
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಜ್ಯದಲ್ಲಿ ಸರಕಾರ ಬೀಳಿಸುವುದರಲ್ಲಿ, ಕಟ್ಟುವುದರಲ್ಲಿ ಬೆಳಗಾವಿ ಜೊತೆ ಪೈಪೋಟಿಯಲ್ಲಿರುವುದು ಬಳ್ಳಾರಿ. ಈ ಎರಡೂ ಜಿಲ್ಲೆಗಳ ರಾಜಕೀಯ ರಾಜ್ಯವನ್ನಾಳುವ ದೊರೆಯ ನಿದ್ದೆಯನ್ನೇ ಹಾಳು ಮಾಡುತ್ತವೆ.
ಈ ಎರಡೂ ಜಿಲ್ಲೆಗಳ ರಾಜಕಾರಣಿಗಳು ಮನಸ್ಸು ಮಾಡಿದರೆ ಸರಕಾರ ಕೆಡವಲೂ ಬಹುದು, ಹೊಸ ಸರಕಾರ ಕಟ್ಟಲೂ ಬಹುದು. ಹಿಂದಿನ ಸಮ್ಮಿಶ್ರ ಸರಕಾರ ಕೆಡವೀ ಬಿಜೆಪಿ ಸರಕಾರ ತರಲು ಮುಖ್ಯ ಕಾರಣವಾಗಿದ್ದು ಬೆಳಗಾವಿ ರಾಜಕೀಯ. ಈ ಹಿಂದೆ 2-3 ಬಾರಿ ಬಳ್ಳಾರಿ ರಾಜಕೀಯವೂ ರಾಜ್ಯ ಸರಕಾರವನ್ನು ಅಲ್ಲಾಡಿಸಿತ್ತು.
ತಂತಿ ಮೇಲಿನ ನಡಿಗೆ
ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮದು ತಂತಿ ಮೇಲಿನ ನಡಿಗೆ ಎಂದಿದ್ದಾರೆ. ಅವರ ಮಾತು ರಾಜ್ಯ ರಾಜಕೀಯದಲ್ಲಿ ಹಲವು ರೀತಿಯ ವ್ಯಾಖ್ಯಾನಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳ ಕಾಟಕ್ಕಿಂತ ಹೆಚ್ಚಾಗಿ ಪಕ್ಷದೊಳಗಿನ ರಾಜಕೀಯ ಅವರನ್ನು ಹೆಚ್ಚಾಗಿ ಕಾಡಿಸುತ್ತಿರುವಂತಿದೆ.
ಕೇಂದ್ರ ಸರಕಾರ ಒಂದೆಡೆ ಸತಾಯಿಸುತ್ತಿದ್ದರೆ, ಯಾವುದೇ ನಿರ್ಧಾರ ತೆಗೆದುಕೊಂಡರೂ ಒಬ್ಬರಲ್ಲ ಒಬ್ಬರ ವಿರೋಧ ಕಟ್ಟಿಕೊಳ್ಳಬೇಕಾಗಿದೆ. ಹಾಗಾಗಿಯೇ ಒಂದೊಂದು ನಿರ್ಧಾರ ತೆಗೆದುಕೊಳ್ಳಬೇಕಾದರೂ 10 ಬಾರಿ ಯೋಚಿಸುತ್ತಿದ್ದೇನೆ ಎಂದಿದ್ದಾರೆ.
ಇದೇ ಅವರನ್ನು ಕಟ್ಟಿ ಹಾಕಿದೆ. 2-3 ತಿಂಗಳಲ್ಲಿ ರಾಜ್ಯದ ಆಡಳಿತದಲ್ಲಿ ಗುರುತಿಸುವಂತಹ ಬದಲಾವಣೆ ತರುತ್ತೇನೆ ಎಂದು ಹೇಳಿ ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತಿದ್ದ ಯಡಿಯೂರಪ್ಪ ಈಗ ಏನೂ ಮಾಡಲಾಗದೆ ಕಾಲಹರಣ ಮಾಡುವ ಸ್ಥಿತಿಗೆ ತಲುಪಿದ್ದಾರೆ.
ಜಿಲ್ಲಾ ವಿಭಜನೆ
ಇದೀಗ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಲು ಮುಂದಾದ ಯಡಿಯೂರಪ್ಪ ಬಳ್ಳಾರಿ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅನರ್ಹ ಶಾಸಕ ಆನಂದ ಸಿಂಗ್ ಸಮಾಧಾನ ಮಾಡಲೆಂದು ಹೋಗಿ ರೆಡ್ಡಿ ಸಹೋದರರ ಆಕ್ರೋಶಕ್ಕೆ ಒಳಗಾಗಿದ್ದಾರೆ. ಜಿಲ್ಲೆಯನ್ನು ಒಡೆಯಲು ಹೋದರೆ ಸರಕಾರವನ್ನೇ ಉರುಳಿಸುತ್ತೇವೆ ಎನ್ನುವ ಅರ್ಥದಲ್ಲಿ ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಸಚಿವಸಂಪುಟದ ಸದಸ್ಯರಾಗಿರುವ ಶ್ರೀರಾಮುಲು ರೆಡ್ಡಿ ಸಹೋದರರ ನಿಲುವಿಗೆ ಬದ್ದರಾಗಿರುತ್ತಾರೆ. ಹಾಗಾಗಿ ಯಡಿಯೂರಪ್ಪ ಈಗ ಬಳ್ಳಾರಿ ವಿಭಜನೆ ನಿರ್ಧಾರದಿಂದ ಹಿಂದೆ ಸರಿಯಲೂ ಆಗದೆ ಬಿಸಿ ತುಪ್ಪ ಬಾಯಿಗೆ ಹಾಕಿಕೊಂಡವರಂತಾಗಿದ್ದಾರೆ. ಎಲ್ಲರನ್ನೂ ಕರೆದು ಮಾತನಾಡುತ್ತೇನೆ ಎಂದು ಅವರು ಹೇಳಿದ್ದರೂ ರಾಜಿಗೆ ಬಗ್ಗುವವರಲ್ಲ ಬಳ್ಳಾರಿ ಶಾಸಕರು ಎನ್ನುವುದು ಅವರಿಗೂ ಗೊತ್ತಿದೆ.
ಬೆಳಗಾವಿಯವರು ಬಿಟ್ಟಾರೇ?
ಯಡಿಯೂರಪ್ಪ ಬಳ್ಳಾರಿಯನ್ನು ಮಾತ್ರ ವಿಭಜಿಸಲು ಮುಂದಾದರೆ ಬೆಳಗಾವಿ ರಾಜಕಾರಣಿಗಳು ಸುಮ್ಮನೇ ಬಿಟ್ಟಾರೆಯೇ? ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆ ಮಾಡಬೇಕೆನ್ನುವ ಕೂಗು ಹಲವು ವರ್ಷದಿಂದ ಇದೆ. ಚಿಕ್ಕೋಡಿ ಜಿಲ್ಲೆ ಮಾಡಲು ಹೋದರೆ ಗೋಕಾಕದ ಜಾರಕಿಹೊಳಿ ಸಹೋದರರು ಬಿಡುತ್ತಾರೆಯೇ? ಅವರು ಮತ್ತೊಮ್ಮೆ ಸರಕಾರ ಉರುಳಿಸಲು ಮುಂದಾಗಬಹುದು.
ಬೆಳಗಾವಿ ಜಿಲ್ಲೆಯನ್ನು ಯಾವು ರೀತಿಯಿಂದ ಒಡೆಯಲು ಮುಂದಾದರೂ ಅದು ಬೆಂಕಿ ಹೊತ್ತುವ ಮಟ್ಟಕ್ಕೆ ಹೋಗುವ ಅಪಾಯವಿದೆ. ಎಲ್ಲರನ್ನೂ ಸಮಾಧಾನ ಮಾಡಿ ಜಿಲ್ಲೆ ಒಡೆಯುವುದಕ್ಕೆ ಸಾಧ್ಯವೇ ಇಲ್ಲದಂತಹ ಸ್ಥಿತಿ ಇದೆ.
ಒಟ್ಟಾರೆ ಯಡಿಯೂರಪ್ಪ ಈಗ ಜಿಲ್ಲಾ ವಿಭಜನೆಗೆ ಕೈಹಾಕಿದರೆ ಹಾವಿನ ಹುತ್ತಕ್ಕೆ ಕೈಹಾಕಿದಂತಾಗುತ್ತದೆ. ಹಾಗಾಗಿ ಆ ವಿಷಯವನ್ನೇ ಸಧ್ಯಕ್ಕೆ ಬದಿಗೆ ಸರಿಸುತ್ತಾರೋ… ಆನಂದ ಸಿಂಗ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ರೆಡ್ಡಿ ಸಹೋದರರ ವಿರೋಧ ಎದುರಿಸುತ್ತಾರೋ ಎನ್ನುವುದು ಪ್ರಶ್ನೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ