದ್ದಂತೆ ಪಕ್ಷದೊಳಗೆ ಅಸಮಾಧಾನ ಹೊಗೆಯಾಡತೊಡಗಿದೆ. ಇದು ಸಮ್ಮಿಶ್ರ ಸರಕಾರ ಅಲುಗಾಡಿಸಿ ಅಲುಗಾಡಿಸಿ ಕೆಡವಿದಂತೆ ಯಡಿಯೂರಪ್ಪ ಸರಕಾರವನ್ನೂ ಕೆಡಹುವ ಹಂತಕ್ಕೆ ಹೋಗಲಿದೆಯೇ? ಯಡಿಯೂರಪ್ಪ ಸಂಪುಟ ರಚನೆಯ ಮೂಲಕ ಕಾಲಬುಡದಲ್ಲಿ ಹಾವು ಬಿಟ್ಟುಕೊಂಡರೇ?

ಇದನ್ನೂ ಓದಿ – ಜಾರಕಿಹೊಳಿ ಕುಟುಂಬಕ್ಕೆ ಮಲ್ಟಿಪಲ್ ಶಾಕ್!

ಇಂತಹ ಅನುಮಾನ ಮತ್ತು ಆತಂಕ ಬಿಜೆಪಿಯೊಳಗೇ ಕಾಡತೊಡಗಿದೆ. ಇದಕ್ಕೆ ಕಾರಣ ಘಟಾನುಘಟಿ ಶಾಸಕರನ್ನು ಸಂಪುಟದಿಂದ ಹೊರಗಿಟ್ಟಿರುವುದು.  ಸಾಮಾನ್ಯ ಶಾಸಕರನ್ನು ದೂರವಿಟ್ಟಿದ್ದರೆ ಯಾರೂ ಆತಂಕ ಪಡುತ್ತಿರಲಿಲ್ಲ. ಇವೆಲ್ಲ ಇರೋದೆ ಎಂದುಕೊಂಡು ಸುಮ್ಮನಾಗುತ್ತಿದ್ದರು. ಆದರೆ ಯಡಿಯೂರಪ್ಪ ಮಾಡಿದ್ದು ತಮ್ಮ ಕಾಲಿನ ಬುಡಕ್ಕೇ ಹಾವು ಬಿಟ್ಟುಕೊಳ್ಳುವ ಕೆಲಸ.

ಯಾರ್ಯಾರು ಕಂಟಕಪ್ರಾಯ?

ಯಾರು ಸಮ್ಮಿಶ್ರ ಸರಕಾರ ಕೆಡವಿ ತಮ್ಮ ಸರಕಾರ ರಚನೆಗೆ ಮುಂಚೂಣಿ ಪಾತ್ರ ವಹಿಸಿದ್ದರೋ ಅಂತವರನ್ನೇ ಯಡಿಯೂರಪ್ಪ ದೂರವಿಟ್ಟಿದ್ದಾರೆ. ರಮೇಶ ಜಾರಕಿಹೊಳಿ ಆರಂಭದಿಂದಲೂ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಆತಂಕವೊಡ್ಡುತ್ತಾ ಅಂತಿಮವಾಗ ಸರಕಾರವೇ ಬೀಳುವಂತೆ ಮಾಡಿದ್ದಾರೆ. ಅವರ ಬೆನ್ನಿಗೆ ಹಿನ್ನೆಲೆಯಲ್ಲಿ ನಿಂತವರು ಬಾಲಚಂದ್ರ ಜಾರಕಿಹೊಳಿ.

ಬಾಲಚಂದ್ರ ಜಾರಕಿಹೊಳಿ ಮತ್ತು ಉಮೇಶ ಕತ್ತಿ 2009ರಲ್ಲಿ ಆಪರೇಶನ್ ಕಮಲಕ್ಕೆ ಒಳಗಾಗಿ ಜೆಡಿಎಸ್ ನಿಂದ ಬಿಜೆಪಿ ಸೇರಿದ್ದರು. ಆ ನಂತರದ ಬೆಳವಣಿಗೆಯಲ್ಲಿ ಬಾಲಚಂದ್ರರನ್ನು ಯಡಿಯೂರಪ್ಪ ಅನರ್ಹಗೊಳಿಸುವ ಮಟ್ಟಕ್ಕೂ ಹೊಗಿತ್ತು. ಆಗಿನ ಅನುಭವಗಳನ್ನು ಬಳಸಿಕೊಂಡು ಬಾಲಚಂದ್ರ ಈಗಿನ ಅತೃಪ್ತರನ್ನು ಸೆಳೆಯಲು ತಂತ್ರ ರೂಪಿಸಿದ್ದರು.

ಇದನ್ನೂ ಓದಿ –  ಪಕ್ಷ ನಿಷ್ಠೆಗಾಗಿ ಮಂತ್ರಿ ಸ್ಥಾನ ಸಿಕ್ಕಿದೆ : ಲಕ್ಷ್ಮಣ್​ ಸವದಿ

ಹಾಗಾಗಿ ಈ ಬಾರಿ ರಮೇಶ ಜಾರಕಿಹೊಳಿ ಜೊತೆಗೆ ಬಾಲಚಂದ್ರ ಜಾರಕಿಹೊಳಿಗೆ ಕೂಡ ಸಚಿವಸ್ಥಾನ ಸಿಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. 2005ರಿಂದಲೂ ಸಚಿವಸ್ಥಾನ ಇಟ್ಟುಕೊಂಡೇ ಬರುತ್ತಿರುವ ಜಾರಕಿಹೊಳಿ ಕುಟುಂಬ ಈ ಬಾರಿ ಎರಡು ಮಂತ್ರಿಸ್ಥಾನ ಪಡೆಯುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು.

ಆದರೆ ಹಾಗಾಗಲೇ ಇಲ್ಲ. ರಮೇಶ ಜಾರಕಿಹೊಳಿ ಅನರ್ಹರಾಗಿ ಕೋರ್ಟ್ ಮೆಟ್ಟಿಲೇರಿದರೆ, ಬಾಲಚಂದ್ರ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲೇ ಇಲ್ಲ. ಇದು ಸಹಜವಾಗಿ ಜಾರಕಿಹೊಳಿ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ.

ಇದೇ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿ ಅಸಮಾಧಾನಗೊಂಡಿದ್ದ ಕತ್ತಿ ಕುಟುಂಬವೂ ಈಗ ಮತ್ತೆ ಆಘಾತಕ್ಕೊಳಗಾಗಿದೆ. ಉಮೇಶ ಕತ್ತಿ 8 ಬಾರಿ ವಿಧಾನಸಭೆ ಪ್ರವೇಶಿಸಿರುವುದರಿಂದ ಅವರಿಗೂ ಸಚಿವಸ್ಥಾನ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಅವರಿಗೂ ಅನಿರೀಕ್ಷಿತ ಆಘಾತವಾಗಿದೆ.

ಎರಡೂ ಕುಟುಂಬಕ್ಕೆ ವಿರೋಧಿ

ವಿಶೇಷವೆಂದರೆ ಈಗ ಸಚಿವರಾಗಿರುವ ಮಾಜಿ ಶಾಸಕ ಲಕ್ಷ್ಮಣ ಸವದಿ ಜಾರಕಿಹೊಳಿ ಮತ್ತು ಕತ್ತಿ ಎರಡೂ ಕುಟುಂಬದ ವಿರೋಧಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಜಿದ್ದಿನ ಮೇಲೆ ಲಕ್ಷ್ಮಣ ಸವದಿಯನ್ನು ಸೋಲಿಸಿದ್ದರು. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜಕೀಯದ ಹಿನ್ನೆಲೆಯಲ್ಲಿ ಕತ್ತಿ ಕುಟುಂಬಕ್ಕೂ ಸವದಿ ಕಂಡರೆ ಆಗದು.

ಈಗ ಅನಿರೀಕ್ಷಿತವಾಗಿ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿ ಜಾರಕಿಹೊಳಿ ಮತ್ತು ಕತ್ತಿಯನ್ನು ದೂರವಿಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಯಡಿಯೂರಪ್ಪ ಹೀಗೆ ಮಾಡಿದರೇ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

ನಮ್ಮ ಜಿಲ್ಲೆಯಲ್ಲಿ 10 ಜನ ಶಾಸಕರಿರುವಾಗ ಶಾಸಕರಲ್ಲದವರನ್ನು ತಂದು ಮಂತ್ರಿ ಮಾಡುವ ಅನಿವಾರ್ಯತೆ ಏನಿತ್ತು ಎಂದು ಜಾರಕಿಹೊಳಿ ಮತ್ತು ಕತ್ತಿ ಪ್ರಶ್ನಿಸುತ್ತಿದ್ದಾರೆ. ಈ ಇಬ್ಬರನ್ನೂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಹೇಗೆ ಸಮಾಧಾನಪಡಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಇಲ್ಲವಾದಲ್ಲಿ ಇವರಿಬ್ಬರೂ ಸುಮ್ಮಿನಿರುವ ಸಾಧ್ಯತೆಯಂತೂ ಇಲ್ಲವೇ ಇಲ್ಲ.  ಮತ್ತೆ ಆತಂಕದಲ್ಲೇ ಈ ಸರಕಾರವೂ ಮುಂದುವರಿಯುವಂತೆ ಮಾಡುವ ತಾಕತ್ತು ಆ ನಾಯಕರಲ್ಲಿದೆ.

ಮುಂದಿನ ರಾಜಕೀಯ ಬೆಳವಣಿಗೆ ಈವರೆಗಿನ ಬೆಳವಣಿಗೆಗಿಂತ ಕುತೂಹಲಕಾರಿಯಾಗಿರುವುದು ಈ ಕಾರಣಕ್ಕಾಗಿಯೇ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button