Kannada NewsKarnataka NewsLatestPolitics

ಅರುಣ ಜೇಟ್ಲಿಗೆ ಬೆಳಗಾವಿ ಶೃದ್ಧಾಂಜಲಿ -updated news

ಅರುಣ ಜೇಟ್ಲಿಗೆ ಬೆಳಗಾವಿ ಶೃದ್ಧಾಂಜಲಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಕೇಂದ್ರದ ಮಾಜಿ ಸಚಿವ ಅರುಣ ಜೆಟ್ಲಿ ಅವರು ನಿಧನ ಹೊಂದಿರುವುದು ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕರಾಗಿ, ಮಾಜಿ ವಿತ್ತ ಸಚಿವರಾಗಿ ದೇಶದ ಅಭಿವೃದ್ಧಿಯಲ್ಲಿ ಮೌಲಿಕವಾದ ಕೊಡುಗೆಯನ್ನು ನೀಡಿದ್ದರು. ದೇಶದ ಆರ್ಥಿಕ ಬಲವರ್ಧನೆಗೆ ಹೊಸ ಯೋಜನೆಗಳನ್ನು ರೂಪಿಸಿದ ಅರುಣ ಜೆಟ್ಲಿ ಅವರು ಜಾಗತಿಕ ಆರ್ಥಿಕ ಸ್ಥರದಲ್ಲಿ ಭಾರತ ಬಲಿಷ್ಠಗೊಳ್ಳುವಂತೆ ಪ್ರಯತ್ನಿಸಿದರು.

ಇದನ್ನೂ ಓದಿ – ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ಇನ್ನಿಲ್ಲ

ಪ್ರಗತಿಪರ ಧೋರಣೆ ಹೊಂದಿದ್ದ ಅವರು ದೇಶದ ವಿಕಾಸಕ್ಕಾಗಿ ಶ್ರಮಿಸಿದ್ದರು. ಮೋದಿಯವರ ನಿಕಟವರ್ತಿಗಳಾಗಿ ದೇಶ ಕಟ್ಟುವಲ್ಲಿ ಮೌಲಿಕ ಯೋಗದಾನ ನೀಡಿದರು. ಅಂತೆಯೇ ನನ್ನೊಂದಿಗೂ ಅವರ ಸಂಪರ್ಕ ನಿಕಟವಾಗಿತ್ತು. ಒಬ್ಬ ರಾಜಕೀಯ ವಿಶ್ಲೇಷಕರಾಗಿ, ಮಾರ್ಗದರ್ಶಕರಾಗಿ ನನಗೆ ಗುರುವಿನ ಸ್ಥಾನದಲ್ಲಿದ್ದರು ಎಂದು ಕೋರೆ ಸ್ಮರಿಸಿದ್ದಾರೆ.
ಅರುಣ ಜೆಟ್ಲಿ ಕೆಎಲ್‌ಇ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೆಎಲ್‌ಇ ಸಂಸ್ಥೆಯ ಬೆಳವಣಿಗೆ ಹಾಗೂ ಆರೋಗ್ಯ ಸೇವೆಗಳನ್ನು ಕಂಡು ಮನಸಾರೆ ಪ್ರಶಂಸಿಸಿದ್ದರು. ಇಂತಹ ಧೀಮಂತ ನಾಯಕನನ್ನು ಕಳೆದುಕೊಂಡು ದೇಶವು ಇಂದು ಬಡವಾಗಿದೆ ಎಂದ ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆಯ ಸಮಸ್ತ ಪರಿವಾರದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

 ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ : ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ ಜೇಟ್ಲಿ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಂತಾಪ ಸೂಚಿಸಿದ್ದಾರೆ.
ದೇಶಕಂಡ ಅತ್ಯುತ್ತಮ ವಿತ್ತ ಸಚಿವರಲ್ಲಿ ಒಬ್ಬರಾಗಿದ್ದ ಜೇಟ್ಲಿ ಅವರು ನಗದು ಅಮಾನ್ಯ ಹಾಗೂ ಜಿಎಸ್‌ಟಿಯಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದರು. ಜೇಟ್ಲಿ ಅವರು ಹಣಕಾಸು, ರಕ್ಷಣಾ ಖಾತೆ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಇವರ ನಿಧನದಿಂದ ಪಕ್ಷ ಹಾಗೂ ದೇಶಕ್ಕೆ ಅಪಾರ ನಷ್ಟವುಂಟಾಗಿದೆ. ಮೃತರ ಕುಟುಂಬದಲ್ಲಾದ ದುಃಖದಲ್ಲಿ ತಾವು ಸಹಭಾಗಿಯಾಗಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಮಹಾಂತೇಶ ಕವಟಗಿಮಠ ಶೋಕ

ಭಾರತೀಯ ಜನತಾ ಪಕ್ಷದ ಹಿರಿಯ ಅಪರೂಪದ ರಾಜಕಾರಣಿ, ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಪಕ್ಷದ ವಕ್ತಾರ, ದೇಶದ ಆರ್ಥಿಕ ಪ್ರಗತಿಗೆ ಕ್ರಾಂತಿಕಾರಿ ನಿಲುವು ತೆಗೆದುಕೊಂಡ, ಧೀಮಂತ ಮಾಜಿ ವಿತ್ತ ಸಚಿವ  ಅರುಣ್ ಜೇಟ್ಲಿಯವರ ಅಕಾಲಿಕ ಸಾವು ಭಾರತೀಯ ಜನತಾ ಪಕ್ಷಕ್ಕೆ ಮತ್ತು ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಧಾನಪರಿಷತ್ ಸದಸ್ ಮಹಾಂತೇಶ ಕವಟಗಿಮಠ ಶೋಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಕೀಲಿ ವೃತ್ತಿ ಮಾಡಿಕೊಂಡೇ ಕೇಸರೀ ಕಮಲ ಹಿಡಿದ ಜೇಟ್ಲಿಯವರು ದೇಶದಲ್ಲಿ ಬಿ.ಜೆ.ಪಿ ಪಕ್ಷ ಬಲವರ್ಧನೆಗೆ ಶ್ರಮಿಸಿದ ನಾಯಕರಲ್ಲಿ ಇವರೂ ಕೂಡ ಅಗ್ರಗಣ್ಯರು.  ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ಮತ್ತು  ನರೇಂದ್ರ ಮೋದಿಯವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ರಾಜ್ಯಸಭೆಯಲ್ಲಿ ಸಭಾನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವ ರೀತಿ, ಎದರಾಳಿಗಳ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿ ಅವರಿಗೆ ವಿಷಯ ಮುಟ್ಟಿಸಿ ಅರ್ಥೈಸುವ ವಾಕ್ಚತುರತೆ ಎಲ್ಲರನ್ನು ದಂಗುಬಡಿಸುವಂತ್ತಿತ್ತು.

ಮಹಾನ್ ವಿದ್ವಾಂಸರು, ಉತ್ತಮ ವಾಗ್ಮೀಗಳು ದೇಶದ ಹಿತ ಚಿಂತಕರು. ರಾಜಕಾರಣದಲ್ಲಿ ಎಷ್ಟೇ ಎತ್ತರದಲ್ಲಿದ್ದರೂ ಎಂದೂ ಅಹಂಕಾರದಿಂದ ಮೈ ಮರೆಯದೇ ಜನ ಸಾಮಾನ್ಯರಲ್ಲಿ ಒಬ್ಬರಾಗುತ್ತಿದ್ದ ಪ್ರೀತಿಯಿಂದ ಬೆರೆಯುತ್ತಿದ್ದ ಸರಳ ಸಜ್ಜನಿಕೆಯ ವಿಶಿಷ್ಠ ರಾಜಕಾರಣಿ. ರಾಜ್ಯಸಭಾ ಸದಸ್ಯರಾದ  ಪ್ರಭಾಕರ ಕೋರೆಯವರೊಡನೆ ಇವರ ಆತ್ಮೀಯ ಒಡನಾಟ ಎಂದೂ ಮಾಸದ ನೆನಪು. ೨೦೧೪ರಲ್ಲಿ ಇವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಇವರ ಚುನಾವಣಾ ಪ್ರಚಾರದಲ್ಲಿ  ಪ್ರಭಾಕರ ಕೋರೆಯವರೊಡನೆ ನಾನೂ ಭೇಟಿಯಾದ ಸಂದರ್ಭದಲ್ಲಿ ಅವರ ಪ್ರೀತ್ಯಾದರದ ಸ್ನೇಹಶೀಲತೆ ಕಂಡು ನಾನೂ ಮೂಕವಿಸ್ಮಿತನಾಗಿದ್ದೆ.

ಅವರೊಡನೆಯ ಆತ್ಮೀಯ ಒಡನಾಟ ಇನ್ನೂ ನನ್ನ ನೆನಪಿನಂಗಳದಲ್ಲಿ ಹಚ್ಚ ಹಸಿರಾಗಿದೆ. ಇದನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಬಿ.ಜೆ.ಪಿ ಪಕ್ಷದಲ್ಲೇ ಅಲ್ಲದೇ ಇತರೆ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದ ಸ್ನೇಹಶೀಲರು. ಇವರ ಆತ್ಮಕ್ಕೆ ಚಿರಶಾಂತಿಯನ್ನು ದೇವರು ಕರುಣಿಸಲೆಂದು ಕೋರುತ್ತಾ, ಅವರ ಕುಟುಂಬ ವರ್ಗಕ್ಕೆ, ಅಭಿಮಾನಿ ಕಾರ್ಯಕರ್ತರಿಗೆ ಇವರ ಸಾವಿನ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಅನಿಲ ಬೆನಕೆ ಶೋಕ

ಅರುಣ ಜೇಟ್ಲಿ ಅವರ ನಿಧನಕ್ಕೆ ಶಾಸಕ ಅನಿಲ ಬೆನಕೆ ಸಹ ಶೋಕ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತತು ರಾಷ್ಟ್ರ ಒಬ್ಬ ಮಹಾನ್ ಚೇತನವನ್ನು ಕಳೆದುಕೊಂಡಂತಾಗಿದೆ ಎಂದು ಶೋಕಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button