Kannada NewsKarnataka News

ಗೋಕಾಕ ಫಾಲ್ಸ್ ನ ದನದ ಕೊಟ್ಟಿಗೆಗೆ ವಿದ್ಯುತ್ ಕಲ್ಪಿಸಲು ಹೋರಾಟ

ಗೋಕಾಕ ಫಾಲ್ಸ್ ನ ದನದ ಕೊಟ್ಟಿಗೆಗೆ ವಿದ್ಯುತ್ ಕಲ್ಪಿಸಲು ಹೋರಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಗೋಕಾಕ ತಾಲೂಕಿನ ಗೋಕಾಕ ಫಾಲ್ಸ್ ನ ದನದ ಕೊಟ್ಟಿಗೆ ಜನರಿಗೆ ವಿದ್ಯುತ್ ಸಂಪರ್ಕ ಒದಗಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ವೇದಿಕೆ ಸಿದ್ದವಾಗಿದೆ. ಸೆಪ್ಟೆಂಬರ್ 16 ರಿಂದ ಅನಿರ್ದಿಷ್ಟ ಹೋರಾಟ ಆರಂಭಿಸಲಾಗುತ್ತಿದೆ.
ಈ ಕುರಿತು ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ  ಬಿಜೆಪಿ ನಾಯಕ ಅಶೋಕ  ಪೂಜಾರಿ ಅವರು, ಸೋಮವಾರ ದಿನಾಂಕ 16-09-2019  ರಂದು ಬೆಳಿಗ್ಗೆ 10 ಗಂಟೆಗೆ ದನದ ಕೊಟ್ಟಿಗೆ ಓಣಿಯಿಂದ ಗೋಕಾಕ ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸಲಾಗುವುದು. ಪಾದಯಾತ್ರೆಯ ನಂತರ ಬೇಡಿಕೆ ಈಡೇರುವವರೆಗೆ ತಹಶೀಲ್ದಾರ ಕಚೇರಿಯ ಮುಂದೆ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ತಿಳಿಸಿದರು.
ಕಳೆದ ಎರಡು ಶತಮಾನಗಳ ನಿರಂತರ ಬೇಡಿಕೆಯ ನಂತರವೂ, ದೇಶದಲ್ಲಿಯೇ ಮೊದಲ ಜಲ ವಿದ್ಯುತ್ ಸ್ಥಾವರ ಹೊಂದಿದ್ದ ಗೋಕಾಕ ಫಾಲ್ಸ್‍ನ ಮೂಲ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಅಲ್ಲಿರುವ ಸುಮಾರು 500 ಕುಟುಂಬಗಳ ಪೈಕಿ 90 ಪ್ರತಿಶತಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ ಪಂಗಡದ ಜನಾಂಗದವರೇ ಇದ್ದಾರೆ. ಈ ಶೋಷಿತ ಸಮುದಾಯಗಳ ಬಡ ಜನರಿಗೆ ಮೂಲ ಸೌಕರ್ಯ ಒದಗಿಸದಿರುವದು ಅತ್ಯಂತ ದುರ್ದೈವದ ಸಂಗತಿ ಎಂದರು.
ಈ ಬಡ ಜನರಿಗೆ ವಿದ್ಯುತ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ, ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ಹೋರಾಟದ ಫಲವಾಗಿ ಕೇಂದ್ರ ಸರಕಾರದ ಸೌಭಾಗ್ಯ ಯೋಜನೆಯ ಅಡಿಯಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲು ಮಂಜೂರಾತಿ  ದೊರೆತಿದೆ. ಹೆಸ್ಕಾಂ ಇಲಾಖೆಯೂ ಮಂಜೂರಾತಿ ನೀಡಿದೆ. ವಿದ್ಯುತ್ ಕಾಮಗಾರಿಗಳಿಗಾಗಿ ಗುತ್ತಿಗೆಯನ್ನೂ ನೀಡಿದೆ. ಗುತ್ತಿಗೆ ನೀಡಿ ಒಂದು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ವಿವರಿಸಿದರು.
ಗೋಕಾಕ ಫಾಲ್ಸ್ ನ ಆಡಳಿತ ಮಂಡಳಿ, ಕೊಣ್ಣೂರು ಪುರಸಭೆ ಮತ್ತು ಗೋಕಾಕ ಶಾಸಕರ ಅಪವಿತ್ರ ಹೊಂದಾಣಿಕೆ ಮತ್ತು ನಿರ್ಲಕ್ಷದಿಂದಾಗಿ ದನದ ಕೊಟ್ಟಿಗೆಯ ಬಡ ಜನರು ಇಂದಿಗೂ ಕತ್ತಲಲ್ಲಿ ಬದುಕಬೇಕಾಗಿದೆ. ಸೌಭಾಗ್ಯ ಯೋಜನೆ ಮಂಜೂರಾಗಿದ್ದರೂ ಕೊಣ್ಣೂರು ಪುರಸಭೆಯ ಅಧಿಕಾರಿಗಳು ಕಾಮಗಾರಿ ಆರಂಭಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕಳೆದ 22 ವರ್ಷಗಳಿಂದ ಗೋಕಾಕ ಪ್ರತಿನಿಧಿಸುತ್ತಿರುವ ರಮೇಶ ಜಾರಕಿಹೊಳಿ ಅವರ ರಾಜಕೀಯ ಜೀವನ ಆರಂಭವಾಗಿದ್ದೆ ಈ ದನದ ಕೊಟ್ಟಿಗೆಯಿಂದ. ಶಾಸಕರಾದ ನಂತರ ಅವರು ಈ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಜನಪ್ರತಿನಿಧಿಯಾಗಿ ಜನರ ಹಿತ ಕಾಯುವುದರ ಬದಲು ಗೋಕಾಕ ಫಾಲ್ಸ್ ಮರ್ಜಿ ಕಾಯುತ್ತಿದ್ದಾರೆ. ಪುರಸಭೆಯ ಅಧಿಕಾರಿಗಳು ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
ದನದ ಕೊಟ್ಟಿಗೆ ಈಗ ಅಧಿಸೂಚಿತ ಪ್ರದೇಶ ಅಲ್ಲ. ಅಲ್ಲಿಂದ ಪುರಸಭೆಗೆ ಸದಸ್ಯರು ಆಯ್ಕೆಯಾಗಿದ್ದಾರೆ. ಅದು ರಾಜ್ಯ ಸರಕಾರದ ಜಮೀನು. ಅಲ್ಲಿಯ ನಿವಾಸಿಗಳು ಮೂಲ ನಿವಾಸಿಗಳು. ಈ ಮೂಲ ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲೇ ಬೇಕು. ಗೌರವಯುತ ಬದುಕು ಅಲ್ಲಿಯ ಜನರ ಹಕ್ಕು. ಅಲ್ಲಿಯ ಜನರಿಗೆ ಅವರ ಹಕ್ಕು ದೊರಕಿಸಲು ನಿರ್ಣಾಯಕ ಹೋರಾಟಕ್ಕೆ ಸಿದ್ದರಾಗಿದ್ದೇವೆ ಎಂದರು.
ನೊಂದ ಕಾರ್ಮಿಕರ ಹೋರಾಟ ಸಮಿತಿಯ ಅಧ್ಯಕ್ಷ ನಿಂಗಪ್ಪ ನಾಯಕ, ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ, ದಸ್ತಗೀರ ಪಹೇಲ್ವಾನ, ಕಾಡಣ್ಣ ಗಣಾಚಾರಿ, ಪ್ರಕಾಶ ಮಾಳಗೇರ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button