Education

*ಬೆಳಗಾವಿ ವಿಭಾಗ ಮಟ್ಟದ ಪ್ರೌ. ಶಾ. ಚಿತ್ರಕಲಾ ಶಿಕ್ಷಕರ ಐದು ದಿನಗಳ ಕಲಾಕೃತಿ ರಚನಾ ಶಿಬಿರ ನಾಳೆ ಆರಂಭ*

ಪ್ರಗತಿವಾಹಿನಿ ಸುದ್ದಿ; ಧಾರವಾಡ: ನಗರದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಆಶ್ರಯದಲ್ಲಿ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗ ಮಟ್ಟದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರ 5 ದಿನಗಳ ಕಲಾಕೃತಿ ರಚನಾ ಶಿಬಿರ ಸೋಮವಾರ (ಸೆ.23 ರಂದು) ಮುಂಜಾನೆ 11 ಗಂಟೆಗೆ ಇಲ್ಲಿನ ಡಾ. ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಬಳಿ ಇರುವ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಆರಂಭಗೊಳ್ಳಲಿದೆ.

ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಈ ಶಿಬಿರವನ್ನು ಉದ್ಘಾಟಿಸಲಿದ್ದು, ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಅಧ್ಯಕ್ಷತೆವಹಿಸುವರು. ಆಯುಕ್ತರ ಕಚೇರಿಯ ಆಡಳಿತ ಡಿಡಿಪಿಐ ಸಂಜೀವ ಬಿಂಗೇರಿ, ಡಯಟ್ ಪ್ರಿನ್ಸಿಪಾಲ್ ಜಯಶ್ರೀ ಕಾರೇಕರ, ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ. ಬಡಿಗೇರ, ಸರಕಾರಿ ಚಿತ್ರಕಲಾ ಕಾಲೇಜಿನ ಪ್ರನ್ಸಿಪಾಲ್ ಡಾ. ಬಸವರಾಜ ಕುರಿಯವರ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಶೈಕ್ಷಣಿಕಬಲವರ್ಧನೆ ವರ್ಷ 2024-25ನೇ ಶೈಕ್ಷಣಿಕ ವರ್ಷದ ಅಂಗವಾಗಿ ‘ನಮ್ಮ ಶಾಲೆ-ನಮ್ಮ ಜವಾಬ್ದಾರಿ’ ಎಂಬ ಪ್ರಧಾನ ಆಶಯದ ಅಡಿಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ವಿಕಾಸಕ್ಕೆ ಸಂಬಂಧಿಸಿದಂತೆ ವಿಜಯಪೂರ, ಬಾಗಲಕೋಟ, ಬೆಳಗಾವಿ, ಉತ್ತರಕನ್ನಡ, ಧಾರವಾಡ, ಹಾವೇರಿ, ಗದಗ, ಶಿರಸಿ ಹಾಗೂ ಚಿಕ್ಕೋಡಿ ಜಿಲ್ಲೆಗಳ 50 ಜನ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರು ತಮ್ಮ ಕಲಾಕೃತಿಗಳನ್ನು ಸಿದ್ಧಪಡಿಸಲಿದ್ದಾರೆ.

ಈ ಶಿಬಿರದಲ್ಲಿ ಪಾಲ್ಗೊಳ್ಳುವ ಚಿತ್ರಕಲಾ ಶಿಕ್ಷಕರಿಗೆ 5 ದಿನಗಳ ಕಾಲ ವಸತಿ, ಉಪಹಾರ, ಭೋಜನದ ವ್ಯವಸ್ಥೆಯನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯೇ ಮಾಡುತ್ತಿದ್ದು, ಚಿತ್ರಕಲಾ ಕೃತಿಗಳ ರಚನೆಗೆ ಪೂರಕವಾದ ಎಲ್ಲಾ ಪರಿಕರಗಳನ್ನೂ ಸಹ ಒದಗಿಸಲಿದೆ ಎಂದು ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button