Belagavi NewsBelgaum NewsKannada NewsKarnataka NewsNationalPolitics

ವಚನಗಳು ಜ್ಞಾನ ದೀವಿಗೆಗಳು, ಅವುಗಳ ಅನುಕರಣೆ ಮುಖ್ಯ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ: ಜಗತ್ತಿಗೆ ಬಸವಾದಿ ಶರಣರು ನೀಡಿರುವ ಕೊಡುಗೆ ಅಪಾರ, ಅನನ್ಯವೆನಿಸಿದೆ. ಅವರ ವಚನಗಳು ಪ್ರಸ್ತುತ ಬದುಕಿಗೆ ಕನ್ನಡಿಹಿಡಿಯುತ್ತಿವೆ. ನಮ್ಮ ನಿತ್ಯ ಬದುಕಿಗೆ ವಚನಗಳನ್ನು ಓದು ಅರ್ಥೈಸುವ ಕಾರ್ಯ ನಡೆಯಬೇಕಾಗಿದೆ ಎಂದು ಬೆಳಗಾವಿ ನೂತನ ಸಂಸದ ಜಗದೀಶ ಶೆಟ್ಟರ ಹೇಳಿದರು. 

ಅವರು ಶಿವಬಸವ ನಗರದಲ್ಲಿರುವ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಮವಾಸೆ ಅನುಭಾವ ಗೋಷ್ಠಿಯಲ್ಲಿ ಸತ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ನಮ್ಮ ಇಂದಿಗೂ ಮೂಡನಂಬಿಕಗಳು ದೂರ ಸರಿದಿಲ್ಲ. ಅಸಮಾನತೆ ಸಮಾಜದಲ್ಲಿ ಮನೆ ಮಾಡಿದೆ. ಆದರೆ ಹನ್ನೆರಡನೆಯ ಶತಮಾನದ ಕಾಲಘಟ್ಟದಲ್ಲಿಯೇ ಬಸವಾದಿ ಶರಣರು ಸಮಾನತೆಗಾಗಿ ಹೋರಾಡಿದರು. ಅರಿವು ಆಚಾರಗಳನ್ನು ಮೂಡಿಸಿದರು. ವೈಚಾರಿಕ ಕ್ರಾಂತಿಗೆ ಕರೆನೀಡಿದರು. ಮೊದಲ ಅಂತರಜಾತಿ ವಿವಾಹ ಮಾಡಿದರು. ಅವರು ಮಾಡಿದ ಸಾಮಾಜಿಕ ಕೆಲಸಗಳು ಇಂದಿಗೆ ಬಹುಮೌಲಿಕ ವೆನಿಸಿವೆ. ಅವುಗಳನ್ನು ತೆರೆದಹೃದಯದಿಂದ ಅನುಕರಣೆಗೆ ತರುವ ಕೆಲಸ ನಡೆಯಬೇಕಾಗಿದೆ. ಬೆಳಗಾವಿ ಪ್ರೀತಿಯ ಜನತೆ ನನಗೆ ಬಹುಮತವನ್ನು ನೀಡಿ ಲೋಕಸಭೆಗೆ ಕಳುಹಿಸಿದ್ದಾರೆ.

ಬೆಳಗಾವಿಯ ಅಭಿವೃದ್ಧಿಯಲ್ಲಿ ಅವಿರತವಾಗಿ ಶ್ರಮಿಸುತ್ತೇನೆ. ಜನತೆಯ ನಂಬಿಕೆಯನ್ನು ಹುಸಿಗೊಳಿಸಲಾರೆ. ಈ ಸಂಕಲ್ಪಕ್ಕಾಗಿ ಹಗಲಿರುಳು ದುಡಿಯುತ್ತೇನೆ. ನೆನಗುದಿಗೆ ಬಿದ್ದಿರುವ ಕೆಲಸಗಳನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇನೆಂದು ಹೇಳಿದರು.

ಸತ್ಕಾರವನ್ನು ಸ್ವೀಕರಿಸಿದ ಡಾ.ಪ್ರಭಾಕರ ಕೋರೆಯವರು ಮಾತನಾಡುತ್ತ, ವಚನಗಳು ಜ್ಞಾನ ದೀವಿಗೆಗಳು. ಅವುಗಳನ್ನು ಹೇಳಿದರೆ ನಡೆಯುವುದಿಲ್ಲ. ಅನುಕರಣೆಗೆ ತರುವುದು ಬಹುಮುಖ್ಯವೆನಿಸಿದೆ. ಡಾ.ಫ.ಗು. ಹಳಕಟ್ಟಿಯಂತ ಪ್ರಾಥಃಸ್ಮರಣೀಯರು ವಚನ ಸಾಹಿತ್ಯಕ್ಕಾಗಿ ಶ್ರಮಿಸದೆ ಹೋಗಿದ್ದರೆ ವಚನಗಳನ್ನು ಅಭ್ಯಾಸಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರು ಕನ್ನಡ ನಾಡಿಗೆ ನೀಡಿರುವ ಕೊಡುಗೆ ಚಿರಸ್ಮರಣೀಯ. ಇಂದಿನ ಜನಾಂಗಕ್ಕೆ ಅಂತಹ ಮಹನೀಯರನ್ನು ತಿಳಿಸಿಕೊಡಬೇಕಾಗಿದೆ. ಜಗದೀಶ ಶೆಟ್ಟರ ಅವರು ಬೆಳಗಾವಿ ಅಭಿವೃದ್ಧಿಯಲ್ಲಿ ಕೊಡುಗೆಯನ್ನು ನೀಡಲಿದ್ದಾರೆ. ರಾಜ್ಯರಾಜಕಾರಣದ ಎಲ್ಲ ನೆಲೆಗಳಲ್ಲಿ ದುಡಿದವರು. ಆಡಳಿತ ಕುರಿತು ಸಾಕಷ್ಟು ಅನುಭವವನ್ನು ಹೊಂದಿದವರು. ಅವರಿಂದ ಬೆಳಗಾವಿ ವಿಕಾಸವಾಗಲೆಂದು ಶುಭ ಕೋರಿದರು.

ಬಸವಣ್ಣನವರ ಜೀವನ ಸಾಧನೆಯನ್ನು ಕುರಿತು ಮಾತನಾಡಿದ ಪ್ರಾಧ್ಯಾಪಕರ ಡಾ.ಎಚ್.ಬಿ.ಕೋಲ್ಕಾರ, ಬಸವಣ್ಣನವರು ಯುಗದ ಉತ್ಸಾಹ, ವಿಶ್ವಗುರು. ಒಂದು ಕಾಲಘಟ್ಟದಲ್ಲಿ ಸಮಾಜದಲ್ಲಿ ಮನೆಮಾಡಿದ್ದ ವೈರುಧ್ಯಗಳನ್ನು ತೊಡೆದುಹಾಕಲು ಬದುಕನ್ನು ಸಮರ್ಪಿಸಿದರು. ಇಂದು ವಿಶ್ವವೇ ಅವರ ವಿಚಾರಗಳಿಗೆ ತಲೆಬಾಗುತ್ತದೆ. ಅವರು ನಮ್ಮ ಸಾಂಸ್ಕೃತಿಯ ನಾಯಕರಾಗಿರುವುದು ಹೆಮ್ಮೆಯನ್ನು ತರುತ್ತದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ, ಡಾ.ಪ್ರಭಾಕರ ಕೋರೆಯವರ ಇಚ್ಛಾಶಕ್ತಿಯಿಂದ ಬೆಳಗಾವಿಯ ಹೃದಯಭಾಗದಲ್ಲಿ ಸಮಾಜದ ಬಡ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯದ ಕಾಮಗಾರಿಯು ಮುಗಿಯುವ ಕೊನೆಯಹಂತದಲ್ಲಿದೆ. ಇದು ಸಮಾಜದ ಬಡ ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ. ಈ ನೆಲೆಯಲ್ಲಿ ಡಾ.ಕೋರೆಯವರು ಸಲ್ಲಿರುವ ಸೇವೆ ಅಸದಳ. ಸಮಾಜದ ಇಂತಹ ಅನೇಕ ಕೆಲಸಗಳನ್ನು ಮುಂಚೂಣಿಯಲ್ಲಿ ಯಶಸ್ಸುಗೊಳಿಸಿದ್ದಾರೆ. ಕೆಎಲ್‌ಇ ಸಂಸ್ಥೆಯ ಚುಕ್ಕಾಣಿಯನ್ನು ಹಿಡಿದ ಕಳೆದ ೪೦ ವರ್ಷಗಳಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದರು.

ಆಶೀವರ್ಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಯವರು ಡಾ.ಪ್ರಭಾಕರ ಕೋರೆಯವರು ಕರ್ತೃತ್ವಶಕ್ತಿ ಬಹು ದೊಡ್ಡದು. ಹಿಡಿದ ಕಾರ್ಯಗಳನ್ನು ಅತ್ಯಂತ ಭಕ್ತಿ ಹಾಗೂ ನಿಷ್ಠೆಯಿಂದ ನೆರೆವೇರಿಸುತ್ತಾ ಬಂದಿದ್ದಾರೆ. ಅವರಿಂದ ಸಮಾಜ ಸಂದ ಸೇವೆಗೆ ಬೆಲೆಕಟ್ಟಲಾಗದು. ಕೆಎಲ್‌ಇ ಸಂಸ್ಥೆ ಹಾಗೂ ನಮ್ಮ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಶ್ಲಾಘನೀಯವೆನಿಸಿದೆ. ಜಗದೀಶ ಶೆಟ್ಟರ ಅವರು ಕೂಡ ಬೆಳಗಾವಿಯವರೆ, ಕೊಟ್ಟ ಮಾತಿನಂತೆ ಬೆಳಗಾವಿಯ ಅಭಿವೃದ್ಧಿಯಲ್ಲಿ ಅಹರ್ನಿಶಿಯಾಗಿ ಶ್ರಮಿಸಲಿದ್ದಾರೆ ಎಂದು ಇರ್ವ ನಾಯಕರನ್ನು ಆಶೀರ್ವದಿಸಿದರು.

ಸಮಾರಂಭದಲ್ಲಿ ಡಾ.ಎಚ್.ಬಿ. ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಸೋಮಲಿಂಗ ಮಾವಿನಕಟ್ಟಿ, ಪೊ.್ರಎ.ಬಿ.ಕೊರಬು, ಗುರುದೇವ ಪಾಟೀಲ, ಜ್ಯೋತಿ ಬದಾಮಿ, ಬಾಲಚಂದ್ರ ಬಾಗಿ, ಶ್ರೀಮತಿ ಸಂಸುದ್ದಿ, ಏಣಗಿ ಸುಭಾಷ, ಡಾ.ಮಹೇಶ ಗುರನಗೌಡರ, ಚೇತನ ಅಂಗಡಿ ಉಪಸ್ಥಿತರಿದ್ದರು. ಶ್ವೇತಾ ಹೆದ್ದೂರಶೆಟ್ಟ ವಚನ ಪ್ರಾರ್ಥಿಸಿದರು. 

ರಮೇಶ ಕಳಸವಣ್ಣವರ ಸ್ವಾಗತಿಸಿದರು. ಮಹಾದೇವಿ ಅಜವಾನೆ ವಚನ ವಿಶ್ಲೇಷಣೆ ಮಾಡಿದರು. ಸುಧಾ ಪಾಟೀಲ ಸ್ವಾಗತಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ವಿ.ಕೆ.ಪಾಟೀಲ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button