ಸಾವಿರಾರು ಜನರನ್ನು ಹಬ್ಬಕ್ಕೆ ಮನೆ ತಲುಪಿಸಿದ ವಿಶೇಷ ರೈಲು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹಬ್ಬ ಬಂತೆಂದರೆ ಸಾಕು ಜನರ ಪ್ರಯಾಣ ಹೆಚ್ಚಾಗುತ್ತದೆ. ಬೇರೆ ಬೇರೆ ಊರುಗಳಲ್ಲಿರುವವರು ಹಬ್ಬದಾಚರಣೆಗೆ ಮನೆ ಸೇರಲು ಪರದಾಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ಬಸ್, ರೈಲು ಎಲ್ಲವೂ ತುಂಬಿ ತುಳುಕುತ್ತವೆ. ಹಬ್ಬಕ್ಕಾಗಿ ಊರಿಗೆ ಬಂರುವುದು, ಹೋಗುವುದು ದೊಡ್ಡ ಪ್ರಯಾಸದ ಕೆಲಸ.
ನೂರಾರು ವಿಶೇಷ ಬಸ್ ಗಳೂ ಓಡಾಡುತ್ತವೆ. ಖಾಸಗಿ ಬಸ್ ಸಂಸ್ಥೆಗಳು ಹೆಚ್ಚಿನ ಬಸ್ ಓಡಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತವೆ. 3-4 ಪಟ್ಟು ಹೆಚ್ಚು ಹಣ ತೆತ್ತು ಜನ ಟಿಕೆಟ್ ಪಡೆಯುತ್ತಾರೆ. ಇವೆಲ್ಲ ಊರಿಗೆ ತೆರಳಿ ಸಂಬಂಧಿಕರ ಜೊತೆ ಹಬ್ಬ ಆಚರಿಸಬೇಕೆನ್ನುವ ಅಪೇಕ್ಷೆಯಿಂದ. ಆದರೂ ಸಾವಿರಾರು ಜನರು ಹಬ್ಬ ಆಚರಿಸಲು ತವರು ಮನೆ ಸೇರಲು ಸಾಧ್ಯವೇ ಆಗುವುದಿಲ್ಲ. ಇರುವಲ್ಲೇ ಹಬ್ಬ ಮಾಡಿಕೊಂಡು ಸಂಭ್ರಮದಿಂದ ವಂಚಿತರಾಗುತ್ತಾರೆ.
ಈ ಬಾರಿ ರೈಲ್ವೆ ಇಲಾಖೆ ದೇಶದ ವಿವಿಧೆಡೆ ಹೆಚ್ಚಿನ ವಿಶೇಷ ರೈಲು ಓಡಿಸುವ ಮೂಲಕ ಜನರ ಹಬ್ಬದ ಸಂಭ್ರಮಕ್ಕೆ ಕೊಡುಗೆ ನೀಡಿದೆ. ಅದೇ ರೀತಿಯ ಕರ್ನಾಟಕದಲ್ಲೂ ಗಣೇಶ ಹಬ್ಬದ ಸಂದರ್ಭದಲ್ಲಿ 6 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಇದರಿಂದಾಗಿ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ರೈಲಿನ ಮೂಲಕ ಮನೆ ಸೇರುತ್ತಿದ್ದಾರೆ. ಮತ್ತೆ ಅಷ್ಟೇ ಪ್ರಮಾಣದ ಪ್ರಯಾಣಿಕರು ವಾಪಸ್ ಕರ್ತವ್ಯಗಳಿಗೆ ತೆರಳುತ್ತಿದ್ದಾರೆ.
ಇದು ಕೇಂದ್ರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಸುರೇಶ ಅಂಗಡಿಯವರ ಆದೇಶದ ಫಲ. “ಈ ಗಣೇಶ ಚತುರ್ಥಿಯ ಹಬ್ಬದಂದು ಕೇಂದ್ರ ರೈಲ್ವೆ ರಾಜ್ಯ ಸಚಿವರು ಸುರೇಶ ಅಂಗಡಿಯವರ ಆದೇಶದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು-ಮಂಗಳೂರು, ಬೆಂಗಳೂರು-ಕಲಬುರ್ಗಿ, ಬೆಂಗಳೂರು-ಬೆಳಗಾವಿ, ಮೈಸೂರು-ಬೆಂಗಳೂರು-ವಿಜಯಪುರ, ಹುಬ್ಬಳ್ಳಿ-ವಿಜಯಪುರ, ಕಲಬುರ್ಗಿ-ಬೀದರ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕೆಂದು ಸಚಿವರು ಕೋರಿರುತ್ತಾರೆ” ಎಂದು ಅಂಗಡಿಯವರ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ವಿಶೇಷವೆಂದರೆ, ಇಷ್ಟು ಪ್ರಮಾಣದಲ್ಲಿ ರೈಲು ಓಡಿಸಿದರೂ ಖಾಸಗಿ ಬಸ್ ಗಳ ಸಂಖ್ಯೆಗಳಾಗಲಿ, ಅವುಗಳಿಗೆ ಬುಕ್ಕಿಂಗ್ ಪ್ರಮಾಣವಾಗಲಿ ಕಡಿಮೆಯಾಗಿಲ್ಲ. ಆದರೆ ಪ್ರಯಾಣ ದರದಲ್ಲಿ ನಿಯಂತ್ರಣವಾಗಿದೆ. ಅಂದರೆ ರೈಲು ಓಡಿಸಿದ್ದರಿಂದ ಅಷ್ಟು ಹೆಚ್ಚಿನ ಪ್ರಮಾಣದಲ್ಲಿ ಜನರು ಹಬ್ಬಕ್ಕಾಗಿ ಊರಿಗೆ ಬರಲು ಸಾಧ್ಯವಾಗಿದೆ. ವಿವಿಧ ಊರುಗಳಿಗೆ ಬೇಡಿಕೆ ಇರುವ ರೈಲಿನ ಪ್ರಮಾಣವನ್ನು ತಿಳಿದು ರೈಲ್ವೆ ಇಲಾಖೆ ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಹೆಚ್ಚಿನ ರೈಲು ಓಡಿಸುವ ವ್ಯವಸ್ಥೆ ಮಾಡಬೇಕಿದೆ.
ಸಂಬಂಧಿಸಿದ ಸುದ್ದಿಗಳು –
ರೈಲ್ವೆಯಲ್ಲಿ ಪ್ಲ್ಯಾಸ್ಟಿಕ್ ಬಳಕೆ ನಿಷೇಧ -ಸುರೇಶ ಅಂಗಡಿ
ಬೆಳಗಾವಿ-ಬೆಂಗಳೂರು ತತ್ಕಾಲ್: ಸುರೇಶ ಅಂಗಡಿ ಟ್ವೀಟ್
ಸುರೇಶ ಅಂಗಡಿಯಿಂದ ಬೆಳಗಾವಿಗೆ ಮತ್ತೊಂದು ಕೊಡುಗೆ
ಬಜೆಟ್ ಗೆ ಮುನ್ನವೇ ಬೆಳಗಾವಿಗೆ ಸುರೇಶ ಅಂಗಡಿ ಭರ್ಜರಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ