Kannada NewsKarnataka News

ಪ್ರಗತಿ ಪರಿಶೀಲನಾ ಸಭೆ : DDPI ಮತ್ತು BEO ಅಮಾನತ್ತಿಗೆ ಸಿಎಂ ಸೂಚನೆ

ಪ್ರಗತಿವಾಹಿನಿ ಸುದ್ದಿ, ವಿಜಯನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯ ನಗರ ಜಿಲ್ಲಾ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಅದ ಮುಖ್ಯಾಂಶಗಳು ಹೀಗಿವೆ:

• ನೀರು, ಮೇವು, ನರೇಗಾ ಉದ್ಯೋಗಕ್ಕೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ಪಿಡಿ ಖಾತೆಯಲ್ಲಿರುವ ಇರುವ ಹಣವನ್ನು ಇದಕ್ಕಾಗಿ ಸರಿಯಾಗಿ ಬಳಸಬೇಕು. 

• ಕೆರೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಸಬೇಕು. ಒತ್ತುವರಿಯಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಕೊರತೆಯಾಗುತ್ತದೆ. ನರೇಗಾದಲ್ಲಿ ಕೆರೆ ಹೂಳು ತೆಗೆದು ಕೆರೆಗಳಿಗೆ ಮರು ಜೀವ ಒದಗಿಸಬೇಕು. 

• 52 ಶುದ್ಧ ನೀರಿನ ಘಟಕಗಳು ಕೆಲಸ ಸ್ಥಗಿತಗೊಳಿಸಿದ್ದರೂ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಕೆಲವು ಬೋರ್ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎನ್ನುವ ಅಧಿಕಾರಿಗಳ ಉತ್ತರಕ್ಕೆ ಗರಂ ಆದ ಸಿಎಂ ರಿಪೇರಿ ಮಾಡಿದ್ದು ಇಲಾಖೆಯವರೇ ತಾನೆ? ಪದೇ ಪದೇ ಕೆಟ್ಟು ಹೋಗುವ ರೀತಿ ರಿಪೇರಿ ಯಾಕೆ ಮಾಡ್ತಾರೆ. ಅದರಲ್ಲಿ ಏನಾದರೂ ರಿಪೇರಿಯಾಗದ ಸಮಸ್ಯೆ ಇದೆಯಾ ಪರಿಶೀಲಿಸಿ ಎಂದರು.

• ಊರಿನ ಹೊರಗೆ ಇರುವ ಬೋರ್ಗಳ ಮೋಟಾರ್ಗಳನ್ನು ಪದೇ ಪದೇ ಕದಿಯುತ್ತಿದ್ದಾರೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಹಾಗಿದ್ದರೆ ಏಕೆ ಇದುವರೆಗೂ ದೂರು ದಾಖಲಿಸಿಲ್ಲ ? ಕಳ್ಳರ ಮೇಲೆ ನೀವು ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಆಗುತ್ತಿದೆ. ಈ ನಷ್ಟಕ್ಕೆ ನಿಮ್ಮ ಮೇಲೆ ಏಕೆ ಕ್ರಮ ಕೈಗೊಳ್ಳಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಪ್ರಶ್ನಿಸಿದರು.

• ಮೋಟಾರ್ ಕಳ್ಳರು ಯಾರು ಎನ್ನುವುದು, ಠಾಣಾಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳು ಗೊತ್ತಿರುತ್ತವೆ. ಆದರೆ ಏಕೆ ಕ್ರಮ ಕೈಗೊಲ್ಳುತ್ತಿಲ್ಲ? ಮಟ್ಕಾ, ಬೆಟ್ಟಿಂಗ್, ಜೂಜು ಹೆಚ್ಚಾಗಿದೆ ಎನ್ನುವ ವರದಿ ಇದೆ. ಇವನ್ನೆಲ್ಲಾ ಸಂಪೂರ್ಣವಾಗಿ ನಿಲ್ಲಿಸಲು ಏಕೆ ಸಾಧ್ಯವಾಗಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪ್ರಶ್ನಿಸಿದರು. ಕೇವಲ ನಿಯಂತ್ರಣ ಸಾಲಲ್ಲ. ಸಂಪೂರ್ಣ ನಿಲ್ಲಿಸಬೇಕು. ಅವರವರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಕ್ರೈಂಗಳು ಠಾಣಾಧಿಕಾರಿಗಳಿಗೆ ಸಂಪೂಣ ಮಾಹಿತಿ ಇರುತ್ತದೆ. ಆದರೂ ಕ್ರಮ ತೆಗೆದುಕೊಳ್ಳುವುದಿಲ್ಲ. ಮುಂದಿನ ಮೂರು ತಿಂಗಳುಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಬಂದ್ ಆಗಬೇಕು. ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಿಎಂ ಸೂಚಿಸಿದರು.

• ಜಿಲ್ಲೆಯಲ್ಲಿ ಶೌಚಾಲಯಗಳು ಇಲ್ಲದ ಮನೆಗಳು ಇವೆಯೇ ಎಂದು ಸಿಎಂ ಪ್ರಶ್ನಿಸಿದರು. ಇದ್ದಾವೆ ಎಂದು ಅಧಿಕಾರಿಗಳು ವರದಿ ನೀಡಿದರು. ಹೀಗಿದ್ದೂ ಜಿಲ್ಲೆಯನ್ನು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದ್ದು ಏಕೆ ಎಂದು ತೀವ್ರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ನೀವು ಕೊಡುವ ತಪ್ಪು ಮಾಹಿತಿಯನ್ನು ನಾವು ಅಧಿವೇಶನದಲ್ಲಿ ಹೇಳುವುದಕ್ಕೆ ಆಗುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿ, ಸರ್ಕಾರಕ್ಕೆ ಸುಳ್ಳು ಮತ್ತು ತಪ್ಪು ಮಾಹಿತಿ ಕೊಡಬಾರದು ಎಂದು ಎಚ್ಚರಿಸಿದರು.

• ಪಿಡಿಒ ಗಳ ಮೂಲಕ ಮನೆ ಮನೆ ಸಮೀಕ್ಷೆ ಮಾಡಿ ಎಷ್ಟು ಮನೆಗಳಲ್ಲಿ ಶೌಚಾಲಯಗಳಿಲ್ಲ , ಶೌಚಾಲಯಗಳಿದ್ದಿದ್ದರೂ ಅವರು ಏಕೆ ಶೌಚಾಲಯಗಳಿಗಾಗಿ ಅರ್ಜಿ ಸಲ್ಲಿಸುತ್ತಿಲ್ಲ? ಎಷ್ಟು ಶೌಚಾಲಯಗಳ ಅಗತ್ಯ ಇದೆ? ಎಷ್ಟು ಅರ್ಜಿಗಳು ಬಂದಿವೆ ಎನ್ನುವ ಸಂಪೂರ್ಣ ವಿವರ ಕೇಳಿದ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಸಭೆಯೊಳಗೆ ಸಮೀಕ್ಷೆ ಮುಗಿದು ಶೌಚಾಲಯಗಳ ನಿರ್ಮಾಣ ಆಗಿರಬೇಕು ಎಂದು ಸೂಚಿಸಿದರು.

*DDPI ಮತ್ತು BEO ಅಮಾನತ್ತಿಗೆ ಸಿಎಂ ಸೂಚನೆ*

*ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಅಮಾನತ್ತಿಗೆ ಸೂಚಿಸಿದ ಸಿಎಂ* 

• ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶೈಕ್ಷಣಿಕವಾಗಿ ಜಿಲ್ಲೆ 10 ನೇ ಸ್ಥಾನದಿಂದ ೨೭ ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸಿಕ್ಕಾಪಟ್ಟೆ ಸಿಟ್ಟಾದ ಸಿಎಂ, ಇದಕ್ಕೆ ನಿಮ್ಮನ್ನು ಏಕೆ ಹೊಣೆ ಮಾಡಬಾರದು ಎಂದು ಡಿಡಿಪಿಐ ಅವರನ್ನು ಪ್ರಶ್ನಿಸಿದರು. ಎಸ್ಎಸ್ಎಸ್ಸಿ ಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಿಲಿತಾಂಶ ಪ್ರಮಾಣ ಕುಸಿದಿರುವುದಕ್ಕೆನೀವೇ ಕಾರಣ. ನಿಮ್ಮ ಬಿಇಒ ಗಳು, ಶಿಕ್ಷಕರ ಪ್ರಯತ್ನ ಏನು? ಯಾವ ದಿಕ್ಕಿನಲ್ಲಿದೆ? ಈ ಕಳಪಡೆ ಸಾಧನೆಗೆ ನಿಮ್ಮ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೀವೇ ಹೇಳಿ ಎಂದು ಸಿಎಂ ಡಿಡಿಪಿಐ ಗೆ ಪ್ರಶ್ನಿಸಿದರು. ಈ ಬಾರಿ ಶೇ೨೦ ರಷ್ಟು ಗ್ರೇಸ್ ಅಂಕಗಳನ್ನು ಕೊಟ್ಟರೂ ಈ ಮಟ್ಟಕ್ಕೆ ಕುಸಿದಿದ್ದೀರಿ ಎಂದರೆ ನಿಮ್ಮ ಒಟ್ಟು ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ ಎಂದು ಪ್ರಶ್ನಿಸಿದರು.

•  ೧೦ ರಿಂದ ೨೭ನೇ ಸ್ಥಾನಕ್ಕೆ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಜಾರಿರುವಾಗ ನಿಮಗೆ ನಾಚಿಕೆ ಆಗಬೇಕಲ್ವಾ ಎಂದು ಸಿಇಒ ಅವರನ್ನು ಪ್ರಶ್ನಿಸಿದರು.

• ಶಿಕ್ಷಣ ಇಲಾಖೆ ಕಾರ್ಯದರ್ಶಿ ರಿತೀಶ್ ಅವರಿಗೆ ಸಭೆ ಮಧ್ಯದಲ್ಲೇ ದೂರವಾಣಿ ಮೂಲಕ ಸಂಪರ್ಕಿಸಿದ ಸಿಎಂ, ಜಿಲ್ಲೆಯ ಕಳಪೆ ಸಾಧನೆ ಬಗ್ಗೆ ಪ್ರಶ್ನಿಸಿ, ಡಿಡಿಪಿಐ ಮತ್ತು ಬಿಇಒ ಇಬ್ಬರನ್ನೂ ತಕ್ಷಣದಿಂದ ಅಮಾನತ್ತಿನಲ್ಲಿ ಇಡಬೇಕು. ಸಿಇಒ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಬಗ್ಗೆ ಗಂಭೀರವಾಗಿ ಯೋಜನೆಗಳನ್ನು ರೂಪಿಸುವಂತೆ ಸೂಚಿಸಿದರು. ಡಿಡಿಪಿಐ ಅವರನ್ನು ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಸಭೆಯಿಂದ ಹೊರಗೆ ನಡೆಯುವಂತೆ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button