*ರಾಜ್ಯಕ್ಕೆ ಅನ್ಯಾಯವಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡರು ಬಾಯಿ ಬಿಡಲಿಲ್ಲ: ಜನಪ್ರತಿನಿಧಿಯಾಗಿ ಲೊಕಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಆಯ್ಕೆಯಾಗಬೇಕು? ಸಿಎಂ ಕಿಡಿ*
ಪ್ರಗತಿವಾಹಿನಿ ಸುದ್ದಿ: ಜಂತರ್ ಮಂತರ್ ಬಳಿ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರತಿಭಟನೆಯಾದಾಗ ಪ್ರಜ್ವಲ್ ರೇವಣ್ಣ, ದೇವೇಗೌಡ ಬಾಯಿ ಬಿಟ್ಟರೇ? ಜನಗಳ ಪ್ರತಿನಿಧಿಯಾಗಿ ಲೊಕಸಭೆಯಲ್ಲಿ ಮಾತನಾಡದಿದ್ದರೆ ಯಾಕೆ ಹೋಗಬೇಕು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಸಕಲೇಶಪುರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಪರವಾಗಿ ಪ್ರಜಾಧ್ವನಿ-02 ಲೋಸಭಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಜ್ವಲ್ ರೇವಣ್ಣ 5 ವರ್ಷ ಸಂಸದರಾಗಿ ಏನಾದರೂ ಮಾಡಿದ್ದಾರೆಯೇ? ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತೆರಿಗೆ ಪಾಲು ನೀಡದೆ ಅನ್ಯಾಯ ಮಾಡಿದಾಗಲೂ ಏನೂ ಮಾತನಾಡಲಿಲ್ಲ. ಕರ್ನಾಟಕದಿಂದ ಕೇಂದ್ರಕ್ಕೆ ಕೊಡುವ ತೆರಿಗೆ 4.30 ಲಕ್ಷ ಕೋಟಿ ರೂ.ಗಳು. ನಮಗೆ ವಾಪಸ್ಸು ಬರುವುದು 55 ಕೋಟಿ ರೂ.ಗಳು ಮಾತ್ರ. ಇದು ಅನ್ಯಾಯವಲ್ಲವೇ? ಎಂದರು.
ಕೇಂದ್ರದ ಮಲತಾಯಿ ಧೋರಣೆ
ಬಿಜೆಪಿಯಿಂದ 25 ಜನ ಸಂಸದರಾಗಿದ್ದರು. ಈಗ 27 ಜನರಾಗಿದ್ದಾರೆ. ಇವರು ಯಾರು ಬಾಯಿ ಬಿಡಲಿಲ್ಲ. ನೀರಾವರಿ, ಬರಗಾಲಕ್ಕೆ ಹಣ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೊಟ್ಟು ಆರು ತಿಂಗಳಾದರೂ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ನರೇಂದ್ರ ಮೋದಿಯವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಬರಗಾಲ, ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಈ ಬಗ್ಗೆ ನಿಮಗೆ ಕೋಪ ಬಂದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಲೋಕಸಭೆಗೆ ಕಳುಹಿಸುವ ತೀರ್ಮಾನ ಮಾಡಲೇಬೇಕು ಎಂದರು.
ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು
10 ವರ್ಷಗಳಲ್ಲಿ ನರೇಂದ್ರ ಮೋದಿಯವರು ರೈತರು ಬಡವರಿಗೆ ಯಾವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿಲ್ಲ ಹಾಗೂ ನುಡಿದಂತೆ ನಡೆದುಕೊಂಡಿಲ್ಲ. ಸಾಮಾಜಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸವನ್ನೂ ಮಾಡಿಲ್ಲ ಎಂದರು.
ನರೇಂದ್ರ ಮೋದಿಯವರು ಭ್ರಮಾಲೋಕವನ್ನೇ ಸೃಷ್ಟಿಸಿದರು. 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರಿಗೆ ಹಾಕಿಲ್ಲ. ಯಾಕೆ ಕೊಡಲಾಗಿಲ್ಲ ಎಂಬ ಬಗ್ಗೆ ಮಾತನಾಡಿಲ್ಲ. ಈ ಬಾರಿ ಬಿಜೆಪಿಯೊದಿಗೆ ಜೆಡಿಎಸ್ ನವರೂ ಸೇರಿಕೊಂಡಿದ್ದಾರೆ. ವಾಚಾಮಗೋಚರವಾಗಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದ ದೇವೇಗೌಡರು ಈಗ ಅವಿನಾಭಾವ ಸಂಬಂಧವಿದೆ ಎನ್ನುತ್ತಿದ್ದಾರೆ. ಈ ಅನಿರೀಕ್ಷಿತ ಪ್ರೀತಿಯ ಬಗ್ಗೆ ಜನ ವಿಚಾರ ಮಾಡಬೇಕು. ಸ್ವಾರ್ಥಕ್ಕಾಗಿ, ಕುಟುಂಬ ರಾಜಕಾರಣಕ್ಕಾಗಿ ಈಗ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದಾರೆ. ಬಡವರ ಕಷ್ಟ ಸುಖ, ಸಾಮಾನ್ಯ ಜನರ, ರೈತರಿಗಾಗಿ ಸೇರಿಲ್ಲ. ಕೇವಲ ಸ್ವಾರ್ಥಕ್ಕಾಗಿ ಸೇರಿಕೊಂಡಿದ್ದಾರೆ.
ಅಳಿಯ, ಮಗ, ಮೊಮ್ಮಗನನ್ನು ನಿಲ್ಲಿಸಿದ್ದಾರೆ. ಕೋಲಾರ ಮೀಸಲು ಸ್ಥಾನವಾಗಿರುವುದರಿಂದ ಬಿಟ್ಟಿದ್ದಾರೆ ಅಷ್ಟೇ ಎಂದರು.
ಎತ್ತಿನಹೊಳೆ ಯೋಜನೆಯನ್ನು ಹೆಚ್.ಡಿ ಕುಮಾರಸ್ವಾಮಿ ವಿರೋಧಿಸಿದ್ದರು. ಜನರ ದಾರಿ ತಪ್ಪಿಸಿ ಅಧಿಕಾರ ಮಾಡಿದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಪರವಾಗಿ ಮತಯಾಚಿಸಿದ್ದೆ. ಒಂದು ವೇಳೆ ನಾನು ಬರದೇ ಹೋಗಿದ್ದರೆ ಅವರು ಗೆಲ್ಲುತ್ತಿರರಲಿಲ್ಲ. ಈ ಬಾರಿ ಅವರನ್ನು ಸೋಲಿಸಿ ಎಂದು ಕರೆ ಕೊಡಲು ನಾನು ಬಂದಿದ್ದೇನೆ ಎಂದರು.
ಈ ಬಾರಿ ಮೋದಿ ಅಲೆ ಇಲ್ಲ.
ಈ ಬಾರಿ ನೂರಕ್ಕೆ ನೂರು ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ಈ ಬಾರಿ ಮೋದಿ ಅಲೆ ಇಲ್ಲ. ಅವರು ಕೊಟ್ಟ ಮಾತುಗಳಂತೆ ನಡೆದುಕೊಂಡಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಈವರಗೆ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿತ್ತು. ಆದರೆ ಮಾಡಲಿಲ್ಲ. ಎಂಬಿಬಿಎಸ್, ಇಂಜಿನಿಯರಿಂಗ್ ಮಾಡಿ ಪಕೋಡಾ ಮಾಡಲು ಹೋಗಬೇಕೇ? ಯುವ ಸಮೂಹ ನರೇಂದ್ರ ಮೋದಿ ಅಸಾಧ್ಯ ಸುಳ್ಳು ಹೇಳುತ್ತಾರೆಂದು ಅರ್ಥ ಮಾಡಿಕೊಂಡಿದೆ. ನಾವು ನಿರುದ್ಯೋಗಿ ಯುವಕರಿಗೆ ಯುವನಿಧಿ ಜಾರಿ ಮಾಡಿದ್ದೇವೆ. ಹಿಂದೆ ಸಿಎಂ ಆಗಿದ್ದಾಗ ಪ್ರತಿ ಕಾರ್ಡುದಾರರಿಗೆ 7 ಕೆಜಿ ಅಕ್ಕಿಯನ್ನು ಕೊಡುತ್ತಿದ್ದೆವು. 7 ಕೆಜಿಯಿಂದ 5 ಕೆಜಿಗೆ ಬಿ.ಎಸ್ ಯಡಿಯೂರಪ್ಪ ಇಳಿಸಿದರು. ಬಡವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಎಂದಾಗಲೂ ಅವರು ಒಪ್ಪಲಿಲ್ಲ. ಹೆಚ್.ಡಿ.ಕುಮಾರಸ್ವಾಮಿಯವರು ಈ ಬಗ್ಗೆ ಕೇಳಲಿಲ್ಲ. ಅದಕ್ಕಾಗಿ 5 ಗ್ಯಾರಂಟಿಗಳಲ್ಲಿ ಅಕ್ಕಿ ಕೊಡುವುದಾಗಿ ಹೇಳಿದ್ದೆವು. ಆದರೆ ಕೇಂದ್ರ ಸರ್ಕಾರದ ರಾಜಕೀಯದಿಂದಾಗಿ ಅಕ್ಕಿ ಕೊಡದೇ ಹೋದರು. ನರೇಂದ್ರ ಮೋದಿಯವರಿಂದ ಅಕ್ಕಿ ಕೊಡಬಾರದು ಎಂದು ಆದೇಶವಿದೆ ಎಂದು ಅಧಿಕಾರಿಗಳು ತಿಳಿಸಿದರು. ಗೃಹ ಜ್ಯೋತಿ ಮೂಲಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2000 ರೂ.ಗಳನ್ನು ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಯಾರಿಗೆ ಮತ ಹಾಕಬೇಕೆಂದು ನೀವೇ ತೀರ್ಮಾನ ಮಾಡಬೇಕು ಎಂದರು.
ಹೊಸಬರಿಗೆ ಅವಕಾಶ ನೀಡಿ
ಈ ಚುನಾವಣೆಯಲ್ಲಿ ಹೊಸಬರಿಗೆ ಅಂದರೆ ಕಾಂಗ್ರೆಸ್ ಅಭ್ಯರ್ಥಿಗೆ ಅವಕಾಶ ನೀಡಬೇಕು. ಕೊಟ್ಟ ಮಾತು ಈಡೇರಿಸಿದ್ದೇವೆ. ಬಸವಾದಿ ಶರಣರ ಹಾದಿಲ್ಲಿ ನಡೆಯುವ ಕೆಲಸವನ್ನು ಮಾಡುತ್ತಿದ್ದು, ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಕೆಂಪೇಗೌಡರ ಜಯಂತಿಯನ್ನು ಆಚರಣೆಗೆ ತೀರ್ಮಾನ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ