‘ಬೆಂಗಳೂರು ದಕ್ಷಿಣ’ ಜಿಲ್ಲೆ ಮಾಡಿಯೇ ಸಿದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು ನಮ್ಮ ಗುರುತು, ಸ್ವಾಭಿಮಾನ; ಯಾರೇ ಟೀಕೆ ಮಾಡಲಿ
ಪ್ರಗತಿವಾಹಿನಿ ಸುದ್ದಿ, ಚನ್ನಪಟ್ಟಣ : ನಾವು ಮೂಲತಃ ಬೆಂಗಳೂರಿನವರು. ಬೆಂಗಳೂರು ಎಂಬುದು ನಮ್ಮ ಗುರುತು ಹಾಗೂ ನಮ್ಮ ಸ್ವಾಭಿಮಾನ. ಇದನ್ನು ನಾವು ಕಳೆದುಕೊಳ್ಳಬಾರದು. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಟೀಕೆ ಮಾಡಲಿ ಈ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಿಯೇ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣದಲ್ಲಿ ಶುಕ್ರವಾರ ನಡೆದ ಸರ್ಕಾರಿ ನೌಕರರ ಸಂಘದ ಸಮ್ಮೇಳನದಲ್ಲಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
“ಜಿಲ್ಲೆಯ ಹೆಸರು ಮಾತ್ರ ಬದಲಾಗುತ್ತದೆ ಹೊರತು ರಾಮನಗರದ ಹೆಸರು, ಆಡಳಿತ ಕೇಂದ್ರ ಹಾಗೆಯೇ ಉಳಿಯಲಿದೆ. ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ, ಹಾರೋಹಳ್ಳಿ ಸೇರಿಸಿ ಬೆಂಗಳೂರು ದಕ್ಷಿಣ ಮಾಡಲಾಗುತ್ತದೆ. ನಾನು ಜಿಲ್ಲಾ ಪರಿಷತ್ ಸದಸ್ಯನಾಗಿದ್ದಾಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪರಿಷತ್ ಎಂದು ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಾಗಿತ್ತು. ಆಡಳಿತಾತ್ಮಕವಾಗಿ ಪ್ರತ್ಯೇಕ ಜಿಲ್ಲೆ ಮಾಡುವಾಗ ಬೆಂಗಳೂರು ಹೆಸರನ್ನು ಕಳೆದುಕೊಳ್ಳುವುದು ಬೇಡ ಎಂದು ಸಲಹೆ ನೀಡಿದ್ದೆ. ನನ್ನನ್ನು ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಶಿವಕುಮಾರ್ ಎಂದು ಗುರುತಿಸಿಕೊಳ್ಳುತ್ತೇವೆ. ದೇವೇಗೌಡರು ಕೂಡ ತಮ್ಮ ಹೆಸರಿನಲ್ಲಿ ತಮ್ಮ ಊರು, ತಂದೆಯ ಹೆಸರನ್ನು ಇಟ್ಟುಕೊಂಡಿದ್ದಾರೆ. ಎಲ್ಲರೂ ಕೂಡ ಈ ರೀತಿ ತಮ್ಮ ಮೂಲ ಗುರುತನ್ನು ಉಳಿಸಿಕೊಳ್ಳುತ್ತಾರೆ. ನಾವು ಯಾಕೆ ನಮ್ಮ ಬೆಂಗಳೂರು ಗುರುತನ್ನು ಬಿಟ್ಟುಕೊಡಬೇಕು? ಕನಕಪುರ ಲೋಕಸಭೆ ಕ್ಷೇತ್ರವನ್ನು ಬೆಂಗಳೂರು ಗ್ರಾಮಾಂತರ ಎಂದು ಮರು ನಾಮಕರಣ ಮಾಡಿದ್ದು ಏಕೆ? ಬೆಂಗಳೂರು ಎಂಬುದು ಒಂದು ಬ್ರ್ಯಾಂಡ್. ಅದು ನಮ್ಮ ಹೆಗ್ಗುರುತು. ಅದನ್ನು ನಾವು ಏಕೆ ಕಳೆದುಕೊಳ್ಳಬೇಕು? ನಮ್ಮ ಈ ಗುರುತನ್ನು ಉಳಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದು, ನಾನು ಇದನ್ನು ಮಾಡೇ ಮಾಡುತ್ತೇನೆ.
2003ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಬಂದು, ‘ಇಷ್ಟು ದಿನಗಳ ಕಾಲ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದ್ದರು.
ಬಿಜೆಪಿ ಹಾಗೂ ಜೆಡಿಎಸ್ ನವರು ಏನಾದರೂ ಟ್ವೀಟ್ ಮಾಡಲಿ, ಟೀಕೆ ಮಾಡಲಿ, ನಮ್ಮ ಸ್ವಾಭಿಮಾನವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. ಜನ ನಮ್ಮ ನಿರ್ಧಾರದಿಂದ ಸಂತೋಷವಾಗಿದ್ದಾರೆ.
ನಾನು, ನಮ್ಮ ನಾಯಕರು ಈ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕಾರಣ ಮಾಡಲು ಮುಂದಾದರೆ ರಿಯಲ್ ಎಸ್ಟೇಟ್ ಗಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾನು ಇಲ್ಲಿ ಬಂದು ರಿಯಲ್ ಎಸ್ಟೇಟ್ ಮಾಡಬೇಕಾಗಿಲ್ಲ. ನನ್ನ ಕ್ಷೇತ್ರದಲ್ಲಿ ಅನೇಕ ಆಸ್ತಿಯನ್ನು ಶಾಲೆಗಳಿಗೆ ದಾನ ಮಾಡಿದ್ದೇನೆ. ನಾನು ಬಡವ ಎಂದು ಹೇಳುವುದಿಲ್ಲ. ಇದು ನನ್ನ ನೆಲ. ನನ್ನನ್ನು ಬೆಳೆಸಿದ ನೆಲ. ಇದನ್ನು ಅಭಿವೃದ್ಧಿ ಮಾಡಬೇಕಾಗಿರುವುದು ನನ್ನ ಜವಾಬ್ದಾರಿ. ಈ ಜನರ ಜೇಬಿಗೆ ಹಣ ಹಾಕಲು ಸಾಧ್ಯವಾಗುವುದಿಲ್ಲ. ಆದರೆ ಅವರ ಆಸ್ತಿ ಮೌಲ್ಯವನ್ನು ಹೆಚ್ಚಿಸಿ ಅವರಿಗೆ ಶಕ್ತಿ ತುಂಬಬೇಕು. ಅದು ನನ್ನ ಜವಾಬ್ದಾರಿ. ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ಮಾಡುವ ಮೊದಲು ಅಲ್ಲಿ ಎಕರೆ ಮೌಲ್ಯ 6 ಲಕ್ಷ ಇತ್ತು. ಈಗ ಅದು 10 ಕೋಟಿಗೂ ಹೆಚ್ಚಾಗಿದೆ. ಅಲ್ಲಿನ ಆಸ್ತಿ ಮೌಲ್ಯ ಹೆಚ್ಚಾಗಿದೆ.
ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಕೂಡ ಸರ್ಕಾರಿ ನೌಕರರೇ. 1987ರಲ್ಲಿ ನಾನು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿದ್ದೆ. ಅವರು ಪಾಲಿಕೆ ಸದಸ್ಯರಾಗಿದ್ದರು. ನಾವಿಬ್ಬರು 8 ಬಾರಿ ಸತತವಾಗಿ ವಿಧಾನಸಭೆಗೆ ಪ್ರವೇಶ ಮಾಡಿದ್ದೇವೆ. ನಿಮಗೆ ನಿವೃತ್ತಿ ಇದೆ. ನಮಗೆ ನಿವೃತ್ತಿ ಇಲ್ಲ. ಇಷ್ಟೇ ನಮಗೂ, ನಿಮಗೂ ಇರುವ ವ್ಯತ್ಯಾಸ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗ ನಾಲ್ಕು ಆಧಾರಸ್ತಂಭಗಳು. ಶಾಸಕಾಂಗ ಮಾಡಿದ ಕಾರ್ಯಕ್ರಮ ಜಾರಿಗೆ ತರುವುದು ಕಾರ್ಯಾಂಗವಾದ ನೀವುಗಳು. ನಾವಿಬ್ಬರು ತಪ್ಪು ಮಾಡಿದರೆ ಅದನ್ನು ತಿದ್ದುವುದು ನ್ಯಾಯಾಂಗ. ನಾವು ನೀವು ಮಾಡುತ್ತಿರುವುದು ಸರ್ಕಾರಿ ಕೆಲಸ. ಕೆಂಗಲ್ ಹನುಮಂತಯ್ಯ ಅವರು ನಮ್ಮ ಜಿಲ್ಲೆಯವರು. ಅವರು ವಿಧಾನಸೌಧ ಕಟ್ಟಿ ಅದರ ಪ್ರವೇಶ ದ್ವಾರದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಸಿದ್ದಾರೆ.
ಬಡವರು, ಜನರು ನಿಮ್ಮ ಬಳಿ ಬರುವುದು ಅವರ ಕಷ್ಟಕ್ಕೆ ಪರಿಹಾರ ಕೇಳಿಕೊಂಡು. ನಾವು ದಿನ ಬೆಳಗಾದರೆ ದೇವರ ಮುಂದೆ ನಿಂತು ಪ್ರಾರ್ಥನೆ ಮಾಡಿ ಕಷ್ಟಗಳನ್ನು ಹೇಳಿಕೊಳ್ಳುತ್ತೇವೆ. ಅರ್ಚಕನ ಪ್ರಭಾವದಿಂದ ಶಿಲೆಯಲ್ಲೂ ಶಂಕರನನ್ನು ಕಾಣಬಹುದು ಎಂದು ಶ್ಲೋಕ ಹೇಳುತ್ತದೆ. ಅದೇ ರೀತಿ ಜನ ತಮ್ಮ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕೆ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ನೀವು ಅವರ ಕಷ್ಟಕ್ಕೆ ಸ್ಪಂದಿಸಿದಾಗ ಜನ ನಿಮ್ಮನ್ನು ಸ್ಮರಿಸುತ್ತಾರೆ. ಅವರ ಹೃದಯದಲ್ಲಿ ನಿಮಗೆ ಗೌರವಯುತ ಸ್ಥಾನ ನೀಡುತ್ತಾರೆ.
ಹಣ ಯಾವತ್ತು ಬೇಕಾದರೂ ಸಂಪಾದನೆ ಮಾಡಬಹುದು. ನೀವು ಎಷ್ಟೇ ಸಂಪಾದಿಸಿದರೂ ಎಲ್ಲರಷ್ಟೇ ತಿನ್ನಬಹುದು. ಹೆಚ್ಚು ತಿಂದರೆ ವಾಂತಿಯಾಗುತ್ತದೆ. ನೀವು ಅತ್ಯುತ್ತಮ ಬಟ್ಟೆ ಖರೀದಿ ಮಾಡಿದರೂ ಒಂದೆರಡು ದಿನ ಮಾತ್ರ ಧರಿಸಬಹುದು.
ಪರೋಪಕಾರಾಯ ಫಲಂತಿ ವೃಕ್ಷಾಃ ಪರೋಪಕಾರಾಯ ವಹಂತಿ ನದ್ಯಃ | ಪರೋಪಕಾರಾಯ ದುಹಂತಿ ಗಾವಃ ಪರೋಪಕಾರಾರ್ಥಮ್ ಇದಂ ಶರೀರಮ್ ಎಂಬ ಶ್ಲೋಕವಿದೆ. ಇದರ ಅರ್ಥ ಏನೆಂದರೆ, ಮರ ಹಣ್ಣು, ಸೌದೆ ಕೊಡುವುದು ತನಗಾಗಿ ಅಲ್ಲ, ಬೇರೆಯವರಿಗಾಗಿ. ಹರಿಯುವ ನದಿ ಕೂಡ ತನಗಾಗಿ ಅನುಕೂಲ ಮಾಡಿಕೊಳ್ಳುವುದಿಲ್ಲ. ಬೇರೆಯವರ ಅನುಕೂಲ ಮಾಡಿಕೊಡಲು ಹರಿಯುತ್ತದೆ. ಅದೇ ರೀತಿ ಹಸು ಕೂಡ ಬೇರೆಯವರಿಗೆ ಹಾಲು ಕೊಟ್ಟು ಪರೋಪಕಾರ ಮಾಡುತ್ತದೆ. ಮನುಷ್ಯ ಇರುವುದು ಕೂಡ ಬೇರೆಯವರಿಗಾಗಿ. ಹೀಗಾಗಿ ಅವಕಾಶ ಸಿಕ್ಕಾಗ ಬಹಳ ಪ್ರಮಾಣಿಕವಾಗಿ ಕೆಲಸ ಮಾಡಿ.
ನಮ್ಮ ಹಣೆಬರಹ ನಿಮ್ಮ ಮೇಲಿರುತ್ತದೆ. ನೀವು ಯಾವ ರೀತಿ ಜನರಿಗೆ ಸ್ಪಂದಿಸುತ್ತೀರಿ, ಅದರ ಮೇಲೆ ಸರ್ಕಾರದ ಕಾರ್ಯವೈಖರಿ ನಿರ್ಧಾರ ಮಾಡಲಾಗುತ್ತದೆ. ನಿಮಗೆ ನೀಡಬೇಕಾದ ಗೌರವವನ್ನು ನಾವು ನೀಡುತ್ತೇವೆ. ನಿಮಗೆ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ನಾವು 6ನೇ ವೇತನ ಆಯೋಗ ಜಾರಿ ಮಾಡಿದ್ದೆವು. ನಮ್ಮ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಕೆಲವು ನಿಮಗೆ ತಲುಪುತ್ತಿವೆ. 7ನೇ ವೇತನ ಆಗ ಜಾರಿ ಮಾಡುವುದು ನಮ್ಮ ಆರನೇ ಗ್ಯಾರಂಟಿ ಯೋಜನೆಯಾಗಿತ್ತು ಅದನ್ನು ಮಾಡಿದ್ದೇವೆ. ನಮ್ಮ ಈ ನಿರ್ಧಾರದಿಂದ 12 ಲಕ್ಷ ಕುಟುಂಬಕ್ಕೆ ಪ್ರಯೋಜನವಾಗುತ್ತಿದೆ.
ಇನ್ನು ಒಪಿಎಸ್ ಹಾಗೂ ಆರೋಗ್ಯದ ವಿಚಾರವಾಗಿ ನಿಮ್ಮ ಪ್ರತಿನಿಧಿಗಳು ನಮ್ಮನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಗಿ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚಿಸಲಾಗಿದೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅವಕಾಶ ಸಿಕ್ಕಾಗ ನೀವು ಬೇರೆಯವರಿಗೆ ನೆರವಾಗಬೇಕು. ಆ ಮೂಲಕ ಜನರ ಹೃದಯ ಗೆಲ್ಲಬೇಕು.
ಕೊಟ್ಟ ಮಾತು ಉಳಿಸಿಕೊಂಡು ಆರನೇ ಗ್ಯಾರಂಟಿ ಜಾರಿ ಮಾಡಿದ್ದೇವೆ:
ನಾವು ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ವಲ್ಪ ಯಾಮಾರಿದ್ದೆ. ಇನ್ನು ಮುಂದೆ ಯಾಮಾರುವುದಿಲ್ಲ. ಚನ್ನಪಟ್ಟಣದ ಜನರ ಮೇಲೆ ನನಗೆ ನಂಬಿಕೆ ಇದೆ. ಈ ತಾಲೂಕಿನ 14 ಸಾವಿರ ಜನ ನಿವೇಶನ, ಮನೆಗೆ ಅರ್ಜಿ ಹಾಕಿದ್ದಾರೆ. ಚನ್ನಪಟ್ಟಣದ ಸುತ್ತಮುತ್ತ 50 ಎಕರೆ ಜಾಗದಲ್ಲಿ ನಿವೇಶನ ಮಾಡಿ ಬಡವರಿಗೆ ಹಂಚಲಾಗುವುದು. ಜನ ತಮ್ಮ ಕಷ್ಟಗಳಿಗೆ ಪರಿಹಾರ ಕೇಳಿಕೊಂಡು ನಮಗೆ ಅರ್ಜಿ ಕೊಟ್ಟಿದ್ದು ನೀವು ಅದನ್ನು ಸ್ವೀಕರಿಸಿದ್ದೀರಿ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಅವರ ಕಷ್ಟಗಳನ್ನು ಬಗೆಹರಿಸುವತ್ತ ಗಮನ ಹರಿಸಿ. ನೀವು ಇನ್ನು ಮುಂದೆ ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡಲು ಮುಂದಾಗಬೇಕು.
ಬಾಂಗ್ಲಾದೇಶದ ಲೇಖಕರೊಬ್ಬರು ಒಂದು ಮಾತು ಹೇಳಿದ್ದಾರೆ. ನೀವು ಬಡವನಿಗೆ ಊಟಕ್ಕೆ ಮೀನು ಕೊಟ್ಟರೆ ಅದು ಆ ಹೊತ್ತಿಗೆ ಮಾತ್ರ ಸೀಮಿತ, ಆದರೆ ಮೀನುಗಾರಿಕೆಯನ್ನು ಆತನಿಗೆ ಕಲಿಸಿದರೆ ಅವನ ಜೀವನಕ್ಕೆ ಆಸರೆಯಾಗಲಿದೆ. ಎಂದು ಹೇಳಿದ್ದಾನೆ. ನಿಮ್ಮ ಆಲೋಚನೆಗಳು ಕೂಡ ದೊಡ್ಡದಾಗಿರಬೇಕು. ನೀವು ಕನಸು ಕಾಣಬೇಕು. ಕನಸು ಈಡೇರಿಸಲು ಬದ್ಧತೆ, ಶಿಸ್ತು ಹೊಂದಿರಬೇಕು.”
ಮಾಧ್ಯಮ ಪ್ರತಿಕ್ರಿಯೆ:
ಕಾರ್ಯಕ್ರಮಕ್ಕೂ ಮುನ್ನ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಒಪಿಎಸ್ ವಿಚಾರವಾಗಿ ಸರ್ಕಾರದ ತೀರ್ಮಾನ ಏನು ಎಂದು ಕೇಳಿದಾಗ, “ಈ ವಿಚಾರವಾಗಿ ನಾವು ಸಮಿತಿ ಮಾಡಿ ಯಾವ ರಾಜ್ಯಗಳಲ್ಲಿ ಇದನ್ನು ಜಾರಿ ಮಾಡಿದ್ದಾರೆ ಅಲ್ಲಿಗೆ ತಂಡ ಕಳುಹಿಸಿ ಅಧ್ಯಯನ ವರದಿ ಪಡೆಯಲಾಗುವುದು” ಎಂದರು.
ಉಪಚುನಾವಣೆಯಲ್ಲಿ ಯೋಗೇಶ್ವರ್ ಅವರಿಗೆ ಟಿಕೆಟ್ ಸಿಗದಿದ್ದರೆ ಮೈತ್ರಿ ಮುರಿದು ಸ್ವತಂತ್ರ್ಯ ಸ್ಪರ್ಧೆ ಮಾಡಲಾಗುವುದು ಎಂಬ ಯೋಗೇಶ್ವರ್ ಅಭಿಮಾನಿಗಳ ಎಚ್ಚರಿಕೆ ಬಗ್ಗೆ ಕೇಳಿದಾಗ, “ಅವರ ಪಕ್ಷದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಯಾವತ್ತಾದರೂ ಒಂದು ದಿನ ಅವರ ಮಧ್ಯೇ ಇದು ಇತ್ಯರ್ಥವಾಗಬೇಕು. ಅವರೇ ಮಾಡಿಕೊಳ್ಳಲಿ. ಅವರು ಏನಾದರೂ ಮಾಡಲಿ. ಈ ಭಾಗದ ಜನರ ಬದುಕಲ್ಲಿ ಬದಲಾವಣೆ ತರಬೇಕು. ನಮಗೆ ಅಧಿಕಾರ ಇದ್ದ ಕಾರಣ 7ನೇ ವೇತನ ಆಯೋಗ ಜಾರಿ ಮಾಡಿದ್ದೇವೆ. ಬಡವರಿಗೆ ನಿವೇಶನ ಹಂಚಲು 50 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವಣ ತಿಕ್ಕಾಟದ ಬಗ್ಗೆ ಕೇಳಿದಾಗ, “ಅವರು ಈ ಹಿಂದೆಯೂ ಕಿತ್ತಾಡಿದ್ದರು. ಈಗ ಒಂದಾಗಿಲ್ಲವೇ? ಅವರು ಮತ್ತೆ ಒಂದಾಗುವುದಿಲ್ಲ ಎಂದು ಹೇಗೆ ಹೇಳಲು ಸಾಧ್ಯ. ಹೀಗಾಗಿ ನಾವು ಅವರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ