Kannada NewsKarnataka News

ವಚನಗಳು ಶರಣರ ಅಂತರಂಗದ ಮಾತುಗಳು

ವಚನಗಳು ಶರಣರ ಅಂತರಂಗದ ಮಾತುಗಳು

ಪ್ರಗತಿವಾಹಿನಿ ಸುದ್ದಿ, ಕಲ್ಲೋಳಿ (ಮೂಡಲಗಿ):
‘ವಚನಗಳು ಶರಣರ ಅಂತರಂಗದ ಮಾತುಗಳಾಗಿದ್ದು, ಅವುಗಳಿಗೆ ಬಹಿರಂಗವನ್ನು ಶುದ್ಧಿಕರಿಸುವ ಶಕ್ತಿ ಇದೆ’ ಎಂದು ಪ್ರೊ. ಸುರೇಶ ಲಂಕೆಪ್ಪನ್ನವರ ಹೇಳಿದರು.
ಅವರು ಇಲ್ಲಿಯ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆತಿಥ್ಯದಲ್ಲಿ ಮೂಡಲಗಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಲಿ. ಡಾ. ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಜನ್ಮದಿನ ಮತ್ತು ‘ವಚನ ದಿನ’ ಆಚರಣೆ ಸಮಾರಂಭದಲ್ಲಿ ‘ವಚನ ಸಾಹಿತ್ಯ ಮತ್ತು ಜೀವನ ಮೌಲ್ಯಗಳು’ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯವು ಕನ್ನಡ ಸಾರಸ್ವತವನ್ನು ಶ್ರೀಮಂತಗೊಳಿಸಿದ್ದ ಸಾಹಿತ್ಯವಾಗಿದ್ದು, ಸಾಂಸ್ಕೃತಿಕವಾಗಿ ಅವು ಅಮೃತವಾಹಿನಿಯಾಗಿವೆ ಎಂದರು.
ಪ್ರೊ. ಸುರೇಶ ಮುದ್ದಾರ ‘ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ’ ಕುರಿತು ಮಾತನಾಡಿ, ಶಿವಶರಣರ ಸಾಹಿತ್ಯವನ್ನು ಅವಿರತ ಶ್ರಮದಿಂದ ಬೆಳಕಿಗ ತಂದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.
ಮುಖ್ಯ ಅತಿಥಿ ಬಾಲಶೇಖರ ಬಂದಿ ಮಾತನಾಡಿ, ಜನಪದ ವಿಶ್ವವಿದ್ಯಾಲಯದಂತೆ ಡಾ. ಫ.ಗು. ಹಳಕಟ್ಟಿ ಅವರ ಹೆಸರಿನಲ್ಲಿ ‘ವಚನ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿ ವಚನಗಳ ಅಧ್ಯಯನ ನಡೆಯಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ವಚನ ಕಂಠ ಮಾಡುವ ಮೂಲಕ ವಚನ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಸಂಸ್ಥೆ ನಿರ್ದೇಶಕರಾದ ಬಿ.ಎಸ್. ಗೋರೋಶಿ, ಎಂ.ಎಸ್. ಖಾನಾಪುರ ಅತಿಥಿಯಾಗಿದ್ದರು.
ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡಿದರು.
ಡಾ. ಕೆ.ಎಸ್. ಪರವ್ವಗೋಳ, ಪ್ರೊ. ಎಸ್.ಎಂ. ನಿಂಗನೂರ ನಿರೂಪಿಸಿದರು, ಪರಿಷತ್ ಕಾರ್ಯದರ್ಶಿ ಪ್ರೊ. ಬಿ.ಎಲ್. ಮಾದಗೌಡರ ವಂದಿಸಿದರು.
 ವಚನ ಕಂಠಪಾಠದಲ್ಲಿ ವಿಜೇತರು: ನೀಲಾ ಬೆಳವಿ, ಮೂಡಲಗಿ ಉಮಾದೇವಿ ಪ್ರೌಢ ಶಾಲೆ (ಪ್ರಥಮ), ಅಮೃತಾ ಕಬಾಡಗಿ, ರಾಮಲಿಂಗೇಶ್ವರ ಶಾಲೆ, ಕಲ್ಲೋಳಿ (ದ್ವಿತೀಯ), ಪೂಜಾ ಕಂಕಣವಾಡಿ, ಮೂಡಲಗಿ ಚೈತನ್ಯ ಆಶ್ರಮ ಶಾಲೆ (ತೃತೀಯ). ವಿಜೇತರಿಗೆ ನಗದು ಬಹುಮಾನ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button