Politics

*ಮುಡಾದಲ್ಲಿ ಎಲ್ಲರೂ ಗ್ಯಾಂಗ್‌ ಮಾಡಿಕೊಂಡು ಹಗರಣ ಮಾಡಿದ್ದಾರೆ: ವಿಪಕ್ಷ ನಾಯಕ ಆರ್‌.ಅಶೋಕ ಆರೋಪ*

ಪ್ರಗತಿವಾಹಿನಿ ಸುದ್ದಿ: ಮುಡಾದಲ್ಲಿ ನಡೆದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇದರಿಂದ ಎಲ್ಲ ಸತ್ಯ ಹೊರಬರಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಮುಡಾ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿ ನಂತರ ಡಿನೋಟಿಫೈ ಮಾಡಿತ್ತು. ಅದಾದ ನಂತರವೂ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಅರ್ಜಿ ಸಲ್ಲಿಸಿದ ನಂತರ ಮುಡಾ ಅಧ್ಯಕ್ಷ ಮತ್ತು ಆಯುಕ್ತರು 50:50 ಅನುಪಾತದಲ್ಲಿ ನಿವೇಶನ ನೀಡಿದ್ದಾರೆ. ಇದರಿಂದ ಮುಡಾಗೆ ನಷ್ಟವಾಗಿದೆ. 50:50 ಮಾಡುವುದಾದರೆ ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಸಿಕ್ಕಿ ಆದೇಶವಾಗಬೇಕು. ಅಕ್ರಮವಾಗಿ ಅವರೇ ಹಂಚಿಕೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ದಾಸರಹಳ್ಳಿಯಲ್ಲಿ ಭೂಸ್ವಾಧೀನವಾದರೆ ಎಂ.ಜಿ.ರಸ್ತೆಯ ಜಮೀನು ಕೊಟ್ಟಂತಾಗಿದೆ. ಈ ಹಗರಣದ ತನಿಖೆಯನ್ನು ಸರ್ಕಾರದಡಿಯ ಸಂಸ್ಥೆಗೆ ನೀಡಿದರೆ ಮುಖ್ಯಮಂತ್ರಿಯವರನ್ನು ಆರೋಪಿ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಿಬಿಐಗೆ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.

ಡಿನೋಟಿಫೈ ಆದ ಭೂಮಿಯ ಬದಲಿಗೆ ಪ್ರತಿಷ್ಠಿತ ಸ್ಥಳದ ಕಡೆ ಜಾಗ ನೀಡಲಾಗಿದೆ. ಡಿನೋಟಿಫೈ ಆದ ಜಮೀನನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಭೂ ಮಾಲೀಕರು ಅದನ್ನು ನೋಡಿಕೊಂಡು ಏಕೆ ಸುಮ್ಮನಿದ್ದರು ಎಂದು ಅನುಮಾನವಾಗುತ್ತದೆ. ನಾನು ಕೂಡ ಈ ಕುರಿತು ದಾಖಲೆಗಳನ್ನು ಕೇಳಿದ್ದರೂ ಏನೂ ಸಿಕ್ಕಿಲ್ಲ. ಈ ವಹಿವಾಟುಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಮೈಸೂರು ಜಿಲ್ಲಾಧಿಕಾರಿ ಹಲವಾರು ಬಾರಿ ಮುಡಾಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ. ಆದರೆ ಇದಕ್ಕೆ ಮುಡಾದಿಂದ ಉತ್ತರ ದೊರೆತಿಲ್ಲ. ಅಲ್ಲೇ ಎಲ್ಲರೂ ಸೇರಿಕೊಂಡು ಗ್ಯಾಂಗ್‌ ಮಾಡಿಕೊಂಡಿದ್ದಾರೆ. ಇದರ ಹಿಂದೆ ದೊಡ್ಡ ಜಾಲವಿದೆ ಎಂದರು.

ಇದು ಬಿಜೆಪಿ ಕಾಲದಲ್ಲೇ ನಡೆದಿದ್ದು ಎಂದು ಸಿಎಂ ಹೇಳಿದ್ದಾರೆ. ಅದು ಯಾರೇ ಆಗಿದ್ದರೂ ಅವರನ್ನು ಮೊದಲು ಬಂಧನ ಮಾಡಿಸಬೇಕು. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಇದರಲ್ಲಿ ಬಿಜೆಪಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಈ ನಿವೇಶನ ಮಂಜೂರನ್ನು ಮೊದಲು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

86 ಸಾವಿರ ಜನರು ನಿವೇಶನ ಕೊಡಿ ಎಂದು ಮನವಿ ಮಾಡಿದ್ದರೂ ಕಾಂಗ್ರೆಸ್‌ ನಾಯಕರಿಗೆ ಮಾತ್ರ ಸೈಟುಗಳು ಸಿಕ್ಕಿದೆ. ಸರ್ಕಾರದ ಆಸ್ತಿಗಳನ್ನು ಯಾರ‍್ಯಾರೋ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button