Election NewsPolitics

*ಮೋದಿಯವರ ಆರೋಪಗಳು ಜನರ ಮೇಲಿನ ಕಾಳಜಿಗಲ್ಲ, ಅವರಿಗಿರುವ ಇಂತದ್ದೊಂದು ಭಯಕ್ಕೆ; ಸಿಎಂ ಟಾಂಗ್*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಜನರ ಪಿತ್ರಾರ್ಜಿತ ಆಸ್ತಿಯ ಮರುಹಂಚಿಕೆ ಮಾಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಬಳಿ ಅಲವತ್ತುಕೊಳ್ಳುತ್ತಿರುವ ಹಿಂದಿನ ನಿಜವಾದ ಉದ್ದೇಶ ಜನರ ಮೇಲಿನ ಕಾಳಜಿಯೂ ಅಲ್ಲ, ದೇಶದ ಮೇಲಿನ ಪ್ರೀತಿಯಿಂದಲೂ ಅಲ್ಲ. ಮೋದಿ ಅವರಿಗೆ ಆತಂಕ ಶುರುವಾಗಿರುವುದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತನ್ನ ಉದ್ಯಮ ಮಿತ್ರರ ಆಸ್ತಿಯ ದಿಢೀರ್‌ ಏರಿಕೆಯ ಹಿಂದಿನ ಸತ್ಯ ಎಲ್ಲಿ ಹೊರಗೆ ಬರುತ್ತದೆಯೋ ಎಂಬ ಭೀತಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಅಲ್ಲದೇ ಅದಕ್ಕೆ ಸಂಬಂಧಿಸಿದ ಸಾಕ್ಷಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಇದಕ್ಕೆ ಸಾಕ್ಷಿ ಇಲ್ಲಿದೆ:

2014ರಲ್ಲಿ ದೇಶದ ನಂ.1 ಶ್ರೀಮಂತನಾಗಿದ್ದ, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 41ನೇ ಸ್ಥಾನದಲ್ಲಿದ್ದ ಅಂಬಾನಿಯ ಒಟ್ಟು ಆಸ್ತಿ ಮೌಲ್ಯ 1.75 ಲಕ್ಷ ಕೋಟಿ ರೂ. ಆಗಿತ್ತು. 2023ರಲ್ಲಿ ಅಂಬಾನಿ ಜಾಗತಿಕ ಪಟ್ಟಿಯಲ್ಲಿ ಭಾರಿ ನೆಗೆತ ಕಂಡು 9ನೇ ಸ್ಥಾನಕ್ಕೇರಿದ್ದರು. ನರೇಂದ್ರ ಮೋದಿ ಅವರ ಕೃಪಕಟಾಕ್ಷದಿಂದ ಹತ್ತು ವರ್ಷಗಳಲ್ಲಿ ಅಂಬಾನಿ ಆಸ್ತಿಯಲ್ಲಿಲ್ಲಾದ ಏರಿಕೆ 96 ಲಕ್ಷ ಕೋಟಿ ರೂ. ಅಂದರೆ 350% ಹೆಚ್ಚಳವಾಗಿದೆ.

ಇದು ಅಂಬಾನಿಯ ಕತೆಯಾದರೆ ಅದಾನಿಯ ಕತೆ ಇದಕ್ಕಿಂತಲೂ ರೋಚಕವಾಗಿದೆ.
2014ರಲ್ಲಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಲ್ಲಿದ್ದ ಅದಾನಿ ಆಸ್ತಿಯ ಒಟ್ಟು ಮೌಲ್ಯ 60 ಸಾವಿರ ಕೋಟಿ ರೂಪಾಯಿಯಾಗಿತ್ತು. ನರೇಂದ್ರ ಮೋದಿ ಅವರ ಅತಿಯಾದ ಕಾಳಜಿ, ಪ್ರೀತಿಯ ಫಲವಾಗಿ ಅದಾನಿ ಆಸ್ತಿ ಕೇವಲ ಹತ್ತು ವರ್ಷದಲ್ಲಿ 70 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಕಂಡಿತು ಅಂದರೆ 1225% ಹೆಚ್ಚಳವಾಯಿತು.
ಕಳೆದ ವರ್ಷ ಅದಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 437ನೇ ಸ್ಥಾನದಿಂದ ನೇರವಾಗಿ 17ನೇ ಸ್ಥಾನಕ್ಕೆ ಜಿಗಿದದ್ದು ಮೋದಿ ಅವರ ಜೊತೆಗಿನ ಒಡನಾಟದ ಫಲ ಎಂಬುದಕ್ಕೆ ನಿದರ್ಶನವಾಗಿದೆ.

ನರೇಂದ್ರ ಮೋದಿ ಅವರು ಮತ ನೀಡಿದ ಮತದಾರರನ್ನು ಕೈಬಿಟ್ಟರೂ ತಮ್ಮನ್ನು ನಂಬಿದ ಉದ್ಯಮಿಗಳನ್ನು ಕೈಬಿಡುವವರಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ನ್ಯಾಯ ಪತ್ರಕ್ಕೆ ದೇಶದ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ, ಈ ಸ್ಪಂದನೆ ಮತಗಳಾಗಿ ಪರಿವರ್ತನೆಯಾಗಿ ಕಾಂಗ್ರೆಸ್‌ ಗೆ ಗೆಲುವಾದರೆ ತಮ್ಮ ಪದವಿಗೂ ಸಂಚಕಾರ, ತಮ್ಮ ಗೆಳೆತನದ ಹಿಂದಿರುವ ಗುಟ್ಟು ರಟ್ಟಾಗುತ್ತದೆ ಎಂದು ಕಾಂಗ್ರೆಸ್‌ನ ಪ್ರಣಾಳಿಕೆಯ ಬಗ್ಗೆ ಜನರಲ್ಲಿ ಭಯ ಹುಟ್ಟಿಸುವ, ಅಪಪ್ರಚಾರ ಮಾಡುವ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಳೆದ ನಾಲ್ಕಾರು ದಿನಗಳಿಂದ ಮೋದಿ ಅವರು ತಮ್ಮ ಪ್ರಚಾರ ಸಭೆಗಳಲ್ಲಿ ಬಿಜೆಪಿ ಪ್ರಣಾಳಿಕೆಯ ಬಗ್ಗೆ ಉಸಿರೆತ್ತದೆ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ಪ್ರಣಾಳಿಕೆಯನ್ನೇ ಪ್ರಸ್ತಾಪ ಮಾಡುತ್ತಿರುವುದು ಅವರ ಭಯ, ಹತಾಶೆಯನ್ನು ತೋರಿಸುತ್ತದೆ ಎಂದು ಟಾಂಗ್ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button