ಗ್ರಾಮೀಣಾಭಿವೃದ್ಧಿಗೆ ಸುವರ್ಣ ವಿಧಾನ ಸೌಧದಲ್ಲಿ ವಿಶೇಷ ಕಚೇರಿ: ಸಚಿವ ಈಶ್ವರಪ್ಪ
ಜಿಪಂ ಅಧ್ಯಕ್ಷ-ಉಪಾಧ್ಯಕ್ಷರುಗಳ ಚಿಂತನ-ಮಂಥನ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಅನುಕೂಲ ಆಗುವ ರೀತಿಯಲ್ಲಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವಿಶೇಷ ಕಚೇರಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಾದ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ (ಸೆ.9) ನಡೆದ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಚಿಂತನ-ಮಂಥನ ಸಭೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರ
ನೀರು, ರಸ್ತೆ, ನೈರ್ಮಲ್ಯ, ಉದ್ಯೋಗ ಖಾತ್ರಿ ಸೇರಿದಂತೆ ಒಟ್ಟಾರೆ ಗ್ರಾಮೀಣಾಭಿವೃದ್ಧಿಗಾಗಿ ವಿಶೇಷ ಕಚೇರಿ ಸ್ಥಾಪಿಸಲಾಗುವುದು. ಈ ಕಚೇರಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗುತ್ತದೆ.
ವಿಶೇಷ ಕಚೇರಿ ಆರಂಭಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ರೂಪಿಸಿಕೊಂಡು ಆದಷ್ಟು ಬೇಗನೆ ನಿರ್ಧಾರ ಕೈಗೊಳ್ಳಲಾಗುವುದು. ಉ.ಕ.ಅಭಿವೃದ್ಧಿಯನ್ನು ಒಂದು ಸವಾಲಾಗಿ ಸ್ವೀಕರಿಸಿ ಅದನ್ನು ಸಾಧಿಸಲು ನಾವೆಲ್ಲರೂ ಪ್ರಯತ್ನಿಸೋಣ ಎಂದರು.
ಗ್ರಾಮೀಣಾಭಿವೃದ್ಧಿ ಕನಸು-ಮಾದರಿ ಸಭೆ:
ಸರ್ಕಾರ ನಡೆಸುವ ದೈನಂದಿನ ಮಾದರಿಯ ಸಭೆ ಇದಲ್ಲ; ಗ್ರಾಮೀಣಾಭಿವೃದ್ಧಿ ಕುರಿತು ನಿಮ್ಮೆಲ್ಲರ ಚಿಂತನೆ ಹಾಗೂ ಅನುಭವಗಳನ್ನು ತಿಳಿದುಕೊಳ್ಳುವ ವಿಶೇಷ ಅವಕಾಶ ಇದು ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ವಿದೇಶಕ್ಕೆ ಹೋಲಿಸಿದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಡಿಮೆ. ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ಆದರೆ ಮೂಲ ಸೌಕರ್ಯಗಳು ಕಡಿಮೆಯಾಗಿವೆ. ರಾಜ್ಯದ ಅಭಿವೃದ್ಧಿಗೆ ಈ ಚಿಂತನ-ಮಂಥನ ಸಭೆ ಮಾದರಿಯಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಂತ್ರಸ್ತರಿಗೆ ಶಾಶ್ವತ ಪರಿಹಾರ:
ಸಂತ್ರಸ್ತರಿಗೆ ಮೊದಲ ಹಂತದಲ್ಲಿ ಹತ್ತು ಸಾವಿರ ರೂ. ಪರಿಹಾರ ನೀಡಲಾಗಿದೆ. ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೂಡ ಪ್ರವಾಹ ಬಾಧಿತ ಸಂತ್ರಸ್ತರಿಗೆ ಉದಾರ ನೆರವು ನೀಡಿರುವುದು ಶ್ಲಾಘನೀಯ. ಮನೆಗಳ ಹಾನಿ ಸಮೀಕ್ಷೆ ಬಳಿಕ ಕೇಂದ್ರ ಸರ್ಕಾರದ ನೆರವು ಪಡೆದುಕೊಂಡು ಶಾಶ್ವತ ಪರಿಹಾರ ನೀಡಲಾಗುವುದು.
ರಾಜ್ಯದಲ್ಲಿ 609 ಕೆರೆಗಳು ಸೇರಿದಂತೆ 5612 ಗ್ರಾಮೀಣ ರಸ್ತೆಗಳಿಗೆ ಪ್ರವಾಹದಿಂದ ಹಾನಿಯಾಗಿವೆ. ಸಮೀಕ್ಷೆ ಕೈಗೊಂಡಿದ್ದು, ಕೇಂದ್ರ ಸರ್ಕಾರದ ನೆರವಿನೊಂದಿಗೆ ರಸ್ತೆ ಮತ್ತು ಸಂಪರ್ಕ ಕಲ್ಪಿಸುವ ಕೆಲಸ ಶೀಘ್ರವಾಗಿ ಆರಂಭಿಸಲಾಗುವುದು.
ಕುಡಿಯುವ ನೀರು ಮತ್ತು ನೈರ್ಮಲ್ಯ ಜಿಲ್ಲಾ ಪಂಚಾಯತ ಆದ್ಯತೆಯಾಗಿದೆ. ಪ್ರತಿ ಗ್ರಾಮಕ್ಕೆ ನೈರ್ಮಲ್ಯ ಕಾಪಾಡಲು ಪ್ರತಿ ಗ್ರಾಮಕ್ಕೆ ತಲಾ ಒಂದು ಲಕ್ಷ ರೂಪಾಯಿ ನೀಡಲಾಗಿದೆ. ಮೂರು ಹಂತದ ವ್ಯವಸ್ಥೆ ಪಂಚಾಯತ ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಪಂಚಾಯತ ವ್ಯವಸ್ಥೆ ಇನ್ನಷ್ಟು ಬಲಪಡಿಸಲು ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಸರ್ಕಾರ ಸಕಾರಾತ್ಮಕವಾಗಿ ಸ್ವೀಕರಿಸಲಿದೆ ಎಂದರು.
ಅಭಿವೃದ್ಧಿಗೆ ಕೈಜೋಡಿಸಲು ಕರೆ:
ಶೌಚಾಲಯ ನಿರ್ಮಿಸುವುದು ಸಾಧ್ಯವಾಗದಿದ್ದರೆ ನಾವೆಂತಹ ಜನಪ್ರತಿನಿಧಿಗಳು ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಕೇಂದ್ರ-ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನದ ಸದ್ಬಳಕೆಗೆ ನಾವು ಇದುವರೆಗೆ ಯಶಸ್ವಿಯಾಗಿಲ್ಲ ಎಂದು ಸಚಿವ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಅಧಿಕಾರ ಅಥವಾ ಅನುದಾನ ಕಡಿಮೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಶಾಸಕರು ಮತ್ತಿತರ ಜನಪ್ರತಿನಿಧಿಗಳ ಜತೆ ಸಮನ್ವಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕಿದೆ.
ರಸ್ತೆಬದಿ ಮಹಿಳೆಯರು ಶೌಚಕ್ಕೆ ಹೋಗುವ ವ್ಯವಸ್ಥೆ ಇನ್ನೆಷ್ಟು ದಿನ ಇರಬೇಕು? ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ ಕಲ್ಪಿಸಲು ಪ್ರತಿ ಹಳ್ಳಿಗಳಿಗೆ ವಿಶೇಷ ಪ್ಯಾಕೇಜ್ ಕಲ್ಪಿಸಲು ಸಾಧ್ಯವೇ ಎಂಬುದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಗ್ರಾಮದ ಅಭಿವೃದ್ಧಿ ನಮ್ಮೆಲ್ಲರ ಕನಸು ಮತ್ತು ಆದ್ಯತೆಯಾಗಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ಮತ್ತು ಮಾದರಿ ರಾಜ್ಯ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.
ಗ್ರಾಪಂ ಅನುದಾನ ಮಾಹಿತಿ ಪುಸ್ತಕ ಬಿಡುಗಡೆ:
6021 ಗ್ರಾಮ ಪಂಚಾಯತಿಗೆ ನೀಡುವ ಅನುದಾನದ ಹಂಚಿಕೆ ಕುರಿತ ಮಾಹಿತಿಯನ್ನು ಒಳಗೊಂಡ ಮಾಹಿತಿ ಪುಸ್ತಿಕೆಯನ್ನು ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ವಿಶೇಷ ಕಚೇರಿಯ ಸ್ಥಾಪನೆಯ ನಿರ್ಧಾರಕ್ಕಾಗಿ ಸಚಿವ ಈಶ್ವರಪ್ಪ ಅವರಿಗೆ ಜನರ ಪರವಾಗಿ ಅಭಿನಂದನೆಗಳು ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿ 100 ದಿನಗಳು ಪೂರ್ಣಗೊಂಡಿವೆ. ಕೇಂದ್ರ ಸರ್ಕಾರ ಬಹಳ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ.
ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಎಲ್ಲರಿಗೂ ಮನೆಗಳನ್ನು ಒದಗಿಸುವ ಯೋಜನೆಯಿದೆ ಎಂದರು.
ರೈಲ್ವೆಗೆ ಐವತ್ತು ಲಕ್ಷ ಕೋಟಿ ಅನುದಾನ:
ಮುಂಬರುವ ಹತ್ತು ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಐವತ್ತು ಲಕ್ಷ ಕೋಟಿ ರೂಪಾಯಿ ಒದಗಿಸಲಾಗುತ್ತಿದೆ ಎಂದು ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಮುಂಬರುವ ದಿನಗಳಲ್ಲಿ ಅನುದಾನ ಹಂಚಿಕೆ ವ್ಯವಸ್ಥೆಗಳು ಕೂಡ ವಿಕೇಂದ್ರೀಕರಣಗೊಂಡು ದೆಹಲಿಯಿಂದ ಹಳ್ಳಿಗಳಿಗೆ ನೇರವಾಗಿ ಅನುದಾನ ಬಿಡುಗಡೆಗೊಳ್ಳಲಿದೆ.
ಭವ್ಯ ಭಾರತ ಮತ್ತು ಗ್ರಾಮೀಣಾಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಸ್ವಾಗತಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ನರೇಗಾ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾದ ಡಾ.ಆರ್.ವಿಶಾಲ್ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರು ಸೇರಿದಂತೆ ಪ್ರತಿ ಜಿಲ್ಲೆಯಿಂದ ಐವರು ಜನಪ್ರತಿನಿಧಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ