ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚು ಮರೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?
ಚಿತ್ರನಟ ದರ್ಶನ್ ಪೊಲೀಸರಿಗೆ ದೂರು ನೀಡಿ ರೇಣುಕಾಸ್ವಾಮಿಗೆ ತಿಳಿ ಹೇಳಿಸಬಹುದಿತ್ತು. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಕೊಂಡಿದ್ದರೆ ಅದು ದೊಡ್ಡ ತಪ್ಪು. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಡುವ ಹಂತ ತಲುಪಿದ್ದು ಚಿತ್ರೋದ್ಯಮಕ್ಕೆ ಕಳಂಕ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಪೊಲೀಸರು ಸೂಕ್ತವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದರು.
ರಾಜ್ಯದಲ್ಲಿ ಅಪರಾಧಿ ಚಟುವಟಿಕೆ ಹೆಚ್ಚಿದೆ. ಚನ್ನಗಿರಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಲಾಗಿದೆ. ಪೊಲೀಸರಿಗೆ ಕಪಾಳ ಮೋಕ್ಷವಾಗಿದೆ. ಕಾನೂನು ಪೊಲೀಸರ ಹಿಡಿತದಲ್ಲೇ ಇಲ್ಲ. ಈಗ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚುಮರೆ ಮಾಡುತ್ತಿದ್ದಾರೆ. ಏನು ನಡೆಯುತ್ತಿದೆ? ನಾವು ಕರ್ನಾಟಕದಲ್ಲಿದ್ದೇವೆಯೇ ಹೊರತು ಜಮ್ಮು ಕಾಶ್ಮೀರದಲ್ಲಿಲ್ಲ. ಇದನ್ನು ಟಿವಿ ಮಾಧ್ಯಮಗಳು ಚಿತ್ರೀಕರಣ ಮಾಡದಂತೆ ಈ ಕ್ರಮ ವಹಿಸುವುದು ಸರಿಯಲ್ಲ ಎಂದು ಗುಡುಗಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯವರು ಕೂಡ ದರ್ಶನ್ ಪ್ರಕರಣದ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು. ತನಿಖೆ ಸರಿಯಾಗಿ ನಡೆದು ಸತ್ಯಾಂಶ ಹೊರಬರಲಿ. ಈ ಪ್ರಕರಣದಲ್ಲಿ ಮೃತನಾದ ವ್ಯಕ್ತಿ ಯಾವುದೇ ಅಪರಾಧಿ ಹಿನ್ನೆಲೆ ಹೊಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಷ್ಟೋ ಸಂದೇಶಗಳು ಬರುತ್ತವೆ. ಅದಕ್ಕಾಗಿ ಕೊಲೆ ಮಾಡಲು ಹೋಗಬಾರದು. ಇಂತಹ ಕ್ಷುಲ್ಲಕ ವಿಚಾರಕ್ಕೆ ಕೊಲೆ ಮಾಡಿರುವುದು ಇಡೀ ಚಿತ್ರೋದ್ಯಮಕ್ಕೆ ಕಳಂಕವಾಗಿದೆ. ಸರ್ಕಾರ ಮಾನವೀಯತೆ ದೃಷ್ಟಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ