Kannada NewsKarnataka News

ಪೊಲೀಸರ ನಿದ್ದೆಗೆಡಿಸಿದ ನಟೋರಿಯಸ್ ಚಡ್ಡಿ ಗ್ಯಾಂಗ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ: ವೃದ್ಧ ದಂಪತಿಗಳ ಮನೆಗೆ ಕನ್ನ ಹಾಕಿ, ಚಿನ್ನಾಭರಣ ಸೇರಿದಂತೆ ಮೌಲ್ಯಯುತ ವಸ್ತುಗಳನ್ನು ದರೋಡೆ ಮಾಡಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ ನ ನಾಲ್ವರು ಸದಸ್ಯರನ್ನು ಮಂಗಳೂರು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದು, ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಚಡ್ಡಿ ಗ್ಯಾಂಗ್ ಗೆ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.

ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದರೋಡೆ ನಡೆದಿತ್ತು. ಕೋಟೆಕಣಿ ರಸ್ತೆಯಲ್ಲಿರುವ ವಿಕ್ಟರ್ ಮೆಂಡೋನ್ಕಾ ಮತ್ತು ಪೆಟ್ರೀಷಿಯಾ ಮೆಂಡೋನ್ಕಾ ಮನೆಗೆ ಮಧ್ಯ ರಾತ್ರಿ 1:45 ರ ವೇಳೆಗೆ ಕಿಟಕಿ ಗ್ರಿಲ್ ಗಳನ್ನು ಮುರಿಯುವ ಮೂಲಕ ನುಗ್ಗಿದ ಗ್ಯಾಂಗ್ ನ ಸದಸ್ಯರು, ವೃದ್ಧ ದಂಪತಿಗೆ ಥಳಿಸಿ ಚಿನ್ನಾಭರಣ, ವಾಚ್, ಮೊಬೈಲ್ ಫೋನ್ ಸೇರಿದಂತೆ 13 ಲಕ್ಷಕ್ಕೂ ಹೆಚ್ಚಿನ ಮೌಲ್ಯವುಳ್ಳ ವಸ್ತುಗಳನ್ನು ದರೋಡೆ ಮಾಡಿ, ಮನೆಯ ಮಾಲಿಕರ ಕಾರಿನಲ್ಲೇ ಪರಾರಿಯಾಗಿದ್ದರು. 

ಮಂಗಳೂರಿನಲ್ಲಿ ಸರಣಿ ದರೋಡೆ ನಡೆಸಿ ಪರಾರಿಯಾಗಿದ್ದ ಮಧ್ಯಪ್ರದೇಶ ಮೂಲದ ಕತರ್ನಾಕ್ ಚಡ್ಡಿ ಗ್ಯಾಂಗ್ ಅನ್ನು ಪೊಲೀಸರು ಕೇಲವೆ ಗಂಟೆಯಲ್ಲಿ ಸಕಲೇಶಪುರದಲ್ಲಿ ಬಂಧಿಸಿದ್ದಾರೆ.‌ ದರೋಡೆಕೋರರು ಪರಾರಿಯಾಗಿದ್ದ ಕಾರು ಘಟನಾ ಸ್ಥಳದಿಂದ 25 ಕಿ.ಮೀ ದೂರವಿರುವ ಮುಲ್ಕಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂಲ್ಕಿ ಬಸ್ ನಿಲ್ದಾಣದ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗ್ಯಾಂಗ್ ಬಸ್‌ನಲ್ಲಿ ಬೆಂಗಳೂರಿಗೆ ತೆರಳುವ ಮೊದಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿಗೆ ಮರಳಿದೆ ಎಂಬುದು ತಿಳಿದುಬಂದಿದೆ. ಬಸ್ ಕಂಡಕ್ಟರ್ ಅವರನ್ನು ಸಂಪರ್ಕಿಸಿ, ಹಾಸನ ಎಸ್ಪಿಗೆ ಮಾಹಿತಿ ನೀಡಿದ ನಂತರ ಸಕಲೇಶಪುರ ಡಿವೈಎಸ್ಪಿ ನೇತೃತ್ವದ ತಂಡ ಸಕಲೇಶಪುರ ಬಳಿ ಬಸ್ ನ್ನು ತಡೆದು ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳು ಎಎಸ್ ಐ ಒಬ್ಬರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಪೊಲೀಸರು ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ‌ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button