Belagavi NewsBelgaum NewsElection NewsKannada NewsKarnataka NewsPolitics

ಬಿಜೆಪಿಯವರು‌ ಹೇಳೋದ್ ಒಂದು, ಮಾಡೋದ್ ಒಂದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟೀಕೆ

* *ಬೈಲಹೊಂಗಲ ಕ್ಷೇತ್ರದಲ್ಲಿ ಸಚಿವರಿಂದ ಪ್ರಚಾರ* 

ಪ್ರಗತಿವಾಹಿನಿ ಸುದ್ದಿ, *ಬೈಲಹೊಂಗಲ :* ದೇಶದ ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ದೇಶದ ಬಡ ಜನರ ಹಸಿವನ್ನ ನೀಗಿಸಿರುವ ಪಕ್ಷ ಕಾಂಗ್ರೆಸ್.  ಆದರೆ, ಬಿಜೆಪಿಯವರು ಹೇಳುವುದು ಒಂದು ಮಾಡುವುದು ಒಂದು. ಜನರ ಭಾವನೆಗಳನ್ನು ಕೆರಳಿಸಿ ಅಧಿಕಾರಕ್ಕೇರುವುದೇ ಅವರ ಕೆಲಸ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು. 

ಇಂಚಲ ಹಾಗೂ ಚಚಡಿ ಗ್ರಾಮಗಳಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ  ಪ್ರಚಾರ ನಡೆಸಿದ ಸಚಿವರು, ಕೇಂದ್ರ ಸರ್ಕಾರದ ಅಸಹಾಯಕತೆ ನಡುವೆಯೂ ಜನರ ಆಶೋತ್ತರಗಳನ್ನು ನಾವು‌ ಈಡೇರಿಸುತ್ತಿದ್ದೇವೆ ಎಂದು ಹೇಳಿದರು. 

ನಾನು ಹೋದ ಕಡೆ ಹೆಚ್ಚಿನ ಮಹಿಳೆಯರು ಪ್ರಚಾರ ಸಭೆಗಳಿಗೆ ಆಗಮಿಸುತ್ತಿದ್ದಾರೆ. ನಿಜಕ್ಕೂ ಇದೊಂದು ಖುಷಿಯ ವಿಚಾರ. ಕೋವಿಡ್‌ ಬಳಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದರು. ಬಡ ಕುಟುಂಬಗಳಿಗೆ ಸಹಾಯ‌ ಮಾಡುವ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು. ಕೊಟ್ಟ ಭರವಸೆಯಂತೆ ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು ಎಂದರು. 

ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆಗಳು ಮಹಿಳೆಯರಿಗೆ ತುಂಬಾ‌ ಅನುಕೂಲ ಮಾಡಿಕೊಟ್ಟಿವೆ. ಸಾಮಾಜಿಕ ಕಾಳಜಿ ಹೊಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು.  ಪ್ರತಿ ತಿಂಗಳು, ಒಂದು‌ ಕುಟುಂಬಕ್ಕೆ 4-5 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ನಾವು ಬಿಜೆಪಿಯವರ ಹಾಗೆ ಅಲ್ಲ. ನಾವು ಹೇಳಿದನ್ನೆ ಮಾಡುತ್ತೇವೆ.  2014ರಲ್ಲಿ ಬಿಜೆಪಿಯವರು ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ.‌ ರೈತರ ಆದಾಯ ದುಪ್ಪಟ್ಟು ಆಗಲಿಲ್ಲ. ಬದಲಿಗೆ ಗೊಬ್ಬರದ ಬೆಲೆ, ಸಿಲಿಂಡರ್ ಬೆಲೆ ದುಪ್ಪಟ್ಟಾಯಿತು. ದೇಶದ ಪ್ರಮುಖ ಯೋಜನೆಗಳನ್ನ ಜಾರಿಗೆ ತಂದಿದ್ದು ಕಾಂಗ್ರೆಸ್, ಬಿಜೆಪಿಯವರ ಕೊಡುಗೆ ಶೂನ್ಯ. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತೋದೆ ಬಿಜೆಪಿಯವರ ಕೆಲಸ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡಲಾಗುವುದು. ಜೊತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ನೀಡುವ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು. 

ಬೆಳಗಾವಿಯಿಂದ ನಾಲ್ಕು ಬಾರಿ‌ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಕ್ಷೇತ್ರಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಬೆಳಗಾವಿಯ ಮನೆ ಮಗನಾದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಬೆಂಬಲಿಸಿ, ಗೆಲ್ಲಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತಾನೆ ಎಂದು ಸಚಿವರು ಹೇಳಿದರು.

ಈ ವೇಳೆ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಬಡ ಜನರಿಗೆ ಮಾರಕವಾಗಿರುವ ಕೇಂದ್ರ ಸರ್ಕಾರವನ್ನು ಕಿತ್ತೊಗೆಯಬೇಕು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ, ಒಂದೇ ಒಂದು ಉದ್ಯೋಗ ಕೊಡಲಿಲ್ಲ. ಬೆಳಗಾವಿ ಧ್ವನಿಯಾಗಿ ಮೃಣಾಲ್‌ ಹೆಬ್ಬಾಳ್ಕರ್ ಕೆಲಸ ಮಾಡಲಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು. 

ಬಳಿಕ ಮಾತನಾಡಿದ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. 

  ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಶಿವರುದ್ರಪ್ಪ ಹಟ್ಟಿಹೊಳಿ, ಗೀತಾ ಬಾಯಿ ದೇಸಾಯಿ‌ ಬಸಪ್ಪ ಮುನವಳ್ಳಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button