ಬಳ್ಳಾರಿ ವಿಭಜನೆಗೆ ಯಡಿಯೂರಪ್ಪ ಒಲವು; ಮತ್ತೆ ಎಲ್ಲೆಡೆ ಹೋರಾಟ ಸಾಧ್ಯತೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಜಿಲ್ಲೆಗಳ ವಿಭಜನೆ ವಿವಾದ ಇಂದು, ನಿನ್ನೆಯದಲ್ಲ. ಹಲವು ದಶಕಗಳ ಇತಿಹಾಸ ಹೊಂದಿದೆ. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದಾಗ ಹಲವು ಜಿಲ್ಲೆಗಳನ್ನು ವಿಭಜಿಸಿ, ದೊಡ್ಡ ಸುದ್ದಿ ಮಾಡಿದ್ದರು. ಆ ನಂತರದಲ್ಲಿ ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಇನ್ನೂ ಕೆಲವೆಡೆ ಜಿಲ್ಲೆಗಳ ವಿಭಜನೆ ಹೋರಾಟ ನಡೆದಿದೆ. ಆದರೆ ಮತ್ತೆ ವಿಭಜಿಸುವ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ.
ಇದೀಗ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ವಿಷಯವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವಂತೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಯಡಿಯೂರಪ್ಪ ಸೂಚಿಸಿದ್ದು, ಅವರು ಬರೆದಿರುವ ಪತ್ರ ಪ್ರಗತಿವಾಹಿನಿಗೆ ಲಭ್ಯವಾಗಿದೆ.
ಬಳ್ಳಾರಿ ತುಂಬಾ ವಿಸ್ತಾರವಾದ ಜಿಲ್ಲೆಯಾಗಿದ್ದು, 11 ತಾಲೂಕುಗಳನ್ನು, 3 ಕಂದಾಯ ಉಪವಿಭಾಗಗಳನ್ನು ಹೊಂದಿದೆ. ಜಿಲ್ಲೆಯ ಕೆಲವು ಪ್ರದೇಶಗಳು ಜಿಲ್ಲಾ ಕೇಂದ್ರ ಸ್ಥಾನದಿಂದ 200 ಕಿಮೀ ಅಂತರದಲ್ಲಿದೆ. ಇದರಿಂದಾಗಿ ಜಿಲ್ಲೆಯ ರೈತರಿಗೆ, ಬಡವರಿಗೆ, ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ಸ್ಥಾನ ತಲುಪುವುದು ದುಸ್ಥರವಾಗಿದೆ.
ಸಾರ್ವಜನಿಕ ಮತ್ತು ಆಡಳಿತ ಹಿತದೃಷ್ಟಿಯಿಂದ ಮೂಲ ಬಳ್ಳಾರಿ ಜಿಲ್ಲೆಯಲ್ಲಿ 5 ತಾಲೂಕುಗಳನ್ನು (ಬಳ್ಳಾರಿ, ಕುರುಗೋಡು, ಸಂಡೂರು, ಸಿರಗುಪ್ಪ, ಕೂಡ್ಲಗಿ) ಉಳಿಸಿಕೊಂಡು, ಉಳಿದ 6 ತಾಲೂಕುಗಳನ್ನು (ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಳ್ಳಿ, ಕೊಟ್ಟೂರು, ಹಡಗಲಿ, ಹರಮನಳ್ಳಿ) ಸೇರಿಸಿ ಹೊಸಪೇಟೆ ಕೇಂದ್ರವಾಗಿಸಿಕೊಂಡು ವಿಜಡಯನಗರ ನೂತನ ಜಿಲ್ಲೆಯನ್ನು ರಚಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ವಿಷಯವನ್ನು ಮುಂದಿನ ಸಚಿವಸಂಪುಟ ಸಭೆಯಲ್ಲಿ ಮಂಡಿಸುವಂತೆ ಅವರು ಸೂಚಿಸಿದ್ದಾರೆ.
ಮೈಮೇಲೆಳೆದುಕೊಂಡರಾ ವಿವಾದ?
ಜಿಲ್ಲಾ ವಿಭಜನೆ ಪ್ರಸ್ತಾವ ಕೈಗೆತ್ತಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ವಿವಾದವನ್ನು ಮೈಮೇಲೆೆಳೆದುಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಬೇಕೆಂದು ಹಲವು ಬಾರಿ ಉಗ್ರ ಹೋರಾಟಗಳೇ ನಡೆದಿವೆ. ಜಿಲ್ಲೆಯಲ್ಲಿ 14 ತಾಲೂಕುಗಳಿವೆ.
ಬೆಳಗಾವಿ ಜಿಲ್ಲೆಯಲ್ಲೂ ಅನೇಕ ಊರುಗಳಿಗೆ ಕೇಂದ್ರಸ್ಥಾನ ತಲುಪಲು 200 ಕಿಮೀ ಅಂತರವಿದೆ. ಆದರೆ ಗಡಿ ವಿವಾದ ಮತ್ತು ಭಾಷಾ ವಿವಾದದ ಕಾರಣಗಳಿಗಾಗಿ ಮಾತ್ರ ಜಿಲ್ಲೆಯನ್ನು ವಿಭಜಿಸಬಾರದೆಂದು ಮುಂದೂಡುತ್ತ ಬರಲಾಗಿದೆ. ಆದರೆ ಚಿಕ್ಕೋಡಿ ಭಾಗದಲ್ಲಿ, ಗೋಕಾಕ ಭಾಗದಲ್ಲಿ ಈ ಸಂಬಂಧ ಹೋರಾಟ ನಿರಂತರವಾಗಿ ನಡೆದೇ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ 11 ತಾಲೂಕುಗಳಿದ್ದು ಅಲ್ಲಿ ಕೂಡ ಪರಿಸ್ಥಿತಿ ಇದಕ್ಕಿಂತ ವ್ಯತಿರಿಕ್ತವಾಗಿಲ್ಲ. ಅಲ್ಲೂ ಘಟ್ಟದ ಮೇಲಿನ ತಾಲೂಕುಗಳನ್ನೊಳಗೊಂಡ ಶಿರಸಿ ಜಿಲ್ಲೆ ಮಾಡಬೇಕೆನ್ನುವ ಹೋರಾಟ ನಡೆದಿದೆ.
ಈಗ ಬಳ್ಳಾರಿ ಜಿಲ್ಲೆ ವಿಭಜನೆ ವಿಷಯ ಬರುತ್ತಿದ್ದಂತೆ ಎಲ್ಲೆಡೆ ಜಿಲ್ಲೆಗಳ ವಿಭಜನೆಗೆ ಹೋರಾಟ ನಡೆಯುವ ಸಾಧ್ಯತೆಗಳಿವೆ. ಮುಖ್ಯಮಂತ್ರಿಗಳೇ ವಿಷಯ ಪ್ರಸ್ತಾಪಿಸಿ, ಹೊಸ ವಿವಾದಕ್ಕೆ ಕಾರಣರಾದರೇ ಎನ್ನುವ ಪ್ರಶ್ನೆ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ