3 ಅಧಿಕಾರಿಗಳ ವಿರುದ್ಧ ಎಸಿಬಿಗೆ ಮುನೀಷ್ ಮೌದ್ಗಿಲ್ ದೂರು -Exclusive

ಪ್ರಗತಿವಾಹಿನಿ Exclusive

 

  400 ಕೋಟಿ ಬೆಲೆ ಬಾಳುವ ಭೂಮಿ ಪರಭಾರೆ

ವಿ.ಶಂಕರ್ ಸೇರಿ 3 ಅಧಿಕಾರಿಗಳ ವಿರುದ್ಧ ಎಸಿಬಿಗೆ ಮೌದ್ಗಿಲ್ ದೂರು

ಎಂ.ಕೆ.ಹೆಗಡೆ,  ಪ್ರಗತಿವಾಹಿನಿ  – ಬೇಕಾದಂತೆ ದಾಖಲೆ ತಿದ್ದುಪಡಿ ಮಾಡಿ ನೂರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿದ್ದಾರೆ ಎಂದು ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ ಸೇರಿದಂತೆ ಮೂವರ ಅಧಿಕಾರಿಗಳ ವಿರುದ್ಧ ಎಸಿಬಿಗೆ ದೂರು ಸಲ್ಲಿಸಲಾಗಿದೆ.

ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತ ಮುನೀಷ್ ಮೌದ್ಗಿಲ್ ಈ ದೂರು ಸಲ್ಲಿಸಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಭ್ರಷ್ಠಾಚಾರ ನಿಗ್ರಹದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಕೋರಿದ್ದಾರೆ.

ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ವಿ.ಶಂಕರ್, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಹರೀಶ್ ನಾಯಕ ಹಾಗೂ ಆನೇಕಲ್ ತಹಸಿಲ್ದಾರ ಸಿ.ಮಹಾದೇವಯ್ಯ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಉದ್ದೇಶಪೂರ್ವಕವಾಗಿ ವಿಶ್ವಾಸ ದ್ರೋಹಕ್ಕೆ ಕಾರಣವಾದ ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಬುಕ್ಕಸಾಗರ ಗ್ರಾಮದ 19.10 ಎಕರೆ ಜಮೀನನ್ನು ಖಾಸಗಿಯವರ ಪಾಲಾಗಲು ಶಂಕರ ಅವರು ನಿಯಮಗಳನ್ನು ಉಲ್ಲಂಘಿಸಿ ತಪ್ಪು ಆದೇಶ ಮಾಡಿದ್ದಾರೆ ಎಂದು ಮುನೀಷ್ ಮೌದ್ಗಿಲ್ ಎಸಿಬಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಮುನೀಷ್ ಮೌದ್ಗಿಲ್ ಬರೆದ ಪತ್ರ ಪ್ರಗತಿವಾಹಿನಿಗೆ ಲಭ್ಯವಾಗಿದೆ.

ಏನಿದು ಪ್ರಕರಣ?

ವಿ.ಶಂಕರ್

ಬುಕ್ಕಸಾಗರದ ರಾಮಯ್ಯ ನಿಂಗರಾಜು ಮತ್ತು ಇತರರು 2018ರ ಜೂನ್ 7ರಂದು ಈ ಸಂಬಂಧ ದೂರನ್ನು ಸಲ್ಲಿಸಿದ್ದರು. ಮಂಜುನಾಥ ದಾಸಪ್ಪ ಎನ್ನುವವರು ಅದೇ ವರ್ಷ ಜೂನ್ 15ರಂದು ಅರ್ಜಿಯೊಂದನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಭೂ ದಾಖಲೆಗಳ ಜಂಟಿ ನಿರ್ದೇಶಕರಿಂದ ಜೂನ್ 30ರಂದು  ಪತ್ರ ಬರೆದಿದ್ದರು.

ಇದನ್ನೆಲ್ಲ ಆಧರಿಸಿ ಮುನೀಷ್ ಮೌದ್ಗಿಲ್ ದಾಖಲೆಗಳನ್ನು ಪರಿಶೀಲಿಸಿ, ಶಂಕರ್ ಹಾಗೂ ಇತರ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ಭೂಮಿಯನ್ನು ಖಾಸಗಿ ಪಾಲು ಮಾಡುವುದಕ್ಕಾಗಿಯೇ ದಾಖಲೆಗಳನ್ನು ತಿದ್ದಿದ್ದಾರೆ ಎಂದು ಮೌದ್ಗಿಲ್ ಪತ್ರದಲ್ಲಿ ಆರೋಪಿಸಿದ್ದಾರೆ. ಈ ಭೂಮಿಯ ಬೆಲೆ ಸುಮಾರು 400 ಕೋಟಿ ರೂ. ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. 

ಮುನೀಷ್ ಮೌದ್ಗಿಲ್ ಎಸಿಬಿಗೆ ಬರೆದಿರುವ ಪತ್ರದ ಸಾರಾಂಶ ಹೀಗಿದೆ –

ಆನೇಕಲ್ ತಾಲೂಕು ಜಿಗಣಿ ಹೋಬಳಿಯ ಬುಕ್ಕಸಾಗರ ಗ್ರಾಮದ ಸ.ನಂ.183ರಲ್ಲಿನ ಸರಕಾರಕ್ಕೆ ಸೇರಿದ ಖರಾಬು ಜಮೀನನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆಗಳನ್ನು ತಯಾರು ಮಾಡುತ್ತಿರುವುದಾಗಿಯೂ, ಸರಕಾರಿ ಆಸ್ತಿಯನ್ನು ಉಳಿಸುವಂತೆಯೂ ಬುಕ್ಕಸಾಗರ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.  ಈ ಬಗ್ಗೆ ಬೆಂಗಳೂರು ನಗರ ಜಿಲ್ಲೆ ಭೂ ದಾಖಲೆಗಳ ಜಂಟಿ ನಿರ್ದೇಶಕರಿಂದ ವರದಿ ಪಡೆದು ಪರಿಶೀಲನೆ ನಡೆಸಲಾಯಿತು.

ಸ.ನಂ.183ರಲ್ಲಿ ಖರಾಬು ಕಲ್ಲುಬಂಡೆ ಮತ್ತು ಸರವು ಬಗ್ಗೆ ಫೂಟ್ ಖರಾಬು ಇದ್ದು, ರೀ ಕ್ಲಾಸಿಫಿಕೇಶನ್ ಸಂದರ್ಭದಲ್ಲಿ ಖರಾಬನ್ನು ಎ ಅಥವಾ ಬಿ ಎಂದು ವರ್ಗೀಕರಿಸದೆ ಒಟ್ಟೂ ಖರಾಬು ಸಿ ಕಾಲಂ ನಲ್ಲಿ ದಾಖಲಿಸಲಾಗಿದೆ. ಆದರೆ ಪ್ರತಿ ಮತ್ತು ಟಿಪ್ಪಣಿ ಪುಸ್ತಕದಲ್ಲಿ ಕಲ್ಲು ಬಂಡೆ ಮತ್ತು ಸರವು ಇರುವುದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸರ್ವೇ ಮ್ಯಾನ್ಯುವಲ್ ನಲ್ಲಿ ಸಹ ಖರಾಬನ್ನು ಬಿ ಖರಾಬು ಎಂದು ದಾಖಲಾಗಿದೆ. ಆದರೆ ರೀ ಕ್ಲಾಸಿಫಿಕೇಶನ್ ಸಂದರ್ಭದಲ್ಲಿ ಖರಾಬು ವರ್ಗೀಕರಿಸದೆ ನೇರವಾಗಿ 5 ಸಿ ಕಾಲಂ ನಲ್ಲಿ ನಮೂದಿಸಲಾಗಿದೆ.

ಹಲವು ನೂರು ಕೋಟಿ ರೂ ಮೌಲ್ಯ 

ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ತಮ್ಮ ಹಂತದಲ್ಲಿಯೇ ಕಲ್ಲು ಬಂಡೆ ಖರಾಬು ಆಗಿರುವ, ಸರಕಾರಕ್ಕೆ ಸೇರಿರುವ ಈ ಜಮೀನನ್ನು ಸಾಗು ಜಮೀನು ಎಂದು ದಾಖಲಿಸುವ ಮೂಲಕ ಸರ್ವೇ ಮ್ಯಾನ್ಯುವಲ್ ಮತ್ತು ಸರಕಾರದ 16-5-2018ರ ಆದೇಶವನ್ನು ಉಲ್ಲಂಘಿಸಿ, ಖಾಸಗಿ ವ್ಯಕ್ತಿಗಳ ಪಾಲಾಗಲು ಕಾರಣಕರ್ತರಾಗಿದ್ದಾರೆ ಎಂದು ಮೌದ್ಗಿಲ್ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನು ಆಧರಿಸಿ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳು ಎಕರೆ ಒಂದಕ್ಕೆ ದರ ನಿಗದಿಪಡಿಸಿ ಶುಲ್ಕ ಆಕರಿಸುವಂತೆ ಆನೇಕಲ್ ತಹಸಿಲ್ದಾರರಿಗೆ ಆದೇಶಿಸಿದ್ದಾರೆ. ಹಾಗಾಗಿ ಆನೇಕಲ್ ತಹಸಿಲ್ದಾರರು ಭೂ ಕಂದಾಯ ಆಕರಿಸಲಾಗಿರುವುದರಿಂದ ಸಾಗುಲಾಯಕ್ ಜಮೀನೆಂದು ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿಗಲು, ರಾಜಸ್ವ ನಿರೀಕ್ಷಕರು ಹಾಗೂ ಆನೆಕಲ್ ನ ಭೂದಾಖಲೆಗಳ ಸಹಾಯಕ ನಿರೀಕ್ಷಕರಿಗೆ ಆದೇಶಿಸಿದ್ದಾರೆ.

ಒಟ್ಟಾರೆ ಜಿಲ್ಲಾಧಿಕಾರಿಗಳು ಬಿ ಖರಾಬನ್ನು ಸಾಗು ಲಾಯಕ್ ಎಂದು ನಮೂದಿಸಿ 19.10 ಎಕರೆ ಜಮೀನು ಖಾಸಗಿ ವ್ಯಕ್ತಿಗಳ ಪಾಲಾಗಲು ಉದ್ದೇಶಪೂರ್ವಕವಾಗಿ ಅವಕಾಶ ಮಾಡಿಕೊಡುವ ಮೂಲಕ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿದ್ದಾರೆ. ತಪ್ಪು ಆದೇಶ ಹೊರಡಿಸುವ ಮೂಲಕ ಉದ್ದೇಶಪೂರ್ವಕವಾಗಿ ವಿಶ್ವಾಸ ದ್ರೋಹ ಅಪರಾಧ ಮಾಡಿದ್ದಾರೆ. ನಂತರ ಉಪವಿಭಾಗಾಧಿಕಾರಿಗಳು ಮತ್ತು ತಹಸಿಲ್ದಾರರು ಸಹ ಅದೇ ಆದೇಶವನ್ನು ಸಮರ್ಥಿಸಿ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಜಮೀನಿನ ಪ್ರಸ್ತುತ ಮಾರುಕಟ್ಟೆ ಮೌಲ್ಯವು ಹಲವು ನೂರು ಕೋಟಿ ರೂಗಳದ್ದಾಗಿದ್ದು,  ಈ ಹಿನ್ನೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ವಿಶ್ವಾಸ ದ್ರೋಹದ ಅಪರಾಧ ಕಾರಣವಾದ (Criminal breach of Trust) ಮೊಕದ್ದಮೆ ದಾಖಲಿಸಿ ಈ ಮೂವರು ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ಅವರು ಪತ್ರದಲ್ಲಿ ಕೋರಿದ್ದಾರೆ.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಇತರ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button