*ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ ಕೆಎಲ್ಇ ಆಸ್ಪತ್ರೆಯ ವೈದ್ಯರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತೀವ್ರವಾದ ಕುತ್ತಿಗೆ ನೋವು, ಎಲ್ಲಾ ಕೈಕಾಲುಗಳಲ್ಲಿ ದೌರ್ಬಲ್ಯ ಮತ್ತು ಆಹಾರ ಮತ್ತು ದ್ರವ ಪದಾರ್ಥಗಳನ್ನು ಸೇವಿಸಲು ಕಷ್ಟಪಡುತ್ತಿದ್ದ ಮಹಿಳೆಯೋರ್ವಳು ಚಿಯಾರಿ ಮಾಲ್ಫಾರ್ಮೇಶನ್ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಳು. ಇದರಿಂದ ಅವಳ ಪ್ರಾಣಕ್ಕೆ ತೊಂದರೆಯನ್ನುಂಟು ಮಾಡುತ್ತಿತ್ತು. ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ನಿಪ್ಪಾಣಿ ಮೂಲದ 38 ವರ್ಷದ ಮಹಿಳೆಯು ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದಾಗ ಮೆದುಳು ಮತ್ತು ಬೆನ್ನುಮೂಳೆಯ ಸ್ಕ್ಯಾನ್ ಮಾಡಿ ನೋಡಿದಾಗ ಅತ್ಯಂತ ಅಪರೂಪವಾದ ಮತ್ತು ಸಂಕೀರ್ಣತೆಯಿಂದ ಕೂಡಿದ ಚಿಯಾರಿ ಮಾಲ್ಪಾರ್ಮೇಶನ್ ಎಂಬ ಖಾಯಿಲೆಯಿಂದ ಬಳಲುತ್ತಿರುವದು ಕಂಡು ಬಂದಿತು. ಇದು ಕ್ರೆನಿಯೋ ವರ್ಟೆಬ್ರಲ್ ಸಂಧಿಯ ಎಲಬು ಮತ್ತು ಮೃದು ಅಂಗಾಂಶಗಳ ಅಸಹಜತೆಯಿಂದ ಕೂಡಿದ್ದು, ಮೆದುಳು ಕಾಂಡ, ಕುತ್ತಿಗೆ ಹಾಗೂ ಬೆನ್ನು ಮೂಳೆಯ ಮೇಲೆ ಪರಿಣಾಮ ಬೀರಿ ನರಮಂಡಲ ವ್ಯವಸ್ಥೆಯನ್ನು ಘಾಸಿಗೊಳಿಸುತ್ತದೆ.
ಇದರಿಂದ ವ್ಯಕ್ತಿಯು ಕುಗ್ಗಿ ಹೋಗುತ್ತಾನೆ. ವಯಸ್ಕರಲ್ಲಿ ಇದು ಕಂಡು ಬರುತ್ತದೆ. ಇದನ್ನು ಶೀಘ್ರ ಪತ್ತೆ ಮಾಡಿ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸದಿದ್ದರೆ ತೀವ್ರವಾದ ತೊಂದರೆ ಅನುಭವಿಸಬೇಕಾಗುತ್ತದೆ.
ಸುಮಾರು 6 ಗಂಟೆಗಳ ಕಾಲ ನಿರಂತರವಾದ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಾಯಿತು. ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆಯು ಕೇವಲ ನಾಲ್ಕು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದರು.
ಚಿಯಾರಿ ಎನ್ನುವುದು ನರಮಂಡಲದ ಅತ್ಯಂತ ಸೂಕ್ಷ್ಮವಾದ ಭಾಗದ ಮೇಲೆ ಪರಿಣಾಮ ಬೀರುವ ಅಪರೂಪದ ಖಾಯಿಲೆ. ಇದು ಮೆದುಳಿನ ಕಾಂಡ, ಮೇಲಿನ ಬೆನ್ನುಹುರಿ ಮತ್ತು ಬೆನ್ನುಮೂಳೆಯ ಅಪಧಮನಿಗಳನ್ನು ಒಳಗೊಂಡಿರುವ ಬೆನ್ನುಮೂಳೆಯ ಜಂಕ್ಷನ್. ನರಶಸ್ತ್ರಚಿಕಿತ್ಸಕರಾದ ಡಾ. ಅಭಿಷೇಕ್ ಪಾಟೀಲ್ ಅವರಿಗೆ ನರರೋಗ ಅರವಳಿಕೆ ತಜ್ಞವೈದ್ಯರಾದ ಡಾ. ನರೇಂದ್ರ ಪಾಟೀಲ, ಡಾ. ಟೀನಾ ದೇಸಾಯಿ, ಫಿಸಿಯೋಥೆರಪಿಸ್ಟ ಡಾ. ಗಾಯಿತ್ರಿ ಗುರವ ಹಾಗೂ ಡಾ. ಅಫ್ನಾನ ಅವರು ಸಹಕರಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಅಭಿಷೇಕ ಪಾಟೀಲ ಹಾಗೂ ಅವರ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ. ದಯಾನಂದ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ