ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬೆಳಗಾವಿಗೂ ಹಿಂದೂಸ್ತಾನಿ ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಕುಮಾರ ಗಂಧರ್ವರಿಂದ ಬೆಳಗಾವಿಗೆ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ತನ್ನದೇ ಆದ ಹೆಸರು ಬಂದಿದೆ. ಈಗ ಬೆಳಗಾವಿಯು ಮತ್ತೊಂದು ಹಿಂದೂಸ್ತಾನಿ ಕ್ಷೇತ್ರದ ಹೊಸ ಮನ್ವಂತರಕ್ಕೆ ಅಣಿಯಾಗಿದೆ ಎಂದರೆ ಅದು ಅತಿಶಯೋಕ್ತಿಯಲ್ಲ ಎಂದು ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ನುಡಿದರು.
ಅವರು ಬೆಳಗಾವಿಯ ಶಿವಬಸವ ನಗರದ ಎಸ್‌ಜಿಬಿಐಟಿಯ ಸಭಾಂಗಣದಲ್ಲಿ ಬೆಳಗಾವಿಯ ಹಿಂದೂಸ್ತಾನಿ ಥಾಟ್ಸ್ ಸಂಸ್ಥೆಯು ಆಯೋಜಿಸಿದ್ದ ’ನಾದಲೀಲೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ಅರವತ್ಮೂರು ಅದ್ಭುತ ಪ್ರತಿಭೆಗಳು ಈ ವೇದಿಕೆಯನ್ನು ಬಳಸಿಕೊಳ್ಳಲಿವೆ. ಚಿಕ್ಕ ಮಕ್ಕಳ ಶಾಸ್ತ್ರೀಯ ಸಂಗೀತದ ಕಲರವವು ಎಲ್ಲರ ಹೃದಯವನ್ನು ಮುಟ್ಟಲಿದೆ. ಇದು ತಂದೆ, ತಾಯಂದಿರು ಇಂದು ಮಕ್ಕಳಿಗೆ ಕೊಡಿಸುವ ಸುಸಂಸ್ಕೃತ ಸಂಸ್ಕಾರ. ಇಂತಹ ವಿದಾಯಕ ಕಾರ್ಯಕ್ರಮಗಳಿಂದ ರಾಷ್ಟ್ರವು ಸನಿಹದಲ್ಲೇ ವಿಶ್ವದ ಗುರುವಾಗಿ ನಿಲ್ಲುವುದರಲ್ಲಿ ಸಂಶಯವಿಲ್ಲವೆಂದರು.
ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ನಾಗನೂರು ಮಠದ ಉತ್ತರಾಧಿಕಾರಿಗಳಾದ ಡಾ ಸಾವಳಗೀಶ್ವರ ಮಹಾಸ್ವಾಮಿಗಳು ಬದುಕು ಮತ್ತು ಸಂಗೀತವು ಅವಿನಾಭಾವ ಸಂಬಂಧವನ್ನು ಹೊಂದಿವೆ. ನಮ್ಮ ಬದುಕನ್ನು ಬಿಟ್ಟು ಸಂಗೀತವಿಲ್ಲ. ಸಂಗೀತವನ್ನು ಬಿಟ್ಟು ನಮ್ಮ ಬದುಕಿಲ್ಲ. ಅಂತಹ ಸಂಗೀತ ಶಾಸ್ತ್ರೀಯವಾಗಿದ್ದರೆ ಬದುಕೂ ಶಾಸ್ತ್ರೀಯವಾಗುತ್ತದೆ. ಮಗುವಿದ್ದಾಗಲೇ ಮಕ್ಕಳಿಗೆ ಸಂಗೀತ ಮುಂತಾದ ಲಲಿತಕಲೆಗಳ ಸಂಸ್ಕಾರವನ್ನು ನೀಡಬೇಕು. ಇಂತಹ ಸಂಸ್ಕಾರದಿಂದ ಮನುಷ್ಯ ಶುದ್ದೀಕರಣಗೊಳ್ಳುತ್ತಾನೆ. ಉತ್ತಮ ನಾಗರೀಕನಾಗುತ್ತಾನೆ ಎಂದು ಅಭಿಪ್ರಾಯ ಪಟ್ಟರು.
ಇದಕ್ಕೂ ಮುನ್ನ ಶೇಗುಣಸಿಯ ಮಹಾಂತ ದೇವರು ಹಾಗೂ ಕಾರಂಜಿಮಠದ ಶಿವಯೋಗಿ ದೇವರು ಸಂಗೀತದ ಮಹತ್ವವನ್ನು ತಿಳಿಸಿಕೊಟ್ಟರು. ಲೋಕಾಪುರದ ಪೂಜ್ಯ ಚಂದ್ರಶೇಖರ ಸ್ವಾಮಿಗಳು ಹಾಗೂ ಎಸ್‌ಜಿಬಿಐಟಿಯ ಕಾರ್ಯಾಧ್ಯಕ್ಷರಾದ ಎಸ್. ಜಿ ಸಂಬರಗಿಮಠ ಉಪಸ್ಥಿತರಿದ್ದರು. ಬೆಂಗಳೂರಿನ ’ನಾದಪ್ರಸಂಗ’ ಸಂಸ್ಥೆಯ ಕಾರ್ಯದಶಿಗಳಾದ ಲೇಖಕಿ ನಾಗವೀಣ ಮಂಜುನಾಥ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪ್ರೊ ಎಸ್ ಎಂ ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ವೈಭವಯುತವಾಗಿ ಪಸರಿಸಿದ ’ನಾದಲೀಲೆ’ ವಿದುಷಿ ರೋಹಿಣಿ ಗಂಗಾಧರ ಅವರ ಅರವತ್ತಮೂರು ಶಿಷ್ಯರು ಎಂಟು ತಂಡಗಳಲ್ಲಿ ರಾಗ- ರಸವೈವಿಧ್ಯವುಳ್ಳ ಸದಾರಂಗ-ಅಧಾರಂಗರ ಬಂದಿಶ್‌ಗಳು, ವಚನಗಳು, ತುಳಸಿದಾಸ, ಕಬೀರ ಹಾಗೂ ಮೀರಾ ಅವರ ಭಜನ್‌ಗಳು, ಮರಾಠಿ ಅಭಂಗಗಳು, ತರಾನಾಗಳು ಹಾಡಲ್ಪಟ್ಟವು.
ಹಿಂದೂಸ್ತಾನಿ ಪದ್ಧತಿಯ ಕಿರಾಣಾ ಘರಾಣ ಪರಂಪರೆ ಮತ್ತೆ ವೈಭವೋಪೇತವಾಗಿ ಸಭಾಂಗಣದಲ್ಲಿ ಕಳೆಕಟ್ಟಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಕ್ರಮಬದ್ದ ಶೃತಿ, ಅಲಂಕಾರ, ತಾನ, ಸ್ವರಾಲಾಪನಕ್ರಮ, ಲಯಬದ್ಧತೆಯ ಹಾಡುಗಾರಿಕೆ ಎಲ್ಲರ ಗಮನ ಸೆಳೆಯಿತು. ನಲವತ್ತೆಂಟು ಶಿಷ್ಯರು ಆರರಿಂದ ಹತ್ತು ವರ್ಷದೊಳಗಿನವರಾಗಿದ್ದದ್ದು ಮತ್ತೊಂದು ವಿಶೇಷವಾಗಿತ್ತು. ಸುಮಾರು ಮೂರುವರೆ ಗಂಟೆಗಳಿಗೂ ಹೆಚ್ಚಿನ ಕಾಲ ಸಂಗೀತ ಮಾರ್ಧನಿಸಿ ಸಂಪನ್ನವಾಯಿತು.
ವಿದುಷಿ ರೋಹಿಣಿ ಗಂಗಾಧರ ಅವರಿಗೆ ಗುರುವಂದನೆ
ಮೂಲತಃ ಬಳ್ಳಾರಿಯವರಾದ ವಿದುಷಿ ರೋಹಿಣಿ ಗಂಗಾಧರ ಅವರು ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿ ಪ್ರಸ್ತುತ ಬೆಳಗಾವಿಯ ನಿವಾಸಿಯಾಗಿರುವುದು ಬೆಳಗಾವಿಯ ಭಾಗ್ಯವೆಂದು ಶಿಷ್ಯಂದಿರು ಬಣ್ಣಿಸಿದರು. ಬೆಳಗಾವಿ ನಗರ ಇಂತಹ ಕಲಾವಿದರಿಂದ ಸಂಪದ್ಭರಿತವಾಗಿದೆ. ಶಾಸ್ತ್ರೀಯ ಸಂಗೀತಕ್ಕೆ ಮಾತ್ರವಲ್ಲ, ಭಾರತೀಯ ಸಂಗೀತಕ್ಕೆ ಗುರುಗಳಾದ ರೋಹಿಣಿ ಅವರ ಕೊಡುಗೆಯನ್ನು ವಿದ್ಯಾರ್ಥಿಗಳು ಪ್ರಶಂಸಿಸಿದರು. ನಾಲ್ಕು ಸಂಪುಟಗಳಲ್ಲಿ ಆಂಗ್ಲ ಭಾಷೆಯಲ್ಲಿ ಅವರು ತಂದಿರುವ ’ಸ್ವರಕಲ್ಪ’ ಕೃತಿಗಳು ಹಿಂದೂಸ್ಥಾನಿ ಸಂಗೀತ ಶಾಸ್ತ್ರ ಜಿಜ್ಞಾಸುಗಳಿಗೆ ಕೈಪಿಡಿಯಾಗಿರುವ ಬಗೆಯನ್ನು ವಿದ್ಯಾರ್ಥಿಗಳು ಕೊಂಡಾಡಿದರು.
ಶಿಷ್ಯರಿಂದ ಪ್ರತಿಜ್ಞಾ ದೀಕ್ಷೆ
’ಭಾರತೀಯ ಸಂಗೀತವನ್ನು ಉಳಿಸುವ, ಬೆಳೆಸುವ ಜವಬ್ದಾರಿಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತೇನೆ. ಶಾಲೆ ಕಾಲೇಜುಗಳಲ್ಲಿ ಗುರು ಹಿರಿಯರು ಹೇಳಿಕೊಟ್ಟ ಪಾಠ ಹಾಗೂ ವಿದ್ಯೆಯನ್ನು ಕಷ್ಟಪಟ್ಟು ಕಲಿಯುತ್ತೇನೆ. ಗುರು ಹಿರಿಯರು ಮತ್ತು ತಂದೆ ತಾಯಿಯರನ್ನು ಸದಾ ಗೌರವಿಸುತ್ತೇನೆ. ಕಲಿತ ವಿದ್ಯೆಯನ್ನು ಸತ್ಪಾತ್ರಕ್ಕೆ ಬಳಸುತ್ತೇನೆ. ಕಲಿತಿರುವ ವಿದ್ಯೆಯನ್ನು ಇತರರಿಗೂ ಕಲಿಸುತ್ತೇನೆ. ಮನಗೆ ಮಲ್ಲಿಗೆಯಾಗುತ್ತೇನೆ. ಈ ದೇಶದ ಶಕ್ತಿಯಾಗುತ್ತೇನೆ. ಕಷ್ಟಗಳು ಬಂದರೂ ದೃತಿಗೆಡದೆ ತಾಳ್ಮೆಯಿಂದ ಗೆಲ್ಲುತ್ತೇನೆ. ಮನುಕುಲದಲ್ಲಿ ಬೇಧವೆಣಿಸದೆ ಎಲ್ಲರನ್ನು ಪ್ರೀತಿಸುತ್ತೇನೆ. ಈ ದೇಶದ ಉತ್ತಮ ಪ್ರಜೆಯಾಗಿ ರೂಪಗೊಳ್ಳುತ್ತೇನೆ’ ಎಂದು ಘಟಿಕೋತ್ಸವ ಪೂರೈಸಿದ ಗುರುಮಾತೆಯಾದ ವಿದುಷಿ ರೋಹಿಣಿ ಗಂಗಾಧರ ಅವರು ವಿದ್ಯಾರ್ಥಿಗಳಿಂದ ಪ್ರತಿಜ್ಞೆ ಪಡೆದುಕೊಂಡರು.
ರಾಷ್ಟ್ರ ಪ್ರಶಸ್ತಿ ವಿಜೇತ ಸ್ವರ ಸಾಧಕನಿಗೆ ಸನ್ಮಾನ
ಕಳೆದ ವರ್ಷ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಾಲಯವು ನೀಡಿದ ಮತ್ತು ಭಾರತದ ರಾಷ್ಟ್ರಪತಿಗಳು ಹಾಗೂ ಪ್ರಧಾನಿಗಳಿಂದ ’ಬಾಲಶಕ್ತಿ’ ಪುರಸ್ಕಾರ ಸ್ವೀಕರಿಸಿದ ಬೆಂಗಳೂರಿನ ಎಂ. ವಿನಾಯಕ ರೋಹಿಣಿ ಗಂಗಾಧರ ಅವರ ಶಿಷ್ಯನಾಗಿದ್ದುದರಿಂದ ಅವರಿಗೆ ಶಿಷ್ಯ ವೃಂದವು ಎಂ. ವಿನಾಯಕನಿಗೆ ಸನ್ಮಾನವನ್ನು ಏರ್ಪಡಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ