ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಖ್ಯಾತ ನಿರೂಪಕಿ ಅಪರ್ಣಾ ನಿಧನರಾಗಿದ್ದಾರೆ. ಅವರಿಗೆ 51 ವರ್ಷ ವಯಸ್ಸಾಗಿತ್ತು.
ಕನ್ನಡದ ಕಾರ್ಯಕ್ರಮಗಳ, ವಿಶೇಷವಾಗಿ ಸರಕಾರಿ ಕಾರ್ಯಕ್ರಮಗಳ ನಿರೂಪಣೆಯ ಮೂಲಕ ಜನಮನ ಗೆದ್ದಿದ್ದ ಅಪರ್ಣಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು.
ಅಪರ್ಣ ಬನಶಂಕರಿ ಸೆಕೆಂಡ್ ಸ್ಟೇಜ್ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಆಯತಪ್ಪಿ ಬಿದ್ದು ಗಾಯಮಾಡಿಕೊಂಡಿದ್ದರು. ಹೀಗಾಗಿ ಹಲವು ದಿನಗಳ ವಿಶ್ರಾಂತಿ ಪಡೆದಿದ್ದರು.
1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದ ಅಪರ್ಣಾ ನಂತರ ಇನ್ಸ್ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಸಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾಗಿಂತ ನಿರೂಪಕಿಯಾಗಿ ಅಪರ್ಣಾ ಎಲ್ಲರ ಮನಗೆದ್ದಿದ್ದರು. ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡುವ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು.
90 ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998 ರಲ್ಲಿ ನೆಡೆದ ದೀಪಾವಳಿ ಕಾರ್ಯಕ್ರಮವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು.
2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದ ಅಪರ್ಣಾ ರಿಯಾಲಿಟಿ ಶೋಗಳಲ್ಲೂ ಸೈ ಎನಿಸಿಕೊಂಡಿದ್ರು. ಇನ್ನು 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಹಾಸ್ಯ ನಟಿಯಾಗಿಯೂ ಜನರ ಮನಗೆದ್ದಿದ್ದರು. ಮಜಾ ಟಾಕೀಸ್ ಮೂಲಕ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಅಪರ್ಣಾ, ಹಾಸ್ಯ ಪಾತ್ರಗಳಲ್ಲೂ ನಟನಾ ಕೌಶಲ್ಯ ಮೆರೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ