ಸಿದ್ದರಾಮಯ್ಯ ಮೊರೆ ಹೋದ ಗೋಕಾಕದ ಅಶೋಕ ಪೂಜಾರಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ – ಮಿಲ್ ವಶದಲ್ಲಿರುವ ಸರಕಾರಿ ಭೂಮಿಯನ್ನು ವಶಕ್ಕೆ ಪಡೆದು ಗೋಕಾಕದಲ್ಲಿನ ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸಲು ಬಳಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುತ್ತಿರುವ ಬಿಜೆಪಿ ನಾಯಕ ಅಶೋಕ ಪೂಜಾರಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು.
ಗೋಕಾಕ ಕ್ಷೇತ್ರದಲ್ಲಿ ಶೀಘ್ರವೇ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ -ಸಿದ್ದರಾಮಯ್ಯ ಭೇಟಿ ಕುತೂಹಲ ಮೂಡಿಸಿದೆ. ಬೆಂಗಳೂರಿನ ಅವರ ನಿವಾಸದಲ್ಲಿ ಬಿ.ಜೆ.ಪಿ.ಮುಖಂಡ ಅಶೋಕ ಪೂಜಾರಿ ನೇತೃತ್ವ ಗೋಕಾಕ ನಾಗರಿಕರ ನಿಯೋಗ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ಗೋಕಾಕ ನಗರದ ನೆರೆ ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಲು ನಿವೇಶನ ರಹಿತ ಬಡ ಕುಟುಂಬಗಳಿಗೆ ಸರ್ಕಾರದ ಒಡೆತನದ ಖಾಲಿ ಜಾಗ ರಿ.ಸ.ನಂ 244/A ಕ್ಷೇತ್ರ 312 ಎಕರೆ ವಿಶಾಲವಾದ ಪ್ರದೇಶದಲ್ಲಿ ಗೋಕಾಕ ಮಿಲ್ ಕಂಪೆನಿಗೆ ನೀಡಿರುವ ಲೀಜ್ ಆದೇಶವನ್ನು ಹಿಂಪಡೆದು ಸದರಿ ಜಾಗದಲ್ಲಿ ವಸತಿಗೆ ಯೋಗ್ಯವಾದ ನಿವೇಶನ ರಚಿಸಿ ನೀಡುವ ಪ್ರಸ್ತಾವನೆಯನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅಶೋಕ ಪೂಜಾರಿ ನೇತೃತ್ವದ ನಿಯೋಗ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿತು.
ತಕ್ಷಣ ಸ್ಪಂದಿಸಿದ ಸಿದ್ದರಾಮಯ್ಯ ನಿಯೋಗದ ಸದಸ್ಯರ ಸಮ್ಮುಖದಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಯವರಿಗೆ ಪೋನ್ ಮಾಡಿ ಸೂಚನೆ ನೀಡಿದರು. ಈ ಕುರಿತು ತಾವು ಸರ್ಕಾರಕ್ಕೆ ಪತ್ರವನ್ನು ಸಹ ಬರೆಯುವುದಾಗಿ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ