ಪ್ರಗತಿವಾಹಿನಿ ಸುದ್ದಿ: ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರ ವಿಶೇಷ ಕಾಳಜಿ ಹಾಗೂ ಸೂಚನೆ ಮೇರೆಗೆ ರೈತರ ಅನುಕೂಲಕ್ಕಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಮಣ್ಣಿನ ಆರೋಗ್ಯ ರಕ್ಷಣೆಯ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ನೆರವಾಗಲು ಕೃಷಿ ಇಲಾಖೆ ವಿನೂತನ ಭೂಸಾರ ಆ್ಯಪ್ ಬಿಡುಗಡೆ ಮಾಡಿದೆ.
ಕೃಷಿ ಆಯುಕ್ತಾಲಯದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಹೊಸ ಕೃಷಿ ತಂತ್ರಜ್ಞಾನಗಳ ಕುರಿತ ಕಾರ್ಯಾಗಾರದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಈ ಆ್ಯಪ್ ಬಿಡುಗಡೆ ಮಾಡಿ ಇದನ್ನು ಗರಿಷ್ಠ ಪ್ರಮಾಣದಲ್ಲಿ ಕೃಷಿಕರಿಗೆ ತಲುಪಿಸುವಂತೆ ಕರೆ ನೀಡಿದರು.
ಅವೈಜ್ಞಾನಿಕ ಕೃಷಿ ಅತಿಯಾದ ರಸಾಯನಿಕ ಬಳಕೆ, ಮಣ್ಣಿನ ಸವಕಳಿಯಿಂದ ಫಲವತ್ತತೆ ಕಡಿಮೆಯಾಗುತ್ತಿದೆ. ಜೊತೆಗೆ ರೈತರಿಗೆ ತಮ್ಮ ಮಣ್ಣಿನ ಆರೋಗ್ಯದ ಬಗ್ಗೆ ಅರಿವಿನ ಕೊರತೆಯಿಂದ, ಅವೈಜ್ಞಾನಿಕವಾಗಿ ಗೊಬ್ಬರ ಮತ್ತು ಕೀಟನಾಶಕ ಬಳಸಿ ಮಣ್ಣಿನ ಸತ್ವ ಹಾಳು ಮಾಡುವುದರ ಜೊತೆಗೆ ನಷ್ಟವನ್ನು ಅನುಭವಿಸುತಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಭೂಸಾರ ಆ್ಯಪ್ ಪ್ರಯೋಜಕರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ವರ್ಷ ಕನಿಷ್ಠ ಐದು ಲಕ್ಷ ರೈತರ ಜಮೀನಿನ ಮಣ್ಣು ಮಾದರಿಗಳನ್ನು ಪರೀಕ್ಷೆ ಮಾಡುವ ಗುರಿ ಹೊಂದಲಾಗಿದೆ ಜೊತೆಗೆ ಎಲ್ಲಾ ರೈತರಿಗೂ ಈ ತಂತ್ರಜ್ಞಾನದ ಅರಿವು ಮೂಡಿಸಬೇಕಿದೆ ಎಂದು ಸಚಿವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಕೃಷಿ ಪ್ರಧಾನವಾಗಿದ್ದು ರೈತ ಸಬಲಿಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ, ಯಾಂತ್ರಿಕವಾಗಿ, ತಾಂತ್ರಿಕವಾಗಿ ಕೃಷಿಕರನ್ನು ಸದೃಡವನ್ನಾಗಿಸುವುದು ನಮ್ಮ ಗುರಿ ಎಂದು ಸಚಿವರು ಹೇಳಿದರು.
ಕೃಷಿ ತಜ್ಞರು ಪರಿಶೋಧಕರು, ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಗಳು ರೈತರ ಮನೆಬಾಗಿಲನ್ನು ಸುಲಭವಾಗಿ ತಲುಪಬೇಕು ಹಾಗೂ ಅವರಿಗೆ ತರಬೇತಿ ನೀಡಬೇಕು. ಕಾರ್ಯಗಾರಗಳ ಮೂಲಕ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಈ ಜ್ಞಾನವನ್ನು ಕೃಷಿಕರಿಗೆ ವರ್ಗಾಯಿಸಬೇಕಿದೆ ಎಂದು ಕೃಷಿ ಸಚಿವರು ಹೇಳಿದರು.
ಕಳೆದ ಸಾಲಿನಲ್ಲಿ ಕೃಷಿ ಇಲಾಖೆ ಶೇಕಡಾ 100 ರಷ್ಟು ಗುರಿ ಸಾಧನೆ ಜೊತೆಗೆ ನಿಗಧಿಗಿಂತ ಹೆಚ್ಚಳ ಕೇಂದ್ರದ ಅನುದಾನ ಪಡೆದು ಕೃಷಿಕರಿಗೆ ತಲುಪಿಸಲಾಗಿದೆ. ಇದೇ ರೀತಿ ಈ ವರ್ಷವೂ ಹೆಚ್ಚಿನ ಕಾಳಜಿ ಹಾಗೂ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
ಇಲಾಖೆಯಲ್ಲಿ ನೆನಗುಧಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸುಮಾರು 950 ಹುದ್ದೆಗಳ ನೇರ ನೇಮಕಾತಿಗೂ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಕೃಷಿಗೆ ಇನ್ನಷ್ಟು ಹೆಚ್ಚಿನ ಆಧ್ಯತೆ ನೀಡಲಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸಹ ಬೆಳೆ ವಿಮೆ ಎನ್.ಡಿ.ಆರ್.ಎಫ್ ಪರಿಹಾರ ಹಾಗೂ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರೈತರ ಸಂಕಷ್ಟವನ್ನು ಕಡಿಮೆ ಮಾಡಿದೆ ಎಂದರು.
ಕರ್ತವ್ಯ ಲೋಪ, ನಿರ್ಲಕ್ಷ್ಯ ಸಲ್ಲ ಎಚ್ಚರಿಕೆ: ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದೆಂದು ಇದೇ ವೇಳೆ ಕೃಷಿ ಸಚಿವರು ಎಚ್ಚರಿಕೆ ನೀಡಿದರು.
ಕೃಷಿ ಆಯುಕ್ತ ವೈ.ಎಸ್.ಪಾಟೀಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕೃಷಿ ಇಲಾಖೆಯ ಸಾಧನೆಗೆ ಸಚಿವರಾದ ಚಲುವರಾಯಸ್ವಾಮಿರವರ ಪ್ರೋತ್ಸಾಹ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳೇ ಪ್ರಮುಖ ಕಾರಣವಾಗಿದೆ. ಅಭಿವೃಧ್ಧಿಗೆ ನೀಡಿದ ಮುಕ್ತ ಸ್ವಾತಂತ್ರ್ಯ ಅಧಿಕಾರಿಗಳ ಸಾಂಘಿಕ ಪ್ರಯತ್ನಕ್ಕೆ ಪ್ರಮುಖ ಪ್ರೇರಣೆಯಾಗಿದೆ ಎಂದರು.
ಕೃಷಿ ಇಲಾಖೆಯಲ್ಲಿ ಜಾರಿಗೊಳಿಸಿರುವ ಹೊಸ ಯೋಜನೆಗಳು ಮುಂದಿನ ಕಾರ್ಯಸೂಚಿಗಳ ಬಗ್ಗೆ ಅವರು ವಿವರಿಸಿದರು. ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಪದ್ಮಯ್ಯನಾಯಕ್ ಹಾಗೂ ಇಲಾಖೆಯ ಜಂಟಿ ನಿರ್ದೆಶಕರು, ಉಪ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಭೂಸಾರ ಆ್ಯಪ್ ವಿಶೇಷತೆ:-
ರಾಜ್ಯಾದಾದ್ಯಂತ ಭೂಸಾರ ಮೊಬೈಲ್ ಆ್ಯಪ್ನ ಮೂಲಕ ಮಣ್ಣು ಮಾದರಿಗಳನ್ನು ಗ್ರಾಮಗಳ ಕೆಡಸ್ಟ್ರಲ್ ನಕ್ಷೆಗಳನ್ನು ಬಳಸಿಕೊಂಡು ಮಣ್ಣು ಮಾದರಿ ಸಂಗ್ರಹಿಸುವ ಜಮೀನಿನ ಭೌಗೋಳಿಕ ವಿವರಗಳನ್ನು ಹಾಗೂ ಸಂಬಂಧಿಸಿದ ರೈತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಿಂದ ಸೆಳೆದು ಬೆಳೆ ವಿವರ, ನೀರಾವರಿ ವಿವರ ಹಾಗೂ ಮಣ್ಣಿನ ವಿವಿಧ ವಿವರಗಳೊಂದಿಗೆ ಫೋಟೋ ಹಾಗೂ ವಿಡಿಯೋದ ಮಾಹಿತಿಯನ್ನು ದಾಖಲಿಸಬಹುದು. ಈ ತಂತ್ರಾಂಶದ ಮೂಲಕ ಸಂಗ್ರಹಿಸಿದ ಮಣ್ಣು ಮಾದರಿಗಳಿಗೆ ಪ್ರತ್ಯೇಕ ಐಡಿ ರಚನೆಯಾಗುತ್ತದೆ. ಸದರಿ ಪ್ರತ್ಯೇಕ ಐಡಿಗಳ ಪ್ರತಿಯಾಗಿ ಮಣ್ಣು ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಿದ ಮಣ್ಣು ಪರೀಕ್ಷಾ ಫಲಿತಾಂಶವನ್ನು ರೈತರ ಮಾಹಿತಿಯೊಂದಿಗೆ ಸಂಯೋಜಿಸಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ತಯಾರಿಸಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ