*ಗೃಹಲಕ್ಷ್ಮೀ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ ಬೆಳಗಾವಿ ಅಜ್ಜಿ*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಮನೆಯ ಯಜಮಾನಿಯರಿಗೆ ಜಾರಿ ಮಾಡಿರುವ ಗೃಹಲಕ್ಷ್ಮೀ ಯೋಜನೆಯಿಂದಾಗಿ ಸಾಕಷ್ಟು ಮಹಿಳೆಯರಿಗೆ ನೆರವಾಗಿದೆ. ಹಲವು ಮಹಿಳೆಯರು ಗೃಹಲಕ್ಷ್ಮೀ ಯೋಜನೆ ಹಣದಿಂದ ಫ್ರಿಡ್ಜ್, ವಾಷಿಂಗ್ ಮಷಿನ್, ಟಿವಿಗಳನ್ನು ಖರೀದಿಸಿದ್ದರೆ ಇನ್ನು ಹಲವು ಮಹಿಳೆಯರು ಆ ಹಣದಿಂದ ಮಕ್ಕಳ ವಿದ್ಯಾಭ್ಯಾಸ, ಪಠ್ಯಪುಸ್ತಕ ಖರೀದಿ, ಅಗತ್ಯ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆ ಹಲವು ಮಹಿಳೆಯರ ಬದುಕಿಗೆ ನೆರವಾಗಿದೆ.
ಇಲ್ಲೋರ್ವ ಮಹಿಳೆ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹಬ್ಬದ ಊಟ ಹಾಕಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಜ್ಜಿ ಅಕ್ಕಾತಾಯಿ ಲಂಗೋಟಿ ಎಂಬ ಹಿರಿಯ ಮಹಿಳೆ ಗೃಹಲಕ್ಷ್ಮೀ ಹಣದ ಸಂತಸಗೊಂಡಿದ್ದು, ಊರಿಗೆಲ್ಲ ಹೋಳಿಗೆ ಊಟ ಹಾಕಿಸಿ ಸಂತಸ ಹಂಚಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಿಂದ ಪ್ರತಿ ತಿಂಗಳು ಮಹಿಳೆಯರಿಗೆ 2 ಸಾವಿರ ರೂಪಾಯಿ ಹಣ ನೀಡಲಾಗುತ್ತಿದೆ. ಇದರಿಂದ ಬಹಳಷ್ಟು ಅನುಕೂಲವಾಗಿದೆ. ರಾಜಕೀಯವಾಗಿ ಸಿದ್ದರಾಮಯ್ಯ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದೇನೆ. ಐದು ಜನ ಮುತ್ತೈದೆಯರಿಗೆ ಉಡಿ ತುಂಬಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬೆಳೆಯಬೇಕು ಎಂದು ಅಜ್ಜಿ ಹಾರೈಸಿದ್ದಾರೆ. ಅಜ್ಜಿ ಅಕ್ಕತಾಯಿ ಕಾರ್ಯಕ್ಕೆ ಇಡೀ ಊರಿಗೆ ಊರೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಗ್ರಾಮದ ಮಹಿಳೆಯರು ಅಜ್ಜಿಗೆ ಸಾಥ್ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ