ಪ್ರಗತಿವಾಹಿನಿ ಸುದ್ದಿ: ಹೋಟೆಲ್ ಮಾಲೀಕನ ಮೇಲೆ ಸಪ್ಲೈಯರ್ ಮಾರಣಂತಿಕ ಹಲ್ಲೆ ನಡೆಸಿದ್ದು, ಮಾಲೀಕ ಕೋಮಾಗೆ ಜಾರಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಪ್ಲೈಯರ್ ಮಂಜಪ್ಪನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೂನ್ 18ರಂದು ಎಲೆಕ್ಟ್ರಾನಿಕ್ ಸಿಟಿಯ ಸಿಲಿಕಾನ್ ಟೌನ್ ನಲ್ಲಿ ಹೋಟೆಲ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿ ತನಿಖೆಯ ದಿಕ್ಕು ತಪ್ಪಿಸುವ ಯತ್ನವನ್ನೂ ಆರೋಪಿ ಮಾಡಿದ್ದ.
ಮಂಜುನಾಥ್ ಟಿಫಿನ್ ಸೆಂಟರ್ ಹೋಟೆಲ್ ಮಾಲೀಕ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ವಿಜಯೇಂದ್ರ ಶೆಟ್ಟಿ ಮೇಲೆ ಹೋಟೆಲ್ ಸಪ್ಲೈಯರ್ ಮಂಜಪ್ಪ ಮಾರಣಾಂತಿಕ ಹಲ್ಲೆ ನಡೆಸಿದ್ದ. ಮಲಗಿದ್ದ ವಿಜಯೇಂದ್ರ ಶೆಟ್ಟಿ ಹತ್ಯೆಗೆ ಯತ್ನಿಸಿ, ಜಿಮ್ ರಾಡ್ ನಿಂದ ಹೊಡೆದಿದ್ದ. ಹೋಟೆಲ್ ಮಾಲೀಕ ವಿಜಯೇಂದ್ರ ಶೆಟ್ಟಿ, ಪ್ರತಿದಿನ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರಂತೆ. ಇದರಿಂದ ಬೇಸತ್ತ ಸಪ್ಲೈಯರ್ ಮಂಜಪ್ಪ, ಮಾಲೀಕನ ಹತ್ಯೆಗೆ ಸಂಚು ರೂಪಿಸಿದ್ದ. ವಿಜಯೇಂದ್ರ ಶಟ್ಟಿ ರೂಮ್ ನಲ್ಲಿ ಮಲಗಿದ್ದ ವೇಳೆ ಒಳನುಗ್ಗಿ ರಾಡ್ ನಿಂದ ತಲೆಗೆ ಹೊಡೆದಿದ್ದ. ರಕ್ತದ ಮಡುವಲ್ಲಿ ಬಿದ್ದಿದ್ದ ವಿಜಯೇಂದ್ರ ಶೆಟ್ಟಿ ಅವರನ್ನು ಇತರ ಸಿಬ್ಬಂದಿಗಳು ಕಂಡು ಆಸ್ಪತ್ರೆಗೆ ದಾಖಲಿಸಿದ್ದರು. ಘಟನಾ ಸ್ಥಳದಲ್ಲೇ ಇದ್ದರೂ ಆರೋಪಿ ಮಂಜಪ್ಪ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿದ್ದ.
ಪೊಲೀಸ್ ತನಿಖೆ ವೇಳೆ ಆರೋಪಿ ಮಂಜಪ್ಪ, ವಿಜಯೇಂದ್ರ ಶಟ್ಟಿಯವರನ್ನು ಕೊಲೆ ಮಾಡಲು ಯತ್ನಿಸಿದ ರಹಸ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಮಂಜಪ್ಪನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ವಿಜಯೇಂದ್ರ ಶೆಟ್ಟಿ ಕೋಮಾಗೆ ಜಾರಿದ್ದು, ಮಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ