ರಕ್ಷಣಾ ಸಾಮಗ್ರಿಗಳ ಪಹರೆಯಲ್ಲಿದ್ದ ಯೋಧನಿಗೆ ರೈಲು ಡಿಕ್ಕಿ
ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಆಂಧ್ರಪ್ರದೇಶದ ಸಿಕಂದರಾಬಾದ್ ರೈಲು ನಿಲ್ದಾಣದ ಹೊರವಲಯದಲ್ಲಿ ಸಿಗ್ನಲ್ ಗಾಗಿ ಕಾಯುತ್ತ ನಿಂತಿದ್ದ ರೈಲಿನಲ್ಲಿದ್ದ ರಕ್ಷಣಾ ಸಾಮಗ್ರಿಗಳ ಪಹರೆ ಕರ್ತವ್ಯದಲ್ಲಿ ನಿರತನಾಗಿದ್ದ ಯೋಧನ ಮೇಲೆ ಮತ್ತೊಂದು ರೈಲು ಹರಿದ ಪರಿಣಾಮ ತಾಲ್ಲೂಕಿನ ಲಕ್ಕೇಬೈಲ ಗ್ರಾಮದ ಯೋಧ ಮೃತಪಟ್ಟ ಘಟನೆ ಶನಿವಾರ ವರದಿಯಾಗಿದೆ.
ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರುಪ್ಪಿನ ಲಾನ್ಸ್ ನಾಯಕ್ ಹುದ್ದೆಯಲ್ಲಿದ್ದ ಲಕ್ಕೇಬೈಲ ಗ್ರಾಮದ ಯೋಧ ಮಹಾಂತೇಶ ಸಿದ್ಧನಗೌಡ ಪಾಟೀಲ (38) ಈ ಅಪಘಾತದಲ್ಲಿ ಮೃತಪಟ್ಟ ಯೋಧ.
ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿದ್ದ ಮಹಾಂತೇಶ ಗುರುವಾರ ಹೈದರಾಬಾದಿನ ತಮ್ಮ ಯೂನಿಟ್ ನಿಂದ ಸೈನ್ಯಕ್ಕೆ ಸೇರಿದ ಮುಖ್ಯವಾದ ರಕ್ಷಣಾ ಸಾಮಗ್ರಿಗಳನ್ನು ಪೋರಖಣ ಎಂಬಲ್ಲಿಗೆ ಸಾಗಿಸಲು ವಿಶೇಷ ರೈಲಿನಲ್ಲಿ ಹೊರಟಿದ್ದರು.
ತಮ್ಮ ಭದ್ರತಾ ಪಡೆಯ ಸಹೋದ್ಯೋಗಿಗಳೊಂದಿಗೆ ಅವರು ಈ ರೈಲಿನ ಪಹರೆ
ಕಾರ್ಯಕ್ಕೆ ನಿಯುಕ್ತಿಗೊಂಡಿದ್ದರು. ಇವರು ಪ್ರಯಾಣಿಸುತ್ತಿದ್ದ ರೈಲು ಸಿಕಂದರಾಬಾದ್
ನಿಲ್ದಾಣದ ಹೊರವಲಯದಲ್ಲಿ ಸಿಗ್ನಲ್ ಸಿಗದೇ ನಿಂತಿತ್ತು.
ಈ ಸಂದರ್ಭದಲ್ಲಿ ಅವರು ರೈಲಿನ ಕೊನೆಯ ಬೋಗಿಯಲ್ಲಿದ್ದ ಸೇನಾ ಸಾಮಗ್ರಿಗಳ ರಕ್ಷಣಾ ಕಾರ್ಯಕ್ಕಾಗಿ ರೈಲ್ವೆ ಹಳಿಯ ಮೇಲೆ ನಿಂತಿದ್ದ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬಂದ ರೈಲಿಗೆ ಅಪ್ಪಳಿಸಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಸಿಕಂದರಾಬಾದ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಆದರೆ ಶುಕ್ರವಾರ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ. ಮೃತರಿಗೆ ತಂದೆ-ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ