ಪ್ರವಾಹ ಹಾನಿ ಸಮೀಕ್ಷೆ -ಪಿಡಿಓಗಳಿಗೆ ಜೀವಬೆದರಿಕೆ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಘಟಪ್ರಭಾ ನದಿಯ ಪ್ರವಾಹದಿಂದ ಹಾನಿಗೀಡಾದ ಮೂಡಲಗಿ ಮತ್ತು ಗೋಕಾಕ ತಾಲೂಕಿನ 16 ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ವಸತಿ ಮನೆಗಳ ಸಮೀಕ್ಷೆ ನಡೆಸಿದ್ದಾರೆ.
ಇವರ ಕರ್ತವ್ಯಕ್ಕೆ ಕೆಲವೊಂದು ಸಾರ್ವಜನಿಕರು ಸಮೀಕ್ಷೆಯಲ್ಲಿ ತಮ್ಮ ಮನೆಗಳಿಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ದಾಖಲು ಮಾಡಲು ಒತ್ತಾಯಿಸುತ್ತಿದ್ದು ತಮ್ಮ ಅಣತಿ ಪ್ರಕಾರ ನಡೆಯದ ಪಿಡಿಓಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ತಮ್ಮ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದ್ದು ತಮಗೆ ರಕ್ಷಣೆ ಒದಗಿಸಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಪಿಡಿಓಗಳು ಗುರುವಾರ ಮೂಡಲಗಿ ಮತ್ತು ಗೋಕಾಕ ತಹಶೀಲ್ದಾರರಿಗೆ ಮತ್ತು ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದಾರೆ.
ಮನವಿ ಪತ್ರದಲ್ಲಿ, ಮೂಡಲಗಿ ಮತ್ತು ಗೋಕಾಕ ತಹಶೀಲ್ದಾರರು ದಿನಾಂಕ 12-08-2019ರಂತೆ ರಚನೆಯಾದ ಜಂಟಿ ಸಮೀಕ್ಷೆಯ ಸದಸ್ಯರಾದ ನೋಡಲ್ ಅಧಿಕಾರಿಗಳು, ತಾಂತ್ರಿಕ ಅಭಿಯಂತರರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನೂಳಗೊಂಡ ತಂಡ ರಚಸಲಾಗಿದೆ. ಆದರೆ ಸಮೀಕ್ಷೆ ತಂಡದ ಮುಖ್ಯಸ್ಥರಾದ ಕೆಲವು ನೋಡಲ್ ಅಧಿಕಾರಿಗಳು ಸಮೀಕ್ಷೆ ಪ್ರಾರಂಭದಿಂದ ಮುಕ್ತಾಯದವರೆಗೆ ಒಮ್ಮೆಯೂ ಭಾಗವಹಿಸಿಲ್ಲಾ.
ಸ್ಥಳೀಯವಾಗಿ ಉದ್ಬವಿಸಿದ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಎಲ್ಲ ಸಮಸ್ಯೆಗಳಿಗೆ ಪಿಡಿಓಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಅದೇ ರೀತಿ ಕೆಲವು ತಾಂತ್ರಿಕ ಅಭಿಯಂತರರು ಮನೆಗಳ ಸಮೀಕ್ಷೆ ನಂತರ ಮುಂದಿನ ಯಾವುದೇ ಕಾರ್ಯದಲ್ಲಿ ಪಾಲ್ಗೊಳ್ಳದೆ ಸಮಸ್ಯೆಗಳ ಬಗ್ಗೆ ಪಿಡಿಓಗಳ ಮೇಲೆ ತಪ್ಪು ಹೊರಿಸುತ್ತಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿಗಳು ನೆಪ ಮಾತ್ರಕ್ಕೆ ಭಾಗವಹಿಸಿ ರಿ.ಸಂ ನಂಬರ್ ದಲ್ಲಿರುವ ಮನೆಗಳ ಪ್ರಕರಣಗಳನ್ನು ಸರಿಯಾಗಿ ಪರಿಶೀಲಿಸದೆ ಪಿಡಿಓಗಳನ್ನು ಕೇಳುವಂತೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಕಾರಣಗಳಿಂದಾಗಿ ಸಾರ್ವಜನಿಕರು ಪಿಡಿಓಗಳ ಕರ್ತವ್ಯಕ್ಕೆ ತೊಂದರೆ ಕೊಡುತ್ತ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರರು ಸೂಕ್ತ ಕ್ರಮ ತೆಗೆದುಕೊಂಡು ಸಮೀಕ್ಷೆಯ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ರಕ್ಷಣೆ ಒದಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ತಹಶೀಲ್ದಾರರ ಬೇಜವ್ದಾರಿ :
ಈ ಮನವಿ ಕೊಡುವುದಕ್ಕಿಂತ ಮುಂಚೆ ಅನೇಕ ಸಾರಿ ಸಾರ್ವಜನಿಕರು ತೊಂದರೆ ಕೊಡುತ್ತಿರುವ ಬಗ್ಗೆ ಮೌಖಿಕವಾಗಿ ತಿಳಿಸಿದರೂ ತಹಸಿಲ್ದಾರರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಈಗ ಲಿಖಿತ ಮನವಿ ಕೊಟ್ಟಿದ್ದೇವೆ ಎಂದು ಕೆಲವು ಪಿಡಿಓಗಳು ತಮ್ಮ ಅಸಾಯಕತೆ ತೋಡಿಕೊಂಡಿದ್ದಾರೆ.
ಮೂಡಲಗಿ ಮತ್ತು ಗೋಕಾಕ ತಾಲೂಕಿನ ಸುಮಾರು 41 ಗ್ರಾಮಗಳಲ್ಲಿ ಭೀಕರ ಪ್ರವಾಹ ಸಂಭವಿಸಿದ್ದು, ಇದರಿಂದ ಅಪಾರ ಪ್ರಮಾಣದ ಜನ-ಜಾನುವಾರು ಆಸ್ತಿ ಹಾನಿಯಾಗಿವೆ.
ನಮ್ಮ ಆರ್.ಡಿ.ಪಿ.ಆರ್ ಇಲಾಖೆಯ ಎಲ್ಲ ಸಿಬ್ಬಂದಿಗಳು ತಮ್ಮ ಮನೆಗಳು ನೀರಲ್ಲಿ ನಿಂತರೂ ಸರಕಾರಿ ಅಧಿಕಾರಿಯಾಗಿ ತಮ್ಮ ಪ್ರಾಣದ ಹಂಗನ್ನು ತೊರೆದು ಜನರ ಸಂರಕ್ಷಣೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದಾರೆ. ಪ್ರವಾಹದ ನಂತರ ಪಿಡಿಓ ಗ್ರಾಮಲೆಕ್ಕಾಧಿಕಾರಿ ಹಾಗೂ ಇಂಜಿನಿಯರ್ಗಳ ಸಮೀಕ್ಷಾ ತಂಡ ರಚನೆ ಮಾಡಲಾಗಿದ್ದು, ಸಮೀಕ್ಷೆ ಪೂರ್ಣಗೊಂಡಿದೆ.
ಆದರೆ ಸಾರ್ವಜನಿಕರು ಕೆಲವು ಲೋಪದೋಷಗಳಿಗೆ ಸಂಪೂರ್ಣ ಪಿಡಿಓ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡುತ್ತಿರುವುದು ದುರದುಷ್ಠಕರ. ಸರಕಾರದ ಮಾರ್ಗಸೂಚಿ ಪ್ರಕಾರ ಥರ್ಡ್ ಪಾರ್ಟಿ ಪರಿಶೀಲನೆ ಮಾಡಿಸಿ ಸಮೀಕ್ಷೆಯಲ್ಲಿ ಏನಾದರು ಲೋಪದೋಷಗಳಿದ್ದಲ್ಲಿ ಸರಿಪಡಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು”
ಎಂದು ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಕ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ