ತ್ಯಾಜ್ಯ ವಿಲೇವಾರಿಗೆ ಬಾರ್ ಕೋಡಿಂಗ್ ವ್ಯವಸ್ಥೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಬಾರ್ ಕೋಡಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು ಹದಿನೈದು ದಿನಗಳ ಅವಕಾಶ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಸೆ.3) ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳ ಒಪ್ಪಿಗೆಯ ಮೇರೆಗೆ ಕ್ಲಿನಿಕ್ ಗಳಿಗೆ ಅನುಮತಿ ನೀಡಬೇಕು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕಸ ವಿಲೇವಾರಿ ಖರ್ಚು ಕಡಿಮೆ ಮಾಡಲು ವಾರ್ಡವಾರು ಮೈಕ್ರೋ ಯೋಜನೆ ರೂಪಿಸಬೇಕು. ಸ್ಥಳ ಗುರುತಿಸಿ, ಸ್ಥಳೀಯವಾಗಿಯೇ ಹಸಿ ಕಸವನ್ನು ಅಲ್ಲೇ ಕಾಂಪೋಸ್ಟ್ ಮಾಡಬೇಕು.
ಅದೇ ರೀತಿ ವಿಶ್ವವಿದ್ಯಾಲಯ, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ದೊಡ್ಡ ಪ್ರಮಾಣದ ಕಸವನ್ನು ಆಯಾ ಸಂಸ್ಥೆಗಳ ಆವರಣದಲ್ಲಿಯೇ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಅಲ್ಲಿಯೇ ಘಟಕಗಳನ್ನು ಸ್ಥಾಪಿಸಲು ಸೂಚನೆ ನೀಡಲಾಗಿದೆ.
ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ 33 ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಹಸಿ ಕಸ ಸಂಗ್ರಹಿಸಬೇಕು. ಒಣ ಕಸವನ್ನು ವಾರದಲ್ಲಿ ಒಮ್ಮೆ ಸಂಗ್ರಹಿಸಬೇಕು. ವಾರ್ಡವಾರು ಮೈಕ್ರೋ ಯೋಜನೆ ರೂಪಿಸಿ ಹಸಿ ಕಸವನ್ನು ಆಯಾ ವಾರ್ಡಗಳಲ್ಲಿಯೇ ಕಾಂಪೋಸ್ಟ್ ಮಾಡಲು ಕ್ರಮ ತೆಗೆದುಕೊಂಡರೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗುತ್ತದೆ.
ಈ ಬಗ್ಗೆ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದರು.
ಪ್ಲಾಸ್ಟಿಕ್ ನಿಷೇಧ-ಕಡ್ಡಾಯ ಜಾರಿ:
ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ನಿಯಮಾವಳಿ ಪ್ರಕಾರ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಗ್ರಾಮ ಪಂಚಾಯತಿ ಯಿಂದ ಮಹಾನಗರ ಪಾಲಿಕೆಯ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದ್ದು, ಬೈಲಾ ಪ್ರಕಾರ ದಂಡ ವಿಧಿಸಬೇಕು.
ಮುಂದಿನ ಹದಿನೈದು ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಸುಭಾಷ್ ಅಡಿ ತಿಳಿಸಿದರು.
ಆನ್ ಲೈನ್ ದಂಡ ಸಂಗ್ರಹ ವ್ಯವಸ್ಥೆ ಲಭ್ಯವಿದ್ದು, ಅದೇ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದರು.
2016 ಘನತ್ಯಾಜ್ಯ ವಿಲೇವಾರಿ ನಿಯಮಾವಳಿ ಅನ್ವಯ ಪ್ರತಿ ಸ್ಥಳೀಯ ಸಂಸ್ಥೆಯು ಎರಡು ವರ್ಷಗಳಲ್ಲಿ ತ್ಯಾಜ್ಯ ವಿಲೇವಾರಿ ನಿರ್ವಹಣೆ ವ್ಯವಸ್ಥೆಯನ್ನು ಮಾಡಬೇಕಿತ್ತು.
ಇದಾದ ಬಳಿಕ ಆರು ತಿಂಗಳು ಅವಧಿಯನ್ನು ವಿಸ್ತರಣೆ ಮಾಡಲಾಗಿತ್ತು. ಇದೀಗ ಸಮಯಾವಕಾಶ ಮೀರಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಭಾರೀ ಪ್ರಮಾಣದ ಹಾನಿ ಉಂಟಾಗಿರುವುದರಿಂದ ಸ್ವಲ್ಪ ಕಾಲಾವಕಾಶ ನೀಡಿ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇ -ತ್ಯಾಜ್ಯ ವಿಲೇವಾರಿಗೆ ಕೂಡ ಪ್ರತ್ಯೇಕವಾಗಿ ಒಂದು ಘಟಕ ಸ್ಥಾಪಿಸಿ ನಿಯಮಾವಳಿ ಪ್ರಕಾರ ವಿಲೇವಾರಿಗೆ ನಿರ್ದೇಶನ ನೀಡಲಾಗಿದೆ.
ಇ ತ್ಯಾಜ್ಯ ವಿಲೇವಾರಿ ಆಯಾ ಕಂಪೆನಿಗಳ ಹೊಣೆಗಾರಿಕೆ ಯಾಗಿದೆ. ಒಂದು ವೇಳೆ ಮಹಾನಗರ ಪಾಲಿಕೆ ವಿಲೇವಾರಿ ಮಾಡುವುದಾದರೆ ಸಂಬಂಧಪಟ್ಟ ಕಂಪನಿಗಳು ಹಣ ಪಾವತಿಸಬೇಕಾಗುತ್ತದೆ.
ಬೆಳಗಾವಿ ಸ್ಮಾರ್ಟ್ ಸಿಟಿ ಆಗಬೇಕಾದರೆ ಎಲ್ಲ ಬಗೆಯ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕೂಡ ಮೇಲ್ದರ್ಜೆಗೆ ಏರಿಸಬೇಕಿದೆ. ಹಸಿ, ಒಣ ಕಸ ಹಾಗೂ ಅಪಾಯಕಾರಿ ಕಸ ಸಮಗ್ರ ನಿರ್ವಣೆಗೆ ಒಂದು ಕಮಾಂಡ್ ಸೆಂಟರ್ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಸುಭಾಷ್ ಅಡಿ ಹೇಳಿದರು.
ಪಿಓಪಿ ಗಣೇಶ್ ಕುರಿತು ಜನರು ಜಾಗೃತ:
ಪಿಓಪಿ ಗಣೇಶ ನಿಷೇಧದ ಬಗ್ಗೆ ಜನರು ಜಾಗೃತರಾಗಿದ್ದು, ಬೆಂಗಳೂರಿನಲ್ಲಿ ದೊಡ್ಡ ಯಶಸ್ಸು ದೊರೆತಿದೆ. ಇದೇ ರೀತಿ ಇತರ ಕಡೆಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಕಸ ವಿಲೇವಾರಿ, ಪಿಓಪಿ ಗಣೇಶ್ ನಿಷೇಧ ಸೇರಿದಂತೆ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಷ್ ಅಡಿ ಅಭಿಪ್ರಾಯಪಟ್ಟರು.
ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿಜಯಕುಮಾರ್ ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪರಿಸರ ಅಭಿಯಂತರರ ಸಭೆಯನ್ನು ನಡೆಸಿದ ನ್ಯಾಯಮೂರ್ತಿ ಸುಭಾಷ್ ಅಡಿ ಅವರು, ಜಿಲ್ಲೆಯಲ್ಲಿ ತ್ಯಾಜ್ಯ ವಿಲೇವಾರಿ ಪ್ರಗತಿ ಪರಿಶೀಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ