Latest

ಕೆಪಿಎಲ್: ಫೈನಲ್ ತಲುಪಿದ ಬಳ್ಳಾರಿ ಟಸ್ಕರ್ಸ್

ಕೆಪಿಎಲ್: ಫೈನಲ್ ತಲುಪಿದ ಬಳ್ಳಾರಿ ಟಸ್ಕರ್ಸ್

 

ಮೈಸೂರು-
ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 37 ರನ್ ಅಂತರದಲ್ಲಿ ಜಯ ಗಳಿಸಿದ ಬಳ್ಳಾರಿ ಟಸ್ಕರ್ಸ್ ತಂಡ 2019ನೇ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ ನ  ಫೈನಲ್ ತಲುಪಿದೆ.
202 ರನ್ ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 164 ರನ್ ಗಳಿಸಿತು.
ಕಠಿಣ ಸವಾಲನ್ನು ಎದುರಿಸಿದ ಬೆಳಗಾವಿ ಪ್ಯಾಂಥರ್ಸ್ ಪರ ಅಭಿನವ್ ಮನೋಹರ್ (62 ನಾಟೌಟ್),  ಅವಿನಾಶ್ ಡಿ. (31) ಹಾಗೂ ಸ್ಟಾಲಿನ್ ಹೂವರ್ (39) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರೇ ಹೊರತು ಅವರ ಯತ್ನ ತಂಡಕ್ಕೆ ಜಯ ತರಲಿಲ್ಲ.
ಈ ಸೋಲಿನಿಂದ ಪ್ಯಾಂಥರ್ಸ್ ಪಡೆ ಧೃತಿಗೆಡಬೇಕಾಗಿಲ್ಲ, ಏಕೆಂದರೆ ಎಲಿಮಿನೇಟರ್ ನಲ್ಲಿ ಗೆಲ್ಲುವ ತಂಡದೊಂದಿಗೆ ಆಡಿ ಫೈನಲ್ ತಲಪುವ ಅ‌ವಕಾಶವನ್ನು ಹೊಂದಿದೆ.

 ಪ್ಯಾಂಥರ್ಸ್ ಗೆ 202 ರನ್ ಗುರಿ


ನಾಯಕ ಸಿ.ಎಂ. ಗೌತಮ್ (96) ಅವರ ಅರ್ಧ ಶತಕ, ಜಿಶಾನ್ ಅಲಿ ಅವರ ಮಿಂಚಿನ 32 ರನ್ ಹಾಗೂ ಕಾರ್ತಿ ಅವರ ಬಿರುಸಿನ 25 ರನ್ ಗಳ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ ನ ಕ್ವಾಲಿಫಯರ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಗೆ 202 ರನ್ ಗಳ ಗುರಿ ನೀಡಿದೆ.
ವೇಗದಲ್ಲಿ ರನ್ ಗಳಿಸಬಲ್ಲ ಆಟಗಾರರು ಲಗುಬಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದಾಗ ನಾಯಕನ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಸಿ.ಎಂ. ಗೌತಮ್ ಅಂತಿಮ ಓವರ್ ವರೆಗೂ ನಿಂತು 96 ರನ್ ಗಳಿಸಿ ಸವಾಲಿನ ಮೊತ್ತಕ್ಕೆ ಕಾರಣರಾದರು. 63 ಎಸೆತಗಳನ್ನೆದುರಿಸಿದ ಗೌತಮ್ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಆರಂಭಿಕ ಆಘಾತ ಕಂಡ ತಂಡಕ್ಕೆ ಆಸರೆಯಾದರು. ಕಾರ್ತಿಕ್ ಅವರೊಂದಿಗೆ ನಾಲ್ಕನೇ ವಿಕೆಟ್ ಜತೆಯಾಟದಲ್ಲಿ ಅರ್ಧ ಶತಕ ಗಳಿಸಿದ್ದು, ಅನುಭವದ ಆಟಕ್ಕೆ ಸಾಕ್ಷಿಯಾಗಿತ್ತು. ಕಾರ್ತಿಕ ಕೇವಲ  18 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ರನ್ ವೇಗವನ್ನು ಹೆಚ್ಚಿಸಿದರು. ಬಳ್ಳಾರಿ ಟಸ್ಕರ್ಸ್ 10 ರನ್ ಸರಾಸರಿಯನ್ನು ತಲುಪಲು ಜಿಶಾನ್ ಅಲಿ ಗಳಿಸಿದ 32 ರನ್ ಪ್ರಮುಖ ಪಾತ್ರವಹಿಸಿತು. ಕೇವಲ 9 ಎಸೆತಗಳನ್ನು ಎದುರಿಸಿದ ಅಲಿ ಅವರ ಇನಿಂಗ್ಸ್ ನಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು.

ಉತ್ತಮ ಆರಂಭ ಕಂಡ ಪ್ಯಾಂಥರ್ಸ್


ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಳ್ಳಾರಿ ಟಸ್ಕರ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ, ಮಿಂಚಿನ ರನ್ ಗಳಿಸಬಲ್ಲ ಅಭಿಷೇಕ್ ರೆಡ್ಡಿ ಕೇವಲ 10 ಎಸೆತಗಳನ್ನು ಎದುರಿಸಿ 16 ರನ್ ಗಳಿಸುತ್ತಲೇ ಅವಿನಾಶ್ ಡಿ.. ಬೌಲಿಂಗ್ ನಲ್ಲಿ ಸಮರ್ಥ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದ ಟಸ್ಕರ್ಸ್ ರನ್ ಗಳಿಕೆಗೆ ಕಡಿವಾಣ ಬಿದ್ದಂತಾಯಿತು.
ಈ ಹಿಂದಿನ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚಿ ದಾಖಲೆ ಬರೆದಿದ್ದ ಕೃಷ್ಣಪ್ಪ ಗೌತಮ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು, ಟಸ್ಕರ್ಸ್ ಪಾಲಿಗೆ ದೊಡ್ಡ ಆಘಾತವೇ ಸರಿ. ವೇಗದ ಶತಕ ಹಾಗೂ ಅತಿ ಹೆಚ್ಚು ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದ ಗೌತಮ್ ಅವರಿಂದ ಈ ಪಂದ್ಯದಲ್ಲೂ ಸಾಕಷ್ಟು ನಿರೀಕ್ಷೆ ಇದ್ದಿತ್ತು. ಆದರೆ ಸ್ಟಾಲಿನ್ ಹೂವರ್ ಅವರ ಬೌಲಿಂಗ್ ಲಯವನ್ನು ಅರಿಯುವಲ್ಲಿ ವಿಫಲರಾದ ಗೌತಮ್, ಅಬ್ಬರದ ಹೊಡೆತಕ್ಕೆ ಮನ ಮಾಡಿ, ರಕ್ಷಿತ್ ಗೆ ಕ್ಯಾಚಿತ್ತರು. ಗೌತಮ್ ಇದೇ ಮೊದಲ ಬಾರಿ ಶೂನ್ಯ ಗಳಿಕೆಯಲ್ಲಿ ಪೆವಿಲಿಯನ್ ಸೇರಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಿರುವುದು ಸಹಜ.

ಪ್ರತಿಯೊಂದು ಇನಿಂಗ್ಸ್ ನಲ್ಲೂ ಭರವಸೆಯ ಆಟ ಪ್ರದರ್ಶಿಸಿದ್ದ ದೇವದತ್ತ ಪಡಿಕ್ಕಲ್ ಕೂಡ ತಾಳ್ಮೆಯ ಆಟವಾಡಲು ಮನ ಮಾಡಿ 16 ಎಸೆತಗಳಲ್ಲಿ ಕೇವಲ 19 ರನ್ ಗಳಿಸಿ ರಿತೇಶ್ ಭಟ್ಕಳ್ ಅವರಿಗೆ ವಿಕೆಟ್ ಒಪ್ಪಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button