Kannada NewsKarnataka News

ಅಚ್ಚಳಿಯದೆ ಉಳಿಯುವ ವಿದ್ಯೆಯನ್ನು ನೀಡಿ

ಅಚ್ಚಳಿಯದೆ ಉಳಿಯುವ ವಿದ್ಯೆಯನ್ನು ನೀಡಿ

ಪ್ರಗತಿವಾಹಿನಿ ಸುದ್ದಿ,  ಮೂಡಲಗಿ: ಶಿಕ್ಷಕರಾದವರು ತಮ್ಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಶಾಶ್ವತವಾಗಿ ಅಚ್ಚಳಿಯದೆ ಉಳಿಯುವ ವಿದ್ಯೆಯನ್ನು ನೀಡಿ. ಗುರುವಿಗಿಂತ ಶಿಷ್ಯನು ಸಾಮಾಜಿಕವಾಗಿ ಬೆಳೆದರೆ ಸಾಕು, ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸಿದಂತಾಗುವುದು ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು.
  ಅವರು ಬುಧವಾರ ಮೇಘಾ ವಸತಿ ಶಾಲೆಯಲ್ಲಿ ಜರುಗಿದ ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್, ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿ ಫಲಿತಾಂಶದ ದೃಷ್ಟಿಯಲ್ಲಿ ಮಿಂಚಲು ಮೂಡಲಗಿ ವಲಯದ ಪಾತ್ರ ಹಿರಿದಾಗಿದೆ. ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷಾ ಅಂಕಗಳ ಮಾನ ದಂಡಕ್ಕೆ ತಯಾರಿಸದೆ ಯಶಸ್ವಿಯುತ ಸಾಮರ್ಥ್ಯಗಳನ್ನು ಕಲಿಸಬೇಕು. ಆಧುನಿಕ ತಂತ್ರಜ್ಞಾನದ ಸದುಪಯೋಗ ಮಾಡಿಕೊಂಡು ಅವರಲ್ಲಿರುವ ಸುಪ್ತ ಪ್ರತಿಭೆ ಅನಾವರಣ ಮಾಡಬೇಕು. ಗುಂಪು ಚರ್ಚೆ, ಆಶು ಭಾಷಣ, ರಸಪ್ರಶ್ನೆ, ವಿಚಾರ ಸಂಕೀರ್ಣಗಳನ್ನು ಏರ್ಪಡಿಸುವ ಮೂಲಕ ಅವರಲ್ಲಿರುವ ಸಾಮರ್ಥ್ಯಗಳಿಗೆ ಉತ್ಸಾಹ ತುಂಬ ಬೇಕು. ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷೆಗಳಿಗೆ ಹೆಚ್ಚು ಮಕ್ಕಳನ್ನು ದಾಖಲಿಸಿ ವಿದ್ಯಾರ್ಥಿ ದೆಸೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕೆಂದು ಹೇಳಿದರು.
 ಕಾಗವಾಡ ಬಿಇಒ ಎ.ಎಸ್ ಜೋಡಗೇರಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮೂಡಲಗಿ ವಲಯ ಗುರ್ತಿಸುವಂತಾಗಲು ಇಲ್ಲಿಯ ಶಿಕ್ಷಕ ಸಮೂಹದ ಪಾತ್ರ ಮೆಚ್ಚುವಂತಹುದು. ಸತತ ಪ್ರಯತ್ನ ಹಾಗೂ ನಿರಂತರ ಅಧ್ಯಯನದಿಂದ ಮಾತ್ರ ಇದು ಸಾಧ್ಯವಾಗುವದು. ರಾಜ್ಯದ ಬೇರೆ ಬೇರೆ ವಲಯಗಳ ಸಂಪನ್ಮೂಲ ತಂಡಗಳು ಇಲ್ಲಿಗೆ ಆಗಮಿಸಿ ಗುಣಾತ್ಮಕ ಕಲಿಕೆ ಕುರಿತು ಅಧ್ಯಯನ ಮಾಡಿರುವುದು ವಿಶೇಷವಾಗಿದೆ ಎಂದು ಹೇಳಿದರು.
 ಪ್ರಾಸ್ತಾವಿಕವಾಗಿ ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿ ವರ್ಷ ಎನ್.ಟಿ.ಎಸ್.ಇ, ಎನ್.ಎಮ್.ಎಮ್.ಎಸ್ ಪರೀಕ್ಷೆಗಳಿಗೆ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಹಾಜರಾಗುತ್ತಾರೆ. ಪ್ರಸಕ್ತ ವರ್ಷ ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಆಡಳಿತಾತ್ಮಕವಾಗಿ ಸುಧಾರಣೆಯ ನಿಟ್ಟಿನಲ್ಲಿ ತಂಡ ಭೇಟಿ ಕಾರ್ಯಕ್ರಮದ ಕುರಿತು ವಿವರಿಸಿದರು.
 ನೂತನ ಡಿಡಿಪಿಐ ಮೋಹನಕುಮಾರ ಹಂಚಾಟೆಯವರನ್ನು ಅನುದಾರ ರಹಿತ ಶಾಲಾ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು. ಮೇಘಾ ಪ್ರೌಢ ಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ ಸಿಬ್ಬಂದಿ ಸಭೆ ನಡೆಸಿ ಕಡತ ವಿಲೆ ಪ್ರಗತಿಯ ಕುರಿತು ಪರಿಶೀಲಿಸಿದರು.
 ಸಭೆಯಲ್ಲಿ ಖಾಸಗಿ ಅನುದಾರಹಿತ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಉಪಾಧ್ಯಕ್ಷ ಎಲ್ ವಾಯ್ ಅಡಿಹುಡಿ, ಕಾರ್ಯದರ್ಶಿ ಮಲ್ಲಪ್ಪ ಹಂಚಿನಾಳ, ಖಜಾಂಚಿ ಈರಣ್ಣಾ ಢವಳೇಶ್ವರ,  ಶಿಕ್ಷಣ ಸಂಯೋಜಕ ಟಿ ಕರಿಬಸವರಾಜ, ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಪ್ರೌಢ ಶಾಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಎಲ್.ಐ ಕೊಳವಿ, ಪತ್ತಿನ ಸಂಘದ ಅಧ್ಯಕ್ಷ ಸುಭಾಸ ಭಾಗೋಜಿ, ಶಿವಾನಂದ ಸೋಮವ್ವಗೋಳ, ಆರ್.ಎಮ್ ಮಹಾಲಿಂಗಪೂರ, ಕೆ.ಎಲ್.ಮೀಶಿ, ವಾ.ಬಿ ಪಾಟೀಲ, ವಾಯ್ ಆರ್ ಮುಕ್ಕನ್ನವರ ಹಾಗೂ ವಲಯ ವ್ಯಾಪ್ತಿಯ ಎಲ್ಲ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button