Belagavi NewsBelgaum NewsElection NewsKannada NewsKarnataka NewsPolitics

ಎಲ್ಲ ಯೋಜನೆಗಳನ್ನು ಪಕ್ಷಪಾತವಿಲ್ಲದೆ ಕ್ಷೇತ್ರದ ಜನತೆಗೆ ತಲುಪಿಸಲಾಗಿದೆ: ಅಣ್ಣಾಸಾಹೇಬ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ,
ನಿಪ್ಪಾಣಿ:
ಸಂಸದನಾಗಿ ಆಯ್ಕೆಯಾದ ಮೊದಲ ಅರ್ಧದಲ್ಲಿ ಕೋವಿಡ್ ಮತ್ತು ಪ್ರವಾಹದ ಸಮಸ್ಯೆಗಳು ಎದುರಾಗಿದ್ದವು. ಆದಾಗ್ಯೂ ನನ್ನ ಅವಧಿಯಲ್ಲಿ ೮,೮೧೦ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಕಿಸಾನ್ ಸಮ್ಮಾನ್, ಉಜ್ವಲ ಗ್ಯಾಸ್, ಜಲಜೀವನ ಮಿಷನ್, ಆಯುಷ್ಮಾನ್, ಭಾಗ್ಯಲಕ್ಷ್ಮೀ, ಮನೆಮನೆಗೆ ಶೌಚಾಲಯಗಳಂತಹ ಕೇಂದ್ರದ ಯೋಜನೆಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಕ್ಷೇತ್ರದ ಜನತೆಗೆ ತಲುಪಿಸಲಾಗಿದೆ. ಇವು ಶಾಶ್ವತ ಗ್ಯಾರಂಟಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳಾಗಿವೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಚಿಕ್ಕೋಡಿ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಒಂದೆಡೆ ಕಾಂಗ್ರೆಸ್ ಪಂಚಸೂತ್ರ ಖಾತರಿ ಮೋಸದ ಯೋಜನೆ ನೀಡಿದೆ, ಮತ್ತೊಂದೆಡೆ ಡಬಲ್ ರಿಕವರಿ ಮಾಡಿದ್ದಾರೆ. ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ೬೫ ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ೧೦ ವರ್ಷಗಳಲ್ಲಿ ಮಾಡಿದೆ. ದೇಶದ ಘನತೆಯನ್ನು ಕಾಪಾಡಲು ಮತ್ತು ಇನ್ನಷ್ಟೂ ಅಭಿವೃದ್ಧಿ ಪಡಿಸಲು ಇನ್ನೂ ೫ ವರ್ಷ ಅಧಿಕಾರ ನೀಡುವುದು ಅಗತ್ಯವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ನನ್ನನ್ನು ಕಳೆದ ಸಲಕ್ಕಿಂತ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ನಿಮ್ಮ ಸೇವೆಯನ್ನು ಮಾಡುವ ಅವಕಾಶ ನೀಡಬೇಕು ಎಂದು ಅವರು ಮತದಾರಲ್ಲಿ ಮನವಿ ಮಾಡಿದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೭ ವರ್ಷಗಳಾಗಿವೆ. ಕಾಂಗ್ರೆಸ್ ೬೦ ರಿಂದ ೬೫ ವರ್ಷಗಳ ಕಾಲ ದೇಶವನ್ನು ಆಳಿದರೂ ಅವರ ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಆದರೆ ದೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೊಡ್ಡ ಬೆಳವಣಿಗೆಯಾಗಿವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಯಿತು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸೇನಾ ಸಿಬ್ಬಂದಿಗೆ ಭದ್ರತೆ ಇರಲಿಲ್ಲ. ಯೋಧರೊಬ್ಬರು ಹುತಾತ್ಮರಾದರೆ ಅವರ ಬಟ್ಟೆಗಳನ್ನು ಮಾತ್ರ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ ಹುತಾತ್ಮ ಯೋಧರ ಪಾರ್ಥಿವ ಶರೀರವನ್ನು ಅವರ ಕುಟುಂಬದವರಿಗೆ ನೀಡಲು ವಾಜಪೇಯಿ ಮಹತ್ವದ ನಿರ್ಧಾರ ಕೈಗೊಂಡರು ಎಂದರು.
೨೦೧೪ರಲ್ಲಿ ಮೋದಿಜಿಯ ರೂಪದಲ್ಲಿ ಒಬ್ಬ ಯುಗಪುರುಷನ ಆಡಳಿತ ಆರಂಭಗೊಂಡಿತು. ಮೊದಲು ಎಲ್ಲಾ ದೇಶಗಳು ಭಾರತವನ್ನು ವಿಭಿನ್ನವಾಗಿ ನೋಡುತ್ತಿದ್ದವು. ಆದರೆ ಈಗ ಮೋದಿಯವರ ಕಾಲದಲ್ಲಿ ಎಲ್ಲ ದೇಶಗಳೂ ಸೆಲ್ಯೂಟ್ ಹೊಡೆಯುತ್ತಿವೆ. ಈ ಹಿಂದೆ ದೇಶದ ಮೇಲೆ ಉಗ್ರರ ದಾಳಿ ಹೆಚ್ಚಿತ್ತು. ಆದರೆ ಮೋದಿಯವರ ಅವಧಿಯಲ್ಲಿ ಭಯೋತ್ಪಾದಕರ ದಾಳಿ ಕಡಿಮೆಯಾಗಿದೆ. ರಷ್ಯಾ ಜೊತೆಗಿನ ಯುದ್ಧದ ವೇಳೆ ಭಾರತದಲ್ಲಿ ಸಿಕ್ಕಿಬಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತರುವ ಕೆಲಸವನ್ನು ಮೋದಿಜಿ ಮಾಡಿದ್ದಾರೆ. ಮೋದಿ ಅವರು ಇದುವರೆಗೆ ಉಜ್ವಲ ಗ್ಯಾಸ್ ಯೋಜನೆ ಮೂಲಕ ೧೧ ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್ ಕಿಟ್ ವಿತರಿಸಿದ್ದಾರೆ ಮತ್ತು ಶೌಚಾಲಯ, ಆವಾಸ ಮನೆ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ಮುಂತಾದ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ಸಿಕ್ಕಿದೆ. ಹಾಗಾಗಿ ನನ್ನಂತಹ ಮಹಿಳೆ ರಾಜ್ಯ ಸಚಿವೆಯಾಗಬಹುದು. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದ್ದು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಸಮಾಧಿಗೆ ಇಪ್ಪತ್ತು ಎಕರೆ ಭೂಮಿ ಕೊಟ್ಟಿದೆ, ಆದರೆ ದೆಹಲಿಯಲ್ಲಿ ಅಂಬೇಡ್ಕರ್ ಅವರ ಸಮಾಧಿಗೆ ಕಾಂಗ್ರೆಸ್ ಒಂದು ಇಂಚು ಜಾಗವನ್ನೂ ನೀಡಿಲ್ಲ. ಇಂತಹ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಪಾಠ ಕಲಿಸಿ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿಗಳು ಚುನಾವಣಾ ಉದ್ದೇಶವನ್ನು ಇಟ್ಟುಕೊಂಡಂತವು. ಬಿಜೆಪಿ ಗ್ಯಾರಂಟಿಗಳು ಮುಂದಾಲೋಚನೆ ಇಟ್ಟುಕೊಂಡು ದೀರ್ಘಕಾಲಿಕ ಬಾಳಿಕೆಯ ಯೋಜನೆಗಳು. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿವೆ. ಮತದಾರ ತನಗೆ ಇರುವ ಬೃಹಸ್ತಾಸ್ತ್ರವಾಗಿರುವ ತನ್ನ ಮತವನ್ನು ತಪ್ಪದೇ ಚಲಾಯಿಸಿ ಕಾಂಗ್ರೆಸ್ ಸೋಲಿಸಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಸಚಿವರ ಮಕ್ಕಳಿಗೆ ಕಾಂಗ್ರೆಸ್ ಟಿಕೇಟ್ ನೀಡಿದ್ದು, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ಕಳೆದ ೨-೩ ದಶಕಗಳಿಂದ ಹೋರಾಟ ಮಾಡಿ ಮೇಲಕ್ಕೆ ಬಂದಿರುವವರು. ನರೇಂದ್ರ ಮೋದಿ ಅವರ ಗೆಲುವು ದೇಶದ ಗೆಲವು, ನರೇಂದ್ರ ಮೋದಿ ಅವರು ಸೋತರೆ ಇಡೀ ದೇಶವೇ ಸೋತಂತೆ ಎಂದರು.
ಮಹಾರಾಷ್ಟ್ರದ ಇಚಲಕರಂಜಿಯ ಮಾಜಿ ಶಾಸಕ ಸುರೇಶ ಹಳವಣಕರ, ಕೊಲ್ಹಾಪೂರದ ಬಿಜೆಪಿ ಜಿಲ್ಲಾಧ್ಯಕ್ಷ ಸಮರ್ಜಿತಸಿಂಗ್ ಘಾಟಗೆ, ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಮಾತನಾಡಿ ಅಣ್ಣಾಸಾಹೇಬ ಜೊಲ್ಲೆ ಪರ ಮತಯಾಚಿಸಿದರು. ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಸಂಚಾಲಕ ಜಯವಂತ ಭಾಟಲೆ, ರಾಜೇಂದ್ರ ಗುಂದೆಶಾ, ಸಮಿತ ಸಾಸನೆ, ಅವಿನಾಶ ಪಾಟೀಲ, ಸುನೀಲ ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ದುಂಡಪ್ಪ ಬೆಂಡವಾಡೆ, ಸಿದ್ದು ನರಾಟೆ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button