ಎಂ.ಕೆ.ಹೆಗಡೆ, ಬೆಂಗಳೂರು – ರಾಜ್ಯದಲ್ಲಿ ಅನಿರೀಕ್ಷಿತವಾಗಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಇದು ಅನರ್ಹ ಶಾಸಕರಿಗಷ್ಟೇ ಅಲ್ಲ ಎಲ್ಲ ರಾಜಕೀಯ ಪಕ್ಷಗಳಿಗೂ ದೊಡ್ಡ ಶಾಕ್ ನೀಡಿದೆ. ಇಷ್ಟು ಬೇಗ ಚುನಾವಣೆ ಎದುರಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಯಾವ ಪಕ್ಷವೂ ಚುನಾವಣೆಗೆ ಅಣಿಯಾಗಿರಲಿಲ್ಲ.
ಯಾವಾಗ ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ ಜೊತೆಗೇ ಕರ್ನಾಟಕದ 15 ಕ್ಷೇತ್ರಗಳಿಗೂ ಉಪಚುನಾವಣೆ ಘೋಷಣೆಯಾಯಿತೋ ಎಲ್ಲ ಪಕ್ಷಗಳೂ ತಡಬಡಿಸಿ ಎದ್ದು ಕುಳಿತಿವೆ. ಅತಂತ್ರ ಸ್ಥಿತಿಯಲ್ಲಿದ್ದ ಕಾಂಗ್ರೆಸ್ -ಜೆಡಿಎಸ್ ಮೈತ್ರಿಗೆ ಯಳ್ಳು ನೀರು ಬಿಡಲಾಯಿತು. ಮೈತ್ರಿ ಕೊನೆಯಾಗಿದೆ ಎಂದು ಅಧಿಕೃತವಾಗಿ ಜೆಡಿಎಸ್ ಘೋಷಿಸಿತು. ಕಾಂಗ್ರೆಸ್ ನಾಯಕರೂ ಅಭ್ಯರ್ಥಿ ಆಯ್ಕೆಗಾಗಿ ಇರುವ ಅಲ್ಪ ಸಮಯದಲ್ಲಿ ಕಸರತ್ತು ಆರಂಭಿಸಿದ್ದಾರೆ.
ಅನರ್ಹರಿಗೆ ಶಾಕ್ ಮೇಲೆ ಶಾಕ್
ಇವೆಲ್ಲಕ್ಕಿಂತಲೂ ಉಪಚುನಾವಣೆ ಹಠಾತ್ ಘೋಷಣೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ಬರಲು ಕಾರಣರಾದ ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರಿಗೆ ಬರಸಿಡಿಲಿನಂತಾಗಿದೆ. ಅವರಿಗೆ ಶಾಕ್ ಮೇಲೆ ಶಾಕ್ ಉಂಟಾಗುತ್ತಿದೆ. ಮೊದಲು ಅವರು ಕೊಟ್ಟ ರಾಜಿನಾಮೆಯನ್ನು ಸ್ವೀಕರಿಸದೆ ಕಾಡಿಸಿದ ಸ್ಪೀಕರ್, ನಂತರ ಅವರನ್ನೆಲ್ಲ ಅನರ್ಹಗೊಳಿಸಿ ಮತ್ತೊಂದು ಆಘಾತ ನೀಡಿದ್ದರು. ಇದಕ್ಕಾಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರುವಂತಾಗಿತ್ತು.
ಇದರಿಂದಾಗಿ ದೊಡ್ಡ ಆಸೆಯಲ್ಲಿದ್ದ ಮಂತ್ರಿಸ್ಥಾನವೂ ಸಿಗಲಿಲ್ಲ. ಯಾವ ಅಧಿಕಾರ ಹಿಡಿಯಲೂ ಆಗದೆ ಚಡಪಡಿಸುವಂತಾಯಿತು. ಇತ್ತ ಬಿಜೆಪಿಯೂ ಸರಕಾರ ರಚಿಸಿಕೊಂಡು ಅದರಲ್ಲೇ ಬ್ಯುಸಿಯಾಯಿತು.
ಅಷ್ಟಾದರೂ, ಸುಪ್ರಿಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಬರಲಿದೆ. ನಂತರ ಮುಂದಿನ ಯೋಚನೆ ಮಾಡೋಣ ಎಂದು ಯೋಚಿಸುತ್ತಿದ್ದ ಅನರ್ಹ ಶಾಸಕರಿಗೆ ಈಗ ಮತ್ತೊಂದು ದೊಡ್ಡ ಶಾಕ್ ಉಂಟಾಗಿದೆ. ಸುಪ್ರಿಂ ಕೋರ್ಟ್ ಇನ್ನೂ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುವ ಮೊದಲೇ ಉಪಚುನಾವಣೆ ಘೋಷಣೆಯಾಗಿದೆ.
ಸರಕಾರ ಕೆಡವುವರಿಗೆ ಪಾಠ
ಏಕಾ ಏಕಿ ಉಪಚುನಾವಣೆ ಘೋಷಣೆಯಾಗಿರುವುದು ಪಕ್ಷಾಂತರ ಮಾಡಿ ಸರಕಾರ ಕೆಡಗುವವರಿಗೆ ಮತ್ತು ಆಪರೇಶನ್ ಮಾಡುವವರಿಗೆ ದೊಡ್ಡ ಪಾಠವಾಗಿದೆ. ರಾಜಿನಾಮೆ ನೀಡಿ, ಸರಕಾರ ಬದಲಿಲಿಸದೆ ಹೊಸ ಸರಕಾರದಲ್ಲಿ ಬೇಕಾದ ಸ್ಥಾನ ಪಡೆದು ಅಧಿಕಾರ ಅನುಭವಿಸಬಹುದು ಎಂದು ನಿರೀಕ್ಷಿಸಿದ್ದ ಶಾಸಕರು ಬಹುದೊಡ್ಡ ಪೆಟ್ಟು ತಿಂದಿದ್ದಾರೆ.
ಅತ್ತ ಇರುವ ಶಾಸಕ ಸ್ಥಾನವೂ ಇಲ್ಲ, ಹೊಸ ಅಧಿಕಾರವೂ ಕೈಗೆ ಸಿಗಲಿಲ್ಲ. ಈಗ ಚುನಾವಣೆಗೆ ಸ್ಪರ್ಧಿಸುವಂತೆಯೂ ಇಲ್ಲ. ಇಂತಹ ಅತಂತ್ರ ಸ್ಥಿತಿ ಇನ್ನಷ್ಟು ದಿನ ಎನ್ನುವ ಪ್ರಶ್ನೆಗೂ ಉತ್ತರವಿಲ್ಲ. ಒಟ್ಟಾರೆ ಅವರ ಸ್ಥಿತಿ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಮುಂದೇನು ಎನ್ನುವ ಕಾರ್ಮೋಡ ಕವಿದಿದೆ.
ಸುಪ್ರಿಂ ಮೇಲೆ ಆಶಾಕಿರಣ
ಇದೀಗ ಅನರ್ಹ ಶಾಸಕರಿಗೆ ಇರುವ ಏಕೈಕ ಆಶಾಕಿರಣ ಸುಪ್ರಿಂ ಕೋರ್ಟ್. ಶಾಸಕರ ಅನರ್ಹತೆ ಪ್ರಕರಣ ಸುಪ್ರಪಿಂ ಕೋರ್ಟ್ ನಲ್ಲಿರುವುದುರಿಂದ ಅದು ವಿಚಾರಣೆ ಪೂರ್ಣವಾಗುವವರೆಗೆ ಚುನಾವಣೆ ಘೋಷಣೆ ಮಾಡಬಾರದು. ಈಗ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂದು ಸೋಮವಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಸುಪ್ರಿಂ ಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿದಲ್ಲಿ ಅನರ್ಹರಿಗೆ ಬಿಗ್ ರೀಲೀಫ್ ಸಿಕ್ಕಿದಂತಾಗಲಿದೆ. ಇಲ್ಲವಾದಲ್ಲಿ ಅನಿವಾರ್ಯವಾಗಿ ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ತಮ್ಮ ಕುಟುಂಬದ ಇನ್ಯಾರನ್ನೋ ಚುನಾವಣೆಗೆ ಸಿದ್ದಪಡಿಸಬೇಕಿದೆ. ಆದರೆ ಆಗ ಇವರ ಸ್ಥಿತಿ ಅತಂತ್ರವಾಗುವ ಜೊತೆಗೆ ಕ್ಷೇತ್ರದ ಮೇಲಿನ ಹಿಡಿತವೂ ಕಡಿಮೆಯಾಗಲಿದೆ.
ಎಲ್ಲರಿಗೂ ಪ್ರತಿಷ್ಠೆ -ಸವಾಲು
ಈ ಚುನಾವಣೆ ಎಲ್ಲ ರಾಜಕೀಯ ಪಕ್ಷಗಳಿಗೂ ದೊಡ್ಡ ಪ್ರತಿಷ್ಠೆಯಾಗಿದೆ. ಬಿಜೆಪಿಗೆ ಆಪರೇಶನ್ ಮಾಡಿ ಅಸ್ಥಿತ್ವಕ್ಕೆ ತಂದ ಸರಕಾರವನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಅದಕ್ಕಾಗಿ ಅನರ್ಹ ಶಾಸಕರನ್ನೇ ನಿಲ್ಲಿಸಿ ಗೆಲ್ಲಿಸಿ ತರಬೇಕಾಗಿದೆ. ಅವರಿಗೆ ನಿಲ್ಲಲು ಅವಕಾಶವಿಲ್ಲದ್ದರಿಂದ ಅವರು ಹೇಳುವ ಇನ್ಯಾರಿಗೋ ಪಕ್ಷದ ಟಿಕೆಟೆ ನೀಡಬೇಕಾಗಿದೆ.
ಆಗ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರು ಮುನಿಸಿಕೊಳ್ಳುವ ಆತಂಕವಿದೆ. ಮೂಲಕಾರ್ಯಕರ್ತರು ಮತ್ತು ಕಾಂಗ್ರೆಸ್-ಜೆಡಿಎಸ್ ನಿಂದ ವಲಸೆ ಬಂದ ಶಾಸಕರಿಗೂ ಹೊಂದಾಣಿಕೆ ಸವಾಲಾಗಲಿದೆ.
ಸರಕಾರ ಕಳೆದುಕೊಡು ಮೈ ಸುಟ್ಟುಕೊಂಡಿರುವ ಹುಲಿಯಂತಾಗಿರುವ ಕಾಂಗ್ರೆಸ್, ಜೆಡಿಎಸ್ ಕೂಡ ಈ ಚುನಾವಣೆಯನ್ನು ದೊಡ್ಡ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿವೆ. ತಮ್ಮದೇ ಪಕ್ಷದ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಅವೆರಡೂ ಪ್ರತ್ಯೇಕವಾಗಿಯೇ ಹೇರಾಟಕ್ಕೆ ಸಿದ್ದವಾಗಬೇಕಿದೆ. ಕಾಂಗ್ರೆಸ್ ನ 12 ಹಾಗೂ ಜೆಡಿಎಸ್ ನ 3 ಶಾಸಕರ ಕ್ಷೇತ್ರಗಳು ಇವಾಗಿದ್ದು, ಈಗ ಗೆಲ್ಲದಿದ್ದರೆ ಈ ಕ್ಷೇತ್ರಗಳೆಲ್ಲ ಕಾಯಂ ಆಗಿ ಬಿಜೆಪಿ ಪಾಲಾಗುವ ಆತಂಕವಿದೆ.
ಹಾಗಾಗಿ ಎಲ್ಲ ಪಕ್ಷಗಳೂ ಈ ಚುನಾವಣೆಯನ್ನು ಪ್ರತಿಷ್ಠೆ ಮತ್ತು ಸವಾಲಾಗಿ ಪರಿಗಣಿಸಿವೆ. ಈ ಉಪಚುನಾವಣೆ ರಾಜ್ಯದಲ್ಲಿ ಎಲ್ಲ ದೃಷ್ಟಿಯಿಂದಲೂ ಐತಿಹಾಸಿಕವಾಗುವ ಲಕ್ಷಣಗಳಿವೆ. ಹಾಗೆಯೇ ಹಣದ ಹೊಳೆ ಮತ್ತು ಹಿಂಸಾಚಾರದ ಆತಂಕವೂ ಎದುರಾಗಿದೆ.
ಒಟ್ಟಾರೆ ಈ ವಿದ್ಯಮಾನಗಳು ಆಪರೇಶನ್ ಮಾಡುವವರಿಗೆ ಮತ್ತು ಆಪರೇಶನ್ ಗೆ ಒಳಗಾಗುವವರಿಗೆ, ಮನಸೋ ಇಚ್ಛೆ ಸರಕಾರ ಕೆಡವುವವರಿಗೆ, ಅದಕ್ಕೆ ಪ್ರಚೋದನೆ ನೀಡುವವರಿಗೆ ದೊಡ್ಡ ಪಾಠವಾಗಿದ್ದಂತೂ ಸುಳ್ಳಲ್ಲ.
ರಾಜ್ಯ ರಾಜಕೀಯದಲ್ಲಿ ತಲ್ಲಣ, ಎಲ್ಲ ಪಕ್ಷಗಳೂ ಕಂಗಾಲು
ಅನರ್ಹರಿಗೆ ಶಾಕ್ -ಹಠಾತ್ ಉಪಚುನಾವಣೆ ಘೋಷಣೆ
25ರ ವರೆಗೂ ಡಿ.ಕೆ.ಶಿವಕುಮಾರ ಬಿಡುಗಡೆ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ