ಬ್ಯಾಂಕಿಂಗ್ ವಿಲೀನ ಮುಂದುವರೆದ ಪ್ರಕ್ರಿಯೆ
ಕೆ ಜಿ ಕೃಪಾಲ್
ದೇಶದ ಬ್ಯಾಂಕಿಂಗ್ ಇತಿಹಾಸದಲ್ಲಿ ಬದಲಾವಣೆಯ ಪರ್ವವು ೧೯೪೯ರಲ್ಲಿ ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್ ಜಾರಿಯಾದಾಗಲಿಂದಲೂ ನಿರಂತರವಾಗಿ ನಡೆದಿದೆ. ೧೯೫೧ ರಲ್ಲಿ ಇದ್ದ ೫೬೬ ಬ್ಯಾಂಕ್ ಗಳ ಸಂಖ್ಯೆಯನ್ನು ೧೯೬೯ರ ವೇಳೆಗೆ ೮೫ ಕ್ಕೆ ಇಳಿಸಲಾಯಿತು. ಅಂದರೆ ಸಣ್ಣ ಪುಟ್ಟ ಬ್ಯಾಂಕಿಂಗ್ ಸಂಸ್ಥೆಗಳು, ದುರ್ಬಲ ಬ್ಯಾಂಕ್ ಗಳನ್ನು ಸಬಲವಾದ ಬ್ಯಾಂಕ್ ಗಳಲ್ಲಿ ವಿಲೀನಗೊಳಿಸಿ ಸದೃಢಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ.
ನಂತರ ೧೯೬೯ ರಲ್ಲಿ ಬ್ಯಾಂಕಿಂಗ್ ಇತಿಹಾಸದಲ್ಲೇ ಮೊದಲಬಾರಿ ರೂ.೫೦ ಕೋಟಿ ಠೇವಣಿಯುಳ್ಳ ೧೪ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ನಂತರದಲ್ಲಿ ೧೯೮೦ ರಲ್ಲಿ ರೂ.೨೦೦ ಕೋಟಿ ಠೇವಣಿ ಹೊಂದಿದ್ದ ೬ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಯಿತು.
ಈ ಮೂಲಕ ಆಗಿನ ಶೇ.೯೦ ಕ್ಕೂ ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರವು ಸರ್ಕಾರದ ಮುಷ್ಟಿಯಲ್ಲಿತ್ತು. ಮಾಹಿತಿ ತಂತ್ರಜ್ಞಾನದ ಕೊರತೆಯಿದ್ದ ಆಗಿನ ಕಾಲದಲ್ಲೂ ಸರ್ಕಾರದ ಈ ಕ್ರಮಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಹೆಚ್ಚಿನ ಬಂಡವಾಳ
ಇತ್ತೀಚಿಗೆ ಬ್ಯಾಂಕಿಂಗ್ ವಲಯದಲ್ಲಿ ಉಂಟಾಗಿರುವ ಎನ್ ಪಿ ಎ ಗಳ ಪ್ರಮಾಣದ ಹೆಚ್ಚಳ ಮತ್ತು ಹಲವಾರು ಅಗ್ರಮಾನ್ಯ ಕಂಪೆನಿಗಳಾದಿಯಾಗಿ ಬ್ಯಾಂಕ್ ಸಾಲಗಳನ್ನು ಹಿಂದಿರುಗಿಸಲಸಾಧ್ಯವಾದ ಹಂತಕ್ಕೆ ತಲುಪಿದ ಕಾರಣ, ಬ್ಯಾಂಕ್ ಗಳು ವರ್ಕಿಂಗ್ ಕ್ಯಾಪಿಟಲ್ ಕೊರತೆಯಿಂದ ತೊಂದರೆಗೊಳಗಾಗಿವೆ. ಜಾಗತೀಕರಣದ ಪ್ರಭಾವದಿಂದ ಒಂದು ಸಂಸ್ಥೆ ಸುಸೂತ್ರವಾಗಿ ಕಾರ್ಯ ನಿರ್ವಹಿಸಲು ಯಶಸ್ಸು ಕಾಣಬೇಕಾದಲ್ಲಿ ಅದು ಬೃಹತ್ ಗಾತ್ರದ ಸಂಸ್ಥೆಯಾಗಿ, ಹೆಚ್ಚಿನ ಬಂಡವಾಳ ಹೊಂದಿರಬೇಕಾದುದು ಅತ್ಯವಶ್ಯಕವಾಗಿದೆ.
ಈ ಕಾರಣದಿಂದ ಕೇಂದ್ರ ಸರ್ಕಾರವು ವಿವಿಧ ಮಾಪಕಗಳ ಆಧಾರದ ಮೇಲೆ ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆ ಆರಂಭಿಸಿದೆ. ಈ ದಿಶೆಯಲ್ಲಿ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಂಗ ಸಂಸ್ಥೆ ಬ್ಯಾಂಕ್ ಗಳು ವಿಲೀನಗೊಂಡವು. ನಂತರದಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ವಿಲೀನಗೊಳಿಸಲಾಯಿತು. ಈ ವಿಲೀನದ ಫಲಿತಾಂಶವನ್ನರಿಯಲು ಮತ್ತಷ್ಟು ಸಮಯ ಬೇಕಾಗುತ್ತದೆ.
ಈಗ ಮತ್ತೊಂದು ಸುತ್ತು ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೊಂದಿಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳ ವಿಲೀನ, ಕೆನರಾ ಬ್ಯಾಂಕ್ ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ವಿಲೀನ, ಇಂಡಿಯನ್ ಬ್ಯಾಂಕ್ ನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನಗಳನ್ನು ಪ್ರಕಟಿಸಿದೆ.
ಇದೇನು ಹೊಸದಲ್ಲ…
ಬ್ಯಾಂಕಿಂಗ್ ಸಂಸ್ಥೆಗಳ ವಿಲೀನವೂ ಸಹ ಹಿಂದಿನಿಂದ ನಡೆದುಬಂದಿದೆ. ಇದೇನು ಹೊಸದಲ್ಲ. ೧೯೯೩ರಲ್ಲಿ ರಾಷ್ಟ್ರೀಕೃತ ನ್ಯೂ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ವಿಲೀನಗೊಳಿಸಲಾಯಿತು. ಈ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ಗಳ ಸಂಖ್ಯೆಯು ೧೯ಕ್ಕಿಳಿಯಿತು.
ಇನ್ನು ಖಾಸಗಿ ಬ್ಯಾಂಕ್ ಗಳು ವಿಫಲವಾದಾಗ ಠೇವಣಿದಾರರ ರಕ್ಷಣೆಗಾಗಿ ಅಂತಹ ಬ್ಯಾಂಕ್ ಗಳನ್ನು ಆಗಿನ ಸದೃಢ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸಲಾಗಿದೆ. ನೆಡುಂಗಾಡಿ ಬ್ಯಾಂಕ್ ವಿಫಲವಾದಾಗ ಅದನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ, ಯುನೈಟೆಡ್ ವೆಸ್ಟರ್ನ್ ಬ್ಯಾಂಕ್ ಐ ಡಿ ಬಿ ಐ ಬ್ಯಾಂಕ್ ನಲ್ಲಿ ವಿಲೀನಗೊಳಿಸಲಾಗಿದೆ.
ಅಂದರೆ ಬದಲಾದ ಸಂದರ್ಭಕ್ಕನುಗುಣವಾಗಿ, ಠೇವಣಿದಾರರ, ಗ್ರಾಹಕರ ಹಿತದಿಂದ ಬ್ಯಾಂಕಿಂಗ್ ವಿಲೀನ ನಿರ್ಧಾರಗಳು ಸಮಯದ ಬೇಡಿಕೆಯ ಕಾರಣ ಕೈಗೊಳ್ಳಲಾಗಿದೆ. ಇಲ್ಲಿ ಪ್ರಮುಖವಾಗಿ ವ್ಯವಸ್ಥೆಯನ್ನು ಸಮತೋಲನದಿಂದ ನಿರ್ವಹಿಸುವ ಪ್ರಯತ್ನವಾಗಿದೆ.
ಅಭಿವೃದ್ಧಿಯ ಪಾಲುದಾರರು
ಯಾವುದೇ ಒಂದು ಹೊಸ ಪ್ರಯೋಗವನ್ನು ಜಾರಿಮಾಡ ಬೇಕಾದಾಗ ಅದಕ್ಕೆ ವಿವಿಧ ರೀತಿಯ ವಿರೋಧಗಳು ಹುಟ್ಟಿಕೊಳ್ಳುತ್ತವೆ. ಮೂಲತಃ ಜಾರಿಮಾಡಬೇಕಾದ ಪ್ರಯೋಗವು ಸಾರ್ವಜನಿಕ ಹಿತದಿಂದ ಕೂಡಿದ್ದು, ಜಾರಿಗೊಳಿಸುವ ಅಧಿಕಾರಿವೃಂದವು ಪ್ರಾಮಾಣಿಕವಾದ ಪ್ರಯತ್ನಮಾಡಬೇಕಾದುದು ಅತ್ಯವಶ್ಯಕ.
ಈ ಪ್ರಯೋಗವು ವರ್ಣರಂಜಿತ ಮಾತುಗಳಿಗೆ ಸೀಮಿತಗೊಳ್ಳದೆ, ರಾಜಕೀಯ ಹಸ್ತಕ್ಷೇಪವಿಲ್ಲದ ರೀತಿ, ಸಾಮಾಜಿಕ ಬದ್ಧತೆಯಿಂದ ಕೂಡಿದ ಚಿಂತನೆಯೊಂದಿಗೆ ಜಾರಿಗೊಳಿಸಿದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ.
ಮುಖ್ಯವಾಗಿ ವಿತರಿಸಿದ ಸಾಲದ ಹಣವು ಮಂಜೂರಾದ ಯೋಜನೆಗೆ ಮಾತ್ರ ಸದ್ಬಳಕೆಯಾಗಿದೆ ಎಂಬುದನ್ನು ದೃಢಪಡಿಸಿಕೊಳ್ಳುವ, ಸರ್ವೇಲನ್ಸ್ ವ್ಯವಸ್ಥೆ ಜಾರಿಯಾಗುವವರೆಗೂ ಬ್ಯಾಂಕಿಂಗ್ ಎನ್ ಪಿ ಎ ಗೊಂದಲಗಳು ಕ್ಷೀಣಿತವಾಗುವುದು ಸಾಧ್ಯವಿಲ್ಲ. ಬ್ಯಾಂಕ್ ಗಳು ಗ್ರಾಹಕರನ್ನು ತಮ್ಮ ಅಭಿವೃದ್ಧಿಯ ಪಾಲುದಾರರು ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸುವುದು ಅಗತ್ಯ.
ಬ್ಯಾಂಕ್ ಗಳು ಸೇವಾ ವಲಯದ ಕೇಂದ್ರ ಸಂಸ್ಥೆಗಳಾದ್ದರಿಂದ ಸಾರ್ವಜನಿಕ ಸಂಪರ್ಕಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು. ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ಸ್ಥಳೀಯ ಭಾಷೆಯ ಅರಿವಿರಬೇಕು. ಆಗಲೇ ಆ ಕ್ಷೇತ್ರದ ಜನತೆಯಲ್ಲಿ ನಂಬಿಕೆ ಮೂಡಿಸಲು ಸಾಧ್ಯ. ಸ್ಥಳೀಯ ಗ್ರಾಹಕರ ಸಹಕಾರವಿಲ್ಲದೆ ಯಾವುದೇ ಬ್ಯಾಂಕ್ ಯಶಸ್ಸು ಕಾಣುವುದು ಸಾಧ್ಯವಿಲ್ಲ. ಬ್ಯಾಂಕ್ ಗಳ ಗಾತ್ರ ಹೆಚ್ಚಿಸುವುದು ಅವುಗಳು ಮಾಡಿದ ನ್ಯೂನ್ಯತೆಗಳನ್ನು ಮುಚ್ಚಿಹಾಕುವುದು ಎಂಬ ಭಾವನೆ ಮೂಡಿಸದೆ, ಕೈಗೊಳ್ಳುವ ಚಟುವಟಿಕೆಗಳು ಪಾರದರ್ಶಕವಾಗಿರಬೇಕು.
ಯಾವುದೇ ಒಂದು ಪ್ರಯೋಗ ಯಶಸ್ಸು ಕಾಣಲು ಅಗತ್ಯವಾದ ಸಮಯಾವಕಾಶ ನೀಡಬೇಕು ಮತ್ತು ಆಗಿಂದಾಗ್ಗೆ ಅವಶ್ಯಕವಿರುವ ತಿದ್ದುಪಡಿ, ಬದಲಾವಣೆ ಗಳ ಮೂಲಕ ಗ್ರಾಹಕ ಸ್ನೇಹಿಯಾದಲ್ಲಿ ಉತ್ತಮ ಫಲ ನೀಡಬಲ್ಲುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ