Politics

*ರಾಮನಗರಕ್ಕೆ ಮರು ನಾಮಕರಣ: ಸಿಎಂಗೆ ಮನವಿ ಸಲ್ಲಿಸಿದ ನಿಯೋಗ*

ಡಿಸಿಎಂ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ: ರಾಮನಗರ ಹೆಸರು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಮರು ನಾಮಕರಣ ಮಡುವಂತೆ ಒತ್ತಾಯಿಸಿ ಡಿಸಿಎಂ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿತು.

ಸಚಿವ ರಾಮಲಿಂಗಾರೆಡ್ಡಿ, ಶಾಸಕ ಇಕ್ಬಾಲ್ ಹುಸೇನ್, ಡಿ.ಕೆ.ಸುರೇಶ್ ಸೇರಿದಂತೆ ಒಟ್ಟು 12 ನಾಯಕರು ರಾಮನಗರ ಹೆಸರು ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದು, ಸಹಿಸಂಗ್ರಹದ ಪತ್ರದೊಂದಿಗೆ ನಿಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ರಾಮನಗರ ಹೆಸರು ಬದಲಾವಣೆ ಮಾಡಿ ಬೆಂಗಳೂರು ದಕ್ಷಿಣ ಎಂದು ಹೆಸರಿಡಲು ಮನವಿ ಮಾಡಿದ್ದೇವೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಸಹಮತ ನೀಡಿದ್ದಾರೆ ಎಂದರು.

ಈ ಹಿಂದೆ ರಾಮನಗರ ಬೆಂಗಳೂರಿಗೆ ಸೇರಿತ್ತು. ಬಳಿಕ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿತ್ತು. ಈಗ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡುವಂತೆ ಕೇಳಿಕೊಳ್ಳಲಾಗಿದೆ. ರಾಮನಗರವೇ ಕೇಂದ್ರ ಕಚೇರಿಯಾಗಿರುತ್ತದೆ. ಹೆಸರು ಮಾತ್ರ ಬೆಂಗಳೂರು ದಕ್ಷಿಣ ಎಂದು ಬದಲಾವಣೆಯಾಗಲಿದ್ದು, ಅದಕ್ಕೆ ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಹಾರೋಹಳ್ಳಿ ತಾಲೂಕುಗಳು ಸೇರಲಿವೆ ಎಂದು ವಿವರಿಸಿದರು.

—–

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣಕ್ಕೆ ಸಿಎಂಗೆ ಪ್ರಸ್ತಾವನೆ: ಡಿಸಿಎಂ ಡಿ.ಕೆ. ಶಿವಕುಮಾರ್

“ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ ತಾಲೂಕುಗಳ ಭವಿಷ್ಯ ಹಾಗೂ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ತಮ್ಮ ನೇತೃತ್ವದ ಜಿಲ್ಲೆಯ ನಾಯಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ ನೀಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಮುಖಂಡರನ್ನು ಒಳಗೊಂಡ ಡಿಸಿಎಂ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯ ಮರುನಾಮಕರಣ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಮಂಗಳವಾರ ನೀಡಿದರು.

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್ ಅವರು, “ಬೆಂಗಳೂರು ನಗರ ಸೇರಿದಂತೆ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ನಾವೆಲ್ಲರೂ ಮೂಲತಃ ಬೆಂಗಳೂರು ಜಿಲ್ಲೆಯವರು. ಆಡಳಿತಾತ್ಮಕ ದೃಷ್ಟಿಯಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಎಂದು ಹಿಂದೆ ವಿಭಾಗ ಮಾಡಲಾಯಿತು.

ರಾಮನಗರವನ್ನು ಕೇಂದ್ರಾಡಳಿತವಾಗಿಟ್ಟುಕೊಂಡೇ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ಅಗತ್ಯ. ಬೆಂಗಳೂರು ಜಾಗತಿಕ ಮನ್ನಣೆ ಹೊಂದಿದ್ದು, ಈ ಜಿಲ್ಲೆಯ ಹೆಸರು ಉಳಿಸಿಕೊಳ್ಳಲು ನನ್ನ ಮುಖಂಡತ್ವದಲ್ಲಿ ಜಿಲ್ಲೆಯ ನಾಯಕರು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ.

ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡುವುದರಿಂದ ಮುಂದೆ ರಾಮನಗರ, ಚನ್ನಪಟ್ಟಣ, ಮಾಗಡಿ ಸೇರಿದಂತೆ ಮೈಸೂರುವರೆಗೂ ಅಭಿವೃದ್ಧಿ ಸಾಧಿಸಲು, ಕೈಗಾರಿಕೆಗಳ ಸ್ಥಾಪನೆಗೆ ಆಹ್ವಾನಿಸಲು, ಜತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ನೆರವಾಗುತ್ತದೆ. ಬೆಂಗಳೂರಿನ ಒಂದು ದಿಕ್ಕಿನಲ್ಲಿ ಆಂಧ್ರ ಪ್ರದೇಶ, ಮತ್ತೊಂದು ದಿಕ್ಕಿನಲ್ಲಿ ತಮಿಳುನಾಡು ರಾಜ್ಯದ ಗಡಿ ಬರುತ್ತದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ವಿಸ್ತರಣೆಗೆ ನಮಗೆ ಉಳಿದಿರುವುದು ತುಮಕೂರು ಹಾಗೂ ಈ ಭಾಗ ಮಾತ್ರ. ನಮ್ಮ ಹೆಸರನ್ನು ನಾವು ಉಳಿಸಿಕೊಳ್ಳುತ್ತಿದ್ದೇವೆ.

ಇದು ಮರುನಾಮಕರಣವಷ್ಟೇ, ಹೊಸ ಜಿಲ್ಲೆಯಲ್ಲ:

ಹೊಸ ಜಿಲ್ಲೆಗೆ ನೀಡಿರುವ ಪ್ರಸ್ತಾವನೆಯಲ್ಲಿ ಯಾವ ಯಾವ ಕ್ಷೇತ್ರಗಳು ಬರಲಿವೆ ಎಂಬ ಪ್ರಶ್ನೆಗೆ, “ನಾವು ಯಾವುದೇ ಹೊಸ ಜಿಲ್ಲೆ ಮಾಡುತ್ತಿಲ್ಲ. ಇರುವ ಜಿಲ್ಲೆ ಹಾಗೇ ಇರಲಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ, ಕನಕಪುರ – ಈ ಐದು ತಾಲೂಕುಗಳನ್ನು ಒಳಗೊಂಡು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕಾರಣ ಮುಂದಾಗಿದ್ದೇವೆ” ಎಂದು ತಿಳಿಸಿದರು.

ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಸಿಸಿಟಿವಿ ಕ್ಯಾಮೆರ ಕಣ್ಗಾವಲು

ಡೆಂಗಿ ಪ್ರಕರಣ ಹೆಚ್ಚಳದ ಬಗ್ಗೆ ಕೇಳಿದಾಗ, “ಎಲ್ಲೆಂದರಲ್ಲಿ ಕಸ ಎಸೆಯುವವವರ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಪ್ಪಿಸಲು ಸಿಸಿಟಿವಿ ಕ್ಯಾಮೆರ ಕಣ್ಗಾವಲು ವ್ಯವಸ್ಥೆ ಮಾಡಲಾಗುವುದು. ಜನರು ಮನೆಯ ಬಳಿ ಬರುವ ಕಸ ಸಂಗ್ರಹ ವಾಹನಗಳಿಗೆ ಕಸವನ್ನು ಹಾಕದೆ ರಸ್ತೆ ಬದಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಎಲ್ ಇಡಿ ವಿದ್ಯುತ್ ದೀಪದ ಕಂಬಗಳಿಗೆ ಸಿಸಿಟಿವಿ ಕ್ಯಾಮೆರ ಅಳವಡಿಸಲು ಸೂಚನೆ ನೀಡಲಾಗಿದೆ. ಕಸ ಹಾಗೂ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿಯುವವರನ್ನು ಗುರುತಿಸಿ ಪ್ರಕರಣ ದಾಖಲಿಸುವ ಬಗ್ಗೆಯೂ ಸೂಚನೆ ನೀಡಲಾಗಿದೆ” ಎಂದರು.

ಡೆಂಗಿ ನಿಯಂತ್ರಣಕ್ಕೆ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತಿವೆ. ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸುತ್ತಾರೆ.

ವಾಲ್ಮೀಕಿ ನಿಗಮ ಹಗರಣದಲ್ಲಿ ಸಚಿವ, ಶಾಸಕರ ಪಾತ್ರವಿಲ್ಲ:

ವಾಲ್ಮೀಕಿ ನಿಗಮ ಭ್ರಷ್ಟಾಚಾರದ ಆರೋಪಿಗಳ ಸಂಭಾಷಣೆ ಆಡಿಯೋ ಸೋರಿಕೆ ಬಗ್ಗೆ ಕೇಳಿದಾಗ “ನಾನು ಆ ಆಡಿಯೋವನ್ನು ಕೇಳಿಲ್ಲ. ಜೊತೆಗೆ ಮುಕ್ತವಾಗಿ ತನಿಖೆ ನಡೆಯಬೇಕು ಎಂದು ಸಚಿವರೇ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಸ್ವತಃ ಸಚಿವರೇ ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಅವರಿಗೂ ನೋಟೀಸ್ ನೀಡಲಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿಯಿತು. ನಾನು ಇದರಲ್ಲಿ ಮೂಗು ತೂರಿಸಲು ಹೋಗುವುದಿಲ್ಲ. ಭ್ರಷ್ಟಾಚಾರದಲ್ಲಿ ನಮ್ಮ ಮಂತ್ರಿ, ಶಾಸಕರ ಪಾತ್ರವಿಲ್ಲ, ಆದರೆ ಬೇರೆಯವರು ಇದರಲ್ಲಿ ಭಾಗಿಯಾಗಿದ್ದಾರೆ” ಎಂದರು.

“ಸೋರಿಕೆಯಾಗಿರುವ ಆಡಿಯೋ ಸಂಭಾಷಣೆಯಲ್ಲಿ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಅಧ್ಯಕ್ಷರಿಗೆ ತಿಳಿಸೋಣ ಎಂದು ಪರಶುರಾಮ್ ಹೇಳುತ್ತಾರೆ. ಸ್ವಲ್ಪ ದಿನ ಬಿಟ್ಟು ಹೇಳೋಣ ಎಂದು ಪದ್ಮನಾಭ ಹೇಳುತ್ತಾರೆ” ಎಂದು ಕೇಳಿದಾಗ “ಹಗರಣದ ಬಗ್ಗೆ ಅಧ್ಯಕ್ಷರಿಗೆ ಮತ್ತು ಸಚಿವರಿಗೆ ಏನೂ ತಿಳಿದಿಲ್ಲ ಎಂಬುದು ಈ ಆಡಿಯೋ ಮೂಲಕವೇ ಸ್ಪಷ್ಟವಾಗುತ್ತಿಲ್ಲವೇ. ನಾನು ಆಡಿಯೋವನ್ನು ಕೇಳಿಸಿಕೊಂಡಿಲ್ಲ ನಿಮ್ಮಿಂದಲೇ ವಿಚಾರ ತಿಳಿಯುತ್ತಿದೆ. ನೀವು ಹೇಳುತ್ತಿರುವ ಮಾತಿನಲ್ಲೇ ಈ ಪ್ರಕರಣದಲ್ಲಿ ಅಧ್ಯಕ್ಷರು ಹಾಗೂ ಸಚಿವರ ಪಾತ್ರವಿಲ್ಲ ಎಂಬುದು ಸ್ಚಷ್ಟವಾಗಿದೆ” ಎಂದರು.

ಸಿಬ್ಬಂದಿ ಕೊರತೆ ಬಗ್ಗೆ ಗಮನಹರಿಸುತ್ತೇವೆ:

ರಾಮನಗರ ಹಾಗೂ ಕನಕಪುರ ಮೆಡಿಕಲ್ ಕಾಲೇಜಿಗೆ ಅನುಮತಿ ಸಿಕ್ಕಿಲ್ಲ ಎಂಬ ಪ್ರಶ್ನೆಗೆ, “ರಾಮನಗರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ತರಬೇಕು ಎಂಬುದು ನಮ್ಮೆಲ್ಲರ ಬೇಡಿಕೆಯಾಗಿತ್ತು. ಈ ವಿಚಾರವನ್ನು ಬಜೆಟ್ ನಲ್ಲೂ ಸೇರಿಸಲಾಗಿತ್ತು. ಸಿಬ್ಬಂದಿ ಕೊರತೆ ಎಂದು ಅನುಮತಿ ನೀಡಿಲ್ಲ ಎಂಬ ವಿಚಾರ ತಿಳಿಸಿದ್ದು, ಈ ಬಗ್ಗೆ ಗಮನಹರಿಸುತ್ತೇವೆ” ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button