*ಸ್ಥಿರಾಸ್ತಿ ನೋಂದಣಿಗೆ ‘ಆಧಾರ್’ ದೃಢೀಕರಣ: ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಚಾಲನೆ*
ಪ್ರಗತಿವಾಹಿನಿ ಸುದ್ದಿ: ಇನ್ನು ಮುಂದೆ ಸ್ಥಿರಾಸ್ತಿ ಸೇರಿದಂತೆ ದಸ್ತಾವೇಜುಗಳ ನೋಂದಣಿಗೆ ಆಧಾರ್ ದೃಢೀಕರಣ ಅತ್ಯಗತ್ಯವಾಗಿದೆ. ಆಧಾರ್ ದೃಢೀಕರಣದಿಂದ ಆಸ್ತಿ ನೋಂದಣಿಯಲ್ಲಿನ ಲೋಪದೋಷ ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಸ್ಥಿರಾಸ್ತಿಗಳ ನೋಂದಣಿ ಸಂದರ್ಭದಲ್ಲಿ ಆಧಾರ್ ಧೃಡೀಕರಣ ಪಡೆಯವ ಪ್ರಕ್ರಿಯೆಗೆ ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ(ಆ.31) ಅವರು ಸ್ವತಃ ಚಾಲನೆ ನೀಡಿ ಮಾತನಾಡಿದರು.
ಆಸ್ತಿ ನೋಂದಣಿ ಮಾಡುವಾಗ ಆಧಾರ್ ದೃಢೀಕರಣವು ಸಮ್ಮತಿ ಆಧಾರಿತವಾಗಿರುವುದರಿಂದ ಸಾರ್ವಜನಿಕರು ನಿಗದಿತ ನಮೂನೆಯಲ್ಲಿ ಸಮ್ಮತಿಯನದನು ನೀಡಬೇಕಾಗುತ್ತದೆ. ದೃಢೀಕರಣಕ್ಕಾಗಿ 30 ಸೆಕೆಂಡ್ ಗಳಲ್ಲಿ ಓಟಿಪಿ ಬರುವುದರಿಂದ ಯಾವುದೇ ರೀತಿಯ ಅನಾನುಕೂಲ ಆಗುವುದಿಲ್ಲ.
ನೋಂದಣಿ ಸಂದರ್ಭದಲ್ಲಿ ಉಂಟಾಗಬಹುದಾದ ಅಕ್ರಮ ಅಥವಾ ಲೋಪದೋಷ ತಡೆಗಟ್ಟಲು ತಂತ್ರಜ್ಞಾನವನ್ನು ಬಳಸಿಕೊಂಡು ಆಧಾರ್ ದೃಢೀಕರಣ ಮಾಡಲಾಗುತ್ತದೆ. ಸಾರ್ವಜನಿಕರು ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾ ನೋಂದಣಾಧಿಕಾರಿಗಳಾದ ಮಹಾಂತೇಶ ಪಟಾತರ ಅವರು, ಆಸ್ತಿ ನೋಂದಣಿ ಸಂದರ್ಭದಲ್ಲಿ ಅನಧಿಕೃತ ವ್ಯಕ್ತಿಯ ಹೆಬ್ಬೆಟ್ಟು ಅಥವಾ ಸಹಿ ಪಡೆದು ಅಕ್ರಮವಾಗಿ ನೋಂದಣಿ ಮಾಡುವುದನ್ನು ಆಧಾರ್ ದೃಢೀಕರಣದಿಂದ ತಡೆಗಟ್ಟಬಹುದು ಎಂದು ವಿವರಿಸಿದರು.
ಕಾವೇರಿ-2.0 ತಂತ್ರಾಂಶದಲ್ಲಿ ಸ್ಥಿರಾಸ್ತಿಗಳ ನೋಂದಣಿಯಲ್ಲಿ ಆಧಾರ್ ದೃಢೀಕರಣವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಆಧಾರ್ ದೃಢೀಕರಣವು ಪಕ್ಷಕಾರರಿಗೆ ಮಾತ್ರ ಅನ್ವಯಿಸುತ್ತದೆ. ಸಾಕ್ಷಿಗಳಿಗೆ ಅನ್ವಯಿಸುವುದಿಲ್ಲ. ಆಧಾರ್ ದೃಢೀಕರಣ ನಂತರ ಉಪ ನೋಂದಣಾಧಿಕಾರಿಗಳು ಡೆಮೊಗ್ರಾಫಿಕ್ ಡೇಟಾ ಪರಿಶೀಲಿಸಿ ನೋಂದಣಿ ಕಾಯ್ದೆ ಅನುಸಾರ ಕ್ರಮ ಜರುಗಿಸುತ್ತಾರೆ.
ಇದಲ್ಲದೇ ಸಮ್ಮರಿ ರಿಪೋರ್ಟ್ ನಲ್ಲಿ ಪಕ್ಷಕಾರರ ಹೆಸರು ಆಧಾರ್ ಹೆಸರಿನೊಂದಿಗೆ ತಾಳೆಯಾಗುವುದನ್ನು ಖಚಿತಪಡಿಸಿಕೊಂಡು ನೋಂದಣಿ ಪ್ರಕ್ರಯೆ ಮುಂದುವರಿಸಲಾಗುತ್ತದೆ ಎಂದು ಮಹೇಶ್ ಪಟಾತರ ವಿವರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ