ಸಂತ್ರಸ್ತರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಪರಿಹಾರ ಸಾಮಗ್ರಿಗಳ ವಿತರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಪ್ರವಾಹಬಾಧಿತ ಬೆಳಗಾವಿ ಸೇರಿದಂತೆ ೧೩ ಜಿಲ್ಲೆಗಳಲ್ಲಿ ಆಹಾರ ಸಾಮಗ್ರಿ ಮಾತ್ರವಲ್ಲದೇ ಔಷಧಿ ಸಾಮಗ್ರಿಗಳು ಸೇರಿದಂತೆ ಒಟ್ಟಾರೆ ೨೯ ಸಾಮಗ್ರಿಗಳನ್ನು ಒಳಗೊಂಡಿರುವ ಪರಿಹಾರ ಕಿಟ್ಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತಿದೆ.
ಇದುವರೆಗೆ ಒಂದು ಲಕ್ಷ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ ಎಂದು ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಘಟಕದ ಸಭಾಪತಿ ನಾಗಣ್ಣ ತಿಳಿಸಿದರು.
ಸೋಮವಾರ ವಾರ್ತಾ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ಪ್ರವಾಹದಿಂದ ನಿರಾಶ್ರಿತ, ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಕುರಿತು ಪತ್ರಿಕಾ ಗೋಷ್ಠಿಯನ್ನು ಆಯೋಜಿಸಲಾಗಿತ್ತು.
೨೯ ಸಾಮಗ್ರಿಗಳನ್ನು ಒಳಗೊಂಡಿರುವ ಪರಿಹಾರ ಕಿಟ್ ಜೊತೆಗೆ ೨೦ ಕೆ.ಜಿ ಅಕ್ಕಿ, ೧ ಬಕೆಟ್ ಹಾಗೂ ಇದರೊಂದಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ನೋಟ್ ಪುಸ್ತಕ, ಪೆನ್ಸಿಲ್ ಇತ್ಯಾದಿ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ನಾಗಣ್ಣ ಅವರು ಹೇಳಿದರು.
ತಕ್ಷಣಕ್ಕೆ ಆಹಾರ ಪದಾರ್ಥಗಳನ್ನು ನೀಡುವ ದೃಷ್ಟಿಯಿಂದ ಮೊದಲು ಆಹಾರ ಸಾಮಗ್ರಿ ವಿತರಣೆ ಮಾಡಲಾಗಿದೆ ಹಾಗೂ ಅದರೊಂದಿಗೆ ಸಂತ್ರಸ್ತರಿಗೆ ಸದ್ಯದ ಪರಿಸ್ಥಿತಿಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಿದ್ದೇವೆ ಎಂದು ವಿವರಿಸಿದರು.
6 ತಿಂಗಳ ಅವಧಿಗೆ ಸಾಕಾಗುವಷ್ಟು ಸಾಮಗ್ರಿ
ಸಂತ್ರಸ್ತ ಕುಟುಂಬಗಳ ಜೀವನ ಸಾಮಾನ್ಯ ಸ್ಥಿತಿಗೆ ತಲುಪಲು ಇನ್ನೂ ಐದು ವರ್ಷಗಳು ಬೇಕು.
ಬಾಗಲಕೋಟೆಯಲ್ಲಿ ೧೯೬ ಗ್ರಾಮಗಳು ಬಾಧಿತ ೧.೫೦ ಲಕ್ಷ ಜನರ ಸ್ಥಳಾಂತರ ಮಾಡಲಾಗಿದ್ದು, ಇದೇ ರೀತಿ ಬೆಳಗಾವಿಯಲ್ಲಿ ಕೂಡ ಪರಿಸ್ಥಿತಿ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಸಂತ್ರಸ್ತರ ನೆರವಿಗೆ ನಿರ್ಧಾರ ಮಾಡಲಾಯಿತು ಎಂದು ನಾಗಣ್ಣ ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಪರಿಹಾರ ಸಾಮಗ್ರಿ ವಿತರಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಪ್ರತಿ ಹಳ್ಳಿಗೆ ಹೋದಾಗ ಎಲ್ಲ ಕುಟುಂಬಗಳಿಗೆ ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ಮುಂಚೆಯೇ ಗ್ರಾಮದಲ್ಲಿ ಸಂಚರಿಸಿ ಕುಟುಂಬಗಳ ಪಟ್ಟಿ ಮಾಡಿಕೊಂಡು ನಂತರ ೬ ತಿಂಗಳ ಅವಧಿಗೆ ಸಾಕಾಗುವಷ್ಟು ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಒಂದು ಕೋಟಿ ರೂಪಾಯಿ ಮೌಲ್ಯದ ಸಾಮಗ್ರಿ
ಇದುವರೆಗೆ ಒಂದು ಕೋಟಿ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಸಂತ್ರಸ್ತರ ಆರೋಗ್ಯದ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಬರುವ ಪ್ರವಾಹಕ್ಕಿಡಾದ ಎಲ್ಲ ತಾಲೂಕುಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಕೂಡ ನಡೆಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಶಾಖೆ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಚೇರಮನ್ ರಾದ ಡಾ.ಎಸ್. ಬಿ. ಕುಲಕರ್ಣಿ ಅವರು ಹೇಳಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಸಂತ್ರಸ್ತರಿಗೆ ಸಾಮಗ್ರಿಗಳ ವಿತರಣೆ ಕುರಿತು ಬಾಗಲಕೋಟೆ ಜಿಲ್ಲಾ ಶಾಖೆ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಚೇರಮನ್ ರಾದ ಆನಂದ ಎಸ್ ಜಿಗಜಿನ್ನಿ ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಶಾಖೆ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ವಾಯಿಸ್ ಚೇರಮನ್ ಡಾ. ವಿ ಎಲ್ ಎಸ್ ಕುಮಾರ, ಬೆಳಗಾವಿ ಜಿಲ್ಲಾ ಶಾಖೆ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಚೇರಮನ್ ಡಾ.ಎಸ್ ಬಿ ಕುಲಕರ್ಣಿ, ಬಾಗಲಕೋಟೆ ಜಿಲ್ಲಾ ಶಾಖೆ ಭಾರತಿಯ ರೆಡ್ ಕ್ರಾಸ್ ಸಂಸ್ಥೆ ಚೇರಮನ್ ಆನಂದ ಎಸ್ ಜಿಗಜಿನ್ನಿ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸದಸ್ಯರಾದ ವಿಜಯ ಕುಮಾರ ಪಾಟೀಲ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸದಸ್ಯರಾದ ಎಂ.ಎ ಶಕೀಬ, ಭಾರತಿಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸದಸ್ಯರಾದ ಸಂಗಮೇಶ ವೈಜಾಪೂರ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ