ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಯಾವುದೇ ಸರ್ಕಾರಿ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಸಾಮಗ್ರಿಗಳ ಸರಬರಾಜು ಟೆಂಡರ್ ಪಾರದರ್ಶಕವಾಗಿ ಕಾಯ್ದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಶಾಸಕ ಕುಮಾರ್ ಬಂಗಾರಪ್ಪ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿ ಅವರು, ಅತ್ಯಂತ ಕಡಿಮೆ ಬೆಲೆಗೆ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವುದಾಗಿ ನಮೂದಿಸಿ ಟೆಂಡರ್ ಹಿಡಿಯಲು ಸಾಧ್ಯವಿಲ್ಲ. ಪಾರದರ್ಶಕ ಕಾಯ್ದೆ ಅಧಿನಿಯಮದ ನಿಯಮಾವಳಿಯಂತೆ ಟೆಂಡರ್ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈವರೆಗೆ ನಿರ್ದಿಷ್ಟ ಗುಣಮಟ್ಟದ ಆಹಾರ ಸಮಾಗ್ರಿಗಳನ್ನು ಸರಬರಾಜು ಮಾಡುವ ಸಂಬಂಧ ಟೆಂಡರ್ ನಿಯಮಗಳು ಇರಲಿಲ್ಲ. ಈ ಕಾರಣಕ್ಕಾಗಿಯೇ ವ್ಯತ್ಯಾಸಗಳು ಆಗುತ್ತಿದ್ದವು. ಇದೀಗ ನಿವೃತ್ತ ಹಿರಿಯ ಅಧಿಕಾರಿಯೊಬ್ಬರ ಅಧ್ಯಕ್ಷತೆಯಲ್ಲಿ 8 ಜನರ ಸುಧಾರಣಾ ಸಮಿತಿಯೊಂದನ್ನು ರಚಿಸಿ ಸುಧಾರಣಾ ಕ್ರಮಗಳನ್ನು ಕೋರಲಾಗಿದೆ. ಶೀಘ್ರವೇ ಸಮಿತಿಯು ವರದಿ ನೀಡಲಿರುವುದರಿಂದ ಮುಂದಿನ ವರ್ಷದಿಂದ ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ವಿವರಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಬಹುವರ್ಷಗಳಿಂದ ಒಬ್ಬರೇ ಆಹಾರ ಸಾಮಗ್ರಿಗಳ ಸರಬರಾಜು ಟೆಂಡರ್ ಹಿಡಿಯುತ್ತಿದ್ದು ಕೇವಲ ಒಂದು ರೂ.ಗೆ ರಾಗಿ, 10 ರೂ.ಗೆ ಗೋಧಿ ಸರಬರಾಜು ಮಾಡುವುದಾಗಿ ನಮೂದಿಸಿ ಟೆಂಡರ್ ಹಿಡಿಯಲಾಗುತ್ತಿದೆ ಎಂದು ಪ್ರಸ್ತಾಪಿಸಿದ್ದರು.
ಇದೇ ಸಂದರ್ಭದಲ್ಲಿ ಸಧನದ ಬಹುತೇಕ ಸದಸ್ಯರು ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ