*ತುಂಗಭದ್ರಾ ಡ್ಯಾಂ ಗೇಟ್ ಮುರಿದುಬಿದ್ದ ಪ್ರಕರಣ: ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತಾ? ಡಿಸಿಎಂ ಹೇಳಿದ್ದೇನು?*
ಪ್ರಗತಿವಾಹಿನಿ ಸುದ್ದಿ: “ತುಂಗಭದ್ರಾ ಅಣೆಕಟ್ಟಿನ ಗೇಟ್ ದುರಸ್ತಿ ಕಾರ್ಯ ಆರಂಭವಾಗಿದೆ. ನೀರಿನ ಪ್ರಮಾಣ ಕಡಿಮೆ ಮಾಡದ ಹೊರತಾಗಿ ದುರಸ್ತಿ ಕಾರ್ಯ ಸಾಧ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.
ತುಂಗಭದ್ರಾ ಅಣೆಕಟ್ಟಿನ ಪರಿಸ್ಥಿತಿ ಬಗ್ಗೆ ಕೇಳಿದಾಗ, “ನಾನು ಅಣೆಕಟ್ಟಿಗೆ ಭೇಟಿ ನೀಡಿ ಬಂದಿದ್ದೇನೆ. ಜಿಂದಾಲ್ ಕಂಪೆನಿ ಹಾಗೂ ಇತರರ ಜತೆ ಮಾತನಾಡಿದ್ದೇನೆ. ಕೆಲವೇ ಕ್ಷಣಗಳಲ್ಲಿ ಕೆಲಸ ಆರಂಭವಾಗಿರುವ ಬಗ್ಗೆ ಮಾಹಿತಿ ಕಳುಹಿಸಿಕೊಡುತ್ತೇನೆ” ಎಂದು ತಿಳಿಸಿದರು.
ಈ ಘಟನೆಗೆ ಯಾರನ್ನಾದರೂ ಹೊಣೆ ಮಾಡಿದ್ದೀರಾ ಎಂದು ಕೇಳಿದಾಗ, “ಅಧಿಕಾರಿಗಳನ್ನು ಹೊಣೆ ಮಾಡುವುದಕ್ಕಿಂತ ಆಣೆಕಟ್ಟು ಉಳಿಸಿ, ರೈತರನ್ನು ರಕ್ಷಣೆ ಮಾಡುವುದು ನಮ್ಮ ಆದ್ಯತೆ. ಆನಂತರ ಅಧಿಕಾರಿಗಳ ವಿಚಾರ ನೋಡೋಣ. ಮೊದಲು ಸಮಸ್ಯೆ ಬಗೆಹರಿಸುವುದು ಮುಖ್ಯ. ಇದು 70 ವರ್ಷಗಳ ಹಳೆಯ ಅಣೆಕಟ್ಟು. ಅದರ ಸರಪಳಿ ಕಟ್ ಆಗಿದೆ. ಬೇರೆ ಕಡೆಗಳಲ್ಲಿ ಎರಡು ಅವಕಾಶವಿರುತ್ತದೆ. ರೈತರಿಗೆ ನೀರು ಉಳಿಸುವುದಕ್ಕಾಗಿ ಗೇಟ್ ಹಾಕಲು ಪ್ರಯತ್ನ ಮಾಡುತ್ತಿದ್ದೇವೆ. ಅಣೆಕಟ್ಟಿನಲ್ಲಿ ನೀರು ಕಡಿಮೆಯಾಗದ ಹೊರತು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ನೀರು ಹರಿಯಲಿದೆ. ದ್ವಿಗುಣ ಸಿಬ್ಬಂದಿ ನಿಯೋಜಿಸಿ ಹಗಲು ರಾತ್ರಿಯಿಡಿ ತ್ವರಿತಗತಿಯಲ್ಲಿ ಗೇಟ್ ಸಿದ್ಧಪಡಿಸಲಾಗುತ್ತಿದೆ” ಎಂದು ತಿಳಿಸಿದರು.
ಕೆಆರ್ ಎಸ್ ನಲ್ಲೂ ಸಮಸ್ಯೆಯಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಕೇಳಿದಾಗ, “ಕುಮಾರಸ್ವಾಮಿಗೆ ರಾಜಕಾರಣ ಮಾತನಾಡುವುದು ಬಿಟ್ಟು ಬೇರೆ ಏನು ಗೊತ್ತು? ಕುಮಾರಸ್ವಾಮಿಗೆ ಕೆಆರ್ ಎಸ್ ನಲ್ಲಿ ಏನು ಸಮಸ್ಯೆಯಿದೆ? ಎಲ್ಲಾ ಅಣೆಕಟ್ಟುಗಳ ಸುರಕ್ಷತೆಗೆ ಸಮಿತಿ ರಚಿಸಿ ಅಣೆಕಟ್ಟುಗಳ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಲಾಗಿದೆ. ಯಾವುದೇ ರೈತರನ್ನು ಗಾಬರಿಪಡಿಸುವ ಅಗತ್ಯವಿಲ್ಲ” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ